Home ಕ್ರೈಂ ನ್ಯೂಸ್ ಮಲಪ್ಪುರಂ ಅಪ್ರಾಪ್ತ ಬಾಲಕಿಗೆ ಕಿಡ್ನಿ ಕಾಯಿಲೆ ಪ್ರಕರಣ: ಫೇರ್‌ನೆಸ್ ಕ್ರೀಮ್ ಬಳಕೆಯಿಂದ ತಾನೂ ಗಂಭೀರ ಅನಾರೋಗ್ಯ ಎದುರಿಸಿದ್ದೆ ಎಂದ ಗಾಯಕ ಸಲೀಂ ಕೊಡತ್ತೂರ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಲಪ್ಪುರಂ ಅಪ್ರಾಪ್ತ ಬಾಲಕಿಗೆ ಕಿಡ್ನಿ ಕಾಯಿಲೆ ಪ್ರಕರಣ: ಫೇರ್‌ನೆಸ್ ಕ್ರೀಮ್ ಬಳಕೆಯಿಂದ ತಾನೂ ಗಂಭೀರ ಅನಾರೋಗ್ಯ ಎದುರಿಸಿದ್ದೆ ಎಂದ ಗಾಯಕ ಸಲೀಂ ಕೊಡತ್ತೂರ್!

Share
ಫೇರ್‌ನೆಸ್ ಕ್ರೀಮ್
Share

ನವದೆಹಲಿ: ಕೇರಳದ ಮಲಪ್ಪುರಂನಲ್ಲಿ 17 ವರ್ಷದ ಬಾಲಕಿಯೊಬ್ಬಳು ಸೌಂದರ್ಯವರ್ಧಕ (ಫೇರ್‌ನೆಸ್ ಕ್ರೀಮ್) ಬಳಸಿ ಕಿಡ್ನಿ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ ಘಟನೆ ಬೆನ್ನಲ್ಲೇ, ಖ್ಯಾತ ಗಾಯಕ ಹಾಗೂ ಸಂಗೀತಗಾರ ಸಲೀಂ ಕೊಡತ್ತೂರ್ ತಮಗೂ ವರ್ಷಗಳ ಹಿಂದೆ ಇದೇ ರೀತಿಯ ಅನುಭವವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಶಿಫಾರಸು ಮಾಡಿದ ಫೇರ್‌ನೆಸ್ ಕ್ರೀಮ್ ಬಳಸಿದ್ದರಿಂದ ತೀವ್ರ ಮೂತ್ರದ ಸೋಂಕು, ಕಾಲು ಮತ್ತು ಕಣ್ಣಿನ್ರೆಪ್ಪೆಗಳಲ್ಲಿ ಬಾತುಕೊಳ್ಳುವಿಕೆ ಹಾಗೂ ರೋಗನಿರೋಧಕ ಶಕ್ತಿ ಕುಸಿತದಂತಹ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಅವರು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.

ಮಲಪ್ಪುರಂನ ಆಸ್ಟರ್ ಮಿಮ್ಸ್ ಮದರ್ ಆಸ್ಪತ್ರೆಯ ವೈದ್ಯರು ಬಾಲಕಿಯ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ, ಸಲೀಂ ಕೊಡತ್ತೂರ್ ತಮ್ಮ ಹಿಂದಿನ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಪ್ರಭಾವಿಗಳ ಪ್ರಚಾರದ ವೀಡಿಯೊಗಳನ್ನು ನೋಡಿ ಆನ್ಲೈನ್ ಮೂಲಕ ಕ್ರೀಮ್ ಆರ್ಡರ್ ಮಾಡಿದ್ದ ಬಾಲಕಿಗೆ ತೀವ್ರ ರಕ್ತದೊತ್ತಡ ಕುಸಿತ, ಸುಸ್ತು ಹಾಗೂ ಕಾಲುಗಳಲ್ಲಿ ಬಾಳತೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯ ರಕ್ತದಲ್ಲಿ ಮತ್ತು ಬಳಸಿದ ಕ್ರೀಮ್‌ನಲ್ಲಿ ಅಪಾಯಕಾರಿ ಮಟ್ಟದಲ್ಲಿ ಪಾದರಸ ಅಂಶ ಪತ್ತೆಯಾಗಿರುವುದು ವೈದ್ಯರಿಂದ ದೃಢಪಟ್ಟಿತ್ತು.

ಗಾಯಕ ಸಲೀಂ ಅನುಭವ: ಕ್ರೀಮ್ ಬಳಸಿದ ಕೆಲವೇ ತಿಂಗಳುಗಳಲ್ಲಿ ಮೈಯಲ್ಲಿ ಆಲ್ಬುಮಿನ್ (Albumin) ಪ್ರೊಟೀನ್ ನಷ್ಟಗೊಂಡು ಮೂತ್ರಪಿಂಡ ವೈಫಲ್ಯದ ಹಂತಕ್ಕೆ ತಲುಪಿದ್ದೆ ಎಂದು ಸಲೀಂ ಕೊಡತ್ತೂರ್ ತಿಳಿಸಿದ್ದಾರೆ. ಬಯಾಪ್ಸಿ ಪರೀಕ್ಷೆಯಲ್ಲಿ ತನಗೂ ‘ಮೆಂಬ್ರಾನಸ್ ನೆಫ್ರೋಪತಿ’ ಇರುವುದು ಪತ್ತೆಯಾಗಿದ್ದು, ತಿಂಗಳುಗಟ್ಟಲೆ ಚಿಕಿತ್ಸೆ ಮತ್ತು ಆಸ್ಪತ್ರೆ ವಾಸದ ಬಳಿಕ ಚೇತರಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಆರ್ಥಿಕ ಹಾಗೂ ಮಾನಸಿಕ ನಷ್ಟ: ಈ ಅನಾರೋಗ್ಯವು ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರವಾಗಿ ಕುಗ್ಗಿಸಿತ್ತು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಂದೂಡುವಂತೆ ಮಾಡಿ ಆರ್ಥಿಕ ನಷ್ಟಕ್ಕೂ ಕಾರಣವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಕಿಯಿಂದ ಕಾನೂನು ಹೋರಾಟ: ಉತ್ಪನ್ನದ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಬಾಲಕಿ, ಕ್ರೀಮ್ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಉತ್ಪನ್ನದ ಪ್ರಚಾರ ಮಾಡಿದ್ದ ಸಾಮಾಜಿಕ ಜಾಲತಾಣದ ಪೇಜ್ ಈಗ ಡಿಲೀಟ್ ಆಗಿದ್ದು, ಗ್ರಾಹಕರ ನ್ಯಾಯಾಲಯದಲ್ಲೂ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅಪಾಯಕಾರಿ ಪಾದರಸದ ಅಂಶ: ಪರೀಕ್ಷೆಗೆ ಒಳಪಡಿಸಿದ ಕ್ರೀಮ್ ಮಾದರಿಯಲ್ಲಿ 12,500 ಪಿಪಿಎಂಗೂ ಅಧಿಕ ಪಾದರಸವಿರುವುದು ಕಂಡುಬಂದಿದ್ದು, ಇದು ಅನುಮತಿಸಲಾದ 1 ಪಿಪಿಎಂ ಮಿತಿಗಿಂತ ಸಾವಿರಾರು ಪಟ್ಟು ಹೆಚ್ಚಾಗಿದೆ.

ಸೌಂದರ್ಯ ವರ್ಧಕಗಳ ಅತಿಮಾನುಷ ಪ್ರಚಾರಗಳಿಗೆ ಮರುಳಾಗಿ ಇಂತಹ ಅಪಾಯಕಾರಿ ರಾಸಾಯನಿಕಯುಕ್ತ ಕ್ರೀಮ್‌ಗಳನ್ನು ಬಳಸುವ ಮುನ್ನ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ವೈದ್ಯರು ಹಾಗೂ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

Share

Recent Posts

Recent Comments

No comments to show.
Related Articles