SUDDIKSHANA KANNADA NEWS/ DAVANAGERE/ DATE:14_07_2025
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪರವಾದ ದ್ಯೋತಕವಾಗಿ ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆಯ ಲೋಕಾರ್ಪಣೆ ಸಾಕಾರಗೊಂಡಿತು.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ನಾಡಿನ ಮೂಲೆ ಮೂಲೆಯಲ್ಲಿರುವ ಸಿಗಂದೂರು ದೇವಿಯ ಭಕ್ತರು ಹಾಗೂ ಸುತ್ತಲಿನ ಗ್ರಾಮಗಳ ಜನರೆಲ್ಲರ ಬಹುದಿನಗಳ ಕನಸು ನನಸಾಯಿತು.
ಭಗೀರಥ ಪ್ರಯತ್ನಕ್ಕೆ ಇನ್ನೊಂದು ಹೆಸರು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪನವರು, ಅದನ್ನು ಅನುಸರಿಸಿ ಯೋಜನೆಗಳನ್ನು ಸಾಫಲ್ಯಗೊಳಿಸಿದ ಸಾಧಕ ಸಂಸದ ಬಿ. ವೈ. ರಾಘವೇಂದ್ರ ಅವರು, ಇದರ ಪ್ರತೀಕವಾಗಿ ಶತಮಾನಗಳು ಕಳೆದರೂ ಜನರ ಹೃದಯದಲ್ಲಿ ನೆಲೆ ನಿಲ್ಲುವ ಈ ಮಹತ್ವದ ಯೋಜನೆ ಸಾಕಾರಗೊಂಡ ಕ್ಷಣ ನೆರೆದಿದ್ದ ಜನರಲ್ಲಿ ಧನ್ಯತೆಯ ಭಾವ ಮೂಡಿಸಿತು ಎಂದು ಬಿಜೆಪಿ ರಾಜ್ಯ ಘಟಕದ
ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಕಾಗೂಡು ತಿಮ್ಮಪ್ಪ, ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಶಾಸಕ ಸಿಮೆಂಟ್ ಮಂಜು, ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಧನಂಜಯ ಸರ್ಜಿ, ಹೇಮಲತಾ ನಾಯಕ್, ಮಾಜಿ ಶಾಸಕ ಅಶೋಕ್ ನಾಯಕ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ್ ಅವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ರೈತ ಮುಖಂಡರು, ಕಾರ್ಯಕರ್ತರು, ಸಿಗಂದೂರು ಚೌಡೇಶ್ವರಿ ದೇವಿಯ ಭಕ್ತರು ಹಾಗೂ ಸಾರ್ವಜನಿಕ ಬಂಧುಗಳು ಭಾಗವಹಿಸಿದ್ದರು.