SUDDIKSHANA KANNADA NEWS/ DAVANAGERE/ DATE:17-12-2024
ದಾವಣಗೆರೆ: ಜಗಳೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಕೆಎಸ್ ಆರ್ ಟಿಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.
ಜಗಳೂರಿನಿಂದ ಪಾದಯಾತ್ರೆ ಮೂಲಕ ಹೊರಟ ಪ್ರತಿಭಟನಾಕಾರರು ದೇವಿಕೆರೆ, ಬಿಳಿಚೋಡು, ಅಣಜಿ, ಮೆಳ್ಳಕಟ್ಟೆ, ಎಲೆಬೇತೂರು ಮುಖಾಂತರ ದಾವಣಗೆರೆ ನಗರದ ಹಳ್ಳಿಮರವೃತ್ತ,ಗಾಂಧಿ ವೃತ್ತದ ಮೂಲಕ ಸರಕಾರ ,ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ,ಕೆಎಎಸ್ ಆರ್ ಟಿಸಿ ಡಿಪೋ ಮುಂಭಾಗ ಜಮಾಯಿಸಿದರು.
ಪ್ರಗತಿಪರ ಹೊರಾಟಗಾರ ವಕೀಲ ಆರ್.ಓಬಳೇಶ್ ಮಾತನಾಡಿ,’ಜಗಳೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಪೋ ಸ್ಥಾಪಿಸಲು ಒತ್ತಾಯಿಸಿ ದಶಕಗಳಿಂದ ನಿರಂತರ ಹೊರಾಟ ನಡೆಸುತ್ತಾ ಬಂದಿದ್ದರೂ ಕೇವಲ ಪಟ್ಟಣದ 51 ಸರ್ವೆ ನಂಬರ್ ನಲ್ಲಿ ಜಾಗನಿಗದಿಮಾಡುವ ಮೂಲಕ ಪ್ರಸ್ತಾವನೆಗೆ ಸೀಮಿತವಾಗಿದೆ.ಕೂಡಲೇ ಸರ್ಕಾರಿ ಬಸ್ ಡಿಪೋ ನಿರ್ಮಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಗತಿಪರ ಹೊರಾಟಗಾರ ಧನ್ಯಕುಮಾರ್ ಎಚ್.ಎಂ ಹೊಳೆ ಮಾತನಾಡಿ,’ತಾಲೂಕಿನ ಬಹುತೇಕ ಹಳ್ಳಿಗಳು ಸರ್ಕಾರಿ ಬಸ್ ಗಳೇ ಕಂಡಿಲ್ಲ,ಹೊರಾಟದ ಫಲವಾಗಿ ಸಂಚರಿಸುವ ಬಸ್ ಗಳು ತಡೆರಹಿತ ಬಸ್ ಗಳಿಲ್ಲದೆೇ ಜಗಳೂರು ದಾವಣಗೆರೆ ಮಾರ್ಗದಲ್ಲಿ ಓಡುತ್ತಿವೆ.ಮನವಿಯಲ್ಲಿನ ಬೇಡಿಕೆಯಂತೆ ವಾರದೊಳಗೆ ಗ್ರಾಮೀಣ ಭಾಗಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕರುನಾಡ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ ಮಾತನಾಡಿ,ಕಳೆದ ಆಡಳಿತ ಸರ್ಕಾರಗಳು ಜಗಳೂರಿನಲ್ಲಿ ಬಸ್ ಡಿಪೋ ಸ್ಥಾಪನೆ ಶಂಕುಸ್ಥಾಪನೆಗೆ ದಿನಾಂಕ ನಿಗದಿಗೊಳಿಸಿ ಕೆಲ ಪಟ್ಟಭದ್ರ ಹಿತಾಸಕ್ತಿಗಳ
ಒತ್ತಡಕ್ಕೆ ಮಣಿದು ಅಧಿಕಾರಿಗಳು ನಂತರ ಕಾರ್ಯಕ್ರಮ ರದ್ದುಪಡಿಸಿದ್ದರು.ಇಂದಿನ ಪಾದಯಾತ್ರೆ ಹೊರಾಟ ಅಧಿವೇಶನದಲ್ಲಿ ಧ್ವನಿಯಾಗಬೇಕು.ಸಚಿವರು,ಶಾಸಕರು ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಎಐವೈಎಫ್ ಮುಖಂಡ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,’ಬರಪೀಡಿತ ತಾಲೂಕಿನ ಬಗ್ಗೆ ಜಿಲ್ಲೆಯ ಅಧಿಕಾರಿಗಳ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರಿ ಬಸ್ ಸಾರಿಗೆ ಸೇವೆಯಿಂದ ವಂಚಿತರಾಗಿದ್ದಾರೆ.ಸರ್ಕಾರಿ ಬಸ್ ಡಿಪೋವಿಲ್ಲದೆ ಸರ್ಕಾರದ ಮಹತ್ತರ ಯೋಜನೆ ಶಕ್ತಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ಮರೀಚಿಕೆಯಾಗಿದೆ.ವಿದ್ಯಾರ್ಥಿಗಳು ಪ್ರತಿನಿತ್ಯ ಆಟೋ,ಗೂಡ್ಸ್ ವಾಹನಗಳಲ್ಲಿ ಜೀವ ಕೈಯಲ್ಲಿ ಹಿಡಿದು ಶಾಲಾಕಾಲೇಜುಗಳಿಗೆ ಬರುವುದಲ್ಲದೆ.ಸಮಯಕ್ಕೆ ಸರಿಯಾಗಿ ಬರದೆ ಪಾಠಪ್ರವಚನಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸ್ ಭರವಸೆ:
ಕೆಎಸ್ ಆರ್ ಟಿಸಿ ಜಿಲ್ಲಾಧಿಕಾರಿ ಸಿದ್ದೇಶ್ ಮನವಿ ಸ್ವೀಕರಿಸಿ ಮಾತನಾಡಿ,ತಮ್ಮ ಬೇಡಿಕೆಯಂತೆ ಡಿಪೋ ಸ್ಥಾಪನೆಗೆ ಕೇಂದ್ರ ಕಛೇರಿಗೆ ಮನವಿ ರವಾನಿಸಲಾಗುವುದು. 9 ಮಾರ್ಗಗಳಲ್ಲಿ ಬಸ್ ಬಿಡಲು ಸಮೀಕ್ಷೆನಡೆಸಿ ಹಂತಹಂತವಾಗಿ ಬಿಡಲಾಗುವುದು ಎಂದು ಭರವಸೆ ನೀಡಿದರು.
ಸಂದರ್ಭದಲ್ಲಿ ಪ್ರಗತಿಪರ ಹೊರಾಟಗಾರರಾದ ಸತೀಶ್ ಮಲೆಮಾಚಿಕೆರೆ, ಅನಂತಮೂರ್ತಿ, ವಕೀಲ ಅಂಜಿನಪ್ಪ, ಶಿವಕುಮಾರ್, ಕುಮಾರ್ ಭರಮಸಮುದ್ರ, ಜೀವನ್, ಇಂದಿರಾ, ಪಲ್ಲಾಗಟ್ಟೆ ಸುಧಾ, ಶಶಿಕಲಾ, ಚಿರಂಜೀವಿ, ಹಫೀಜ್ ಉಲ್ಲಾ,ಸೂರಜ್ಜ,ಗೌರಿಪುರ ಸತ್ಯಮೂರ್ತಿ,ದೊಣೆಹಳ್ಳಿ ತಿಪ್ಪೇಸ್ವಾಮಿ, ಗುಮ್ಮನೂರು ಬಸವರಾಜ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ ಸಂತೋಷ್ ,ಓಬಣ್ಣ, ಚೌಡಮ್ಮ, ಹನುಮಂತಪ್ಪ ಸೇರಿದಂತೆ ಭಾಗವಹಿಸಿದ್ದರು.