SUDDIKSHANA KANNADA NEWS/ DAVANAGERE/ DATE:21-09-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam) ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ರಾಜ್ಯ ಸರ್ಕಾರದ ಯಟವಟ್ಟಿಗೆ ಉತ್ತಮ ಉದಾಹರಣೆ. ಯಾವುದೇ ಸಬೂಬು ಹೇಳದೇ ಮೊದಲು ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಂತೆ ನಾಲೆಯಲ್ಲಿ ನೀರು ಹರಿಸಿ ರೈತರ ಬಗ್ಗೆ ಕಾಳಜಿ ಮೆರೆಯಿರಿ. ಇಲ್ಲದೇ ಇದ್ದರೆ ರೈತರ ಹಿತಕಾಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:
ಭದ್ರಾ ಡ್ಯಾಂ (Bhadra Dam) ನೀರು ಹರಿಸುವಿಕೆಗೆ ಆಗ್ರಹಿಸಿ ಮುಂದುವರಿದ ಹೋರಾಟ: ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ರೈತರ ಆಕ್ರೋಶ, ವಾಹನ ಸವಾರರ ಪರದಾಟ
ಈ ಹಿಂದೆ ಭದ್ರಾ ನಾಲೆಗೆ ನೀರು ಹರಿಸುವ ಸಂಬಂಧ ಕರೆಯಲಾಗಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಚಾಚೂತಪ್ಪದೇ ಪಾಲನೆ ಆಗಬೇಕು. ನೀರು ಹರಿಸುವ ಸಂಬಂಧ ಏನು ತೀರ್ಮಾನ ಕೈಗೊಳ್ಳಲಾಗಿತ್ತೋ ಆ ಆದೇಶವನ್ನು ಯಥಾವತ್ತು ಪಾಲಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ, ಭದ್ರಾ ನಾಲೆಗಳಲ್ಲಿ ಸತತ 100 ದಿನಗಳ ಕಾಲ ನೀರು ಹರಿಸುವ ತೀರ್ಮಾನವನ್ನು ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು, ಆದರೆ ಈಗ 40 ದಿನಗಳ ಕಾಲ ನೀರು ಹರಿಸಿ ನೀರು ನಿಲುಗಡೆ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮುನ್ನವೇ ಯೋಚನೆ ಮಾಡಬೇಕಾಗಿತ್ತು ಈಗ ರೈತರೆಲ್ಲಾ ಭತ್ತ ನಾಟಿ ಮಾಡಿ ಗೊಬ್ಬರ ಇತ್ಯಾದಿಗಾಗಿ ಸಾಕಷ್ಟು ಹಣ ಖುರ್ಚು ಮಾಡಿದ್ದಾರೆ. ಸುಮಾರು 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದೆ. ಇದಕ್ಕೆಲ್ಲಾ ರೈತರು ಖರ್ಚು ಮಾಡಿರುವ ಹಣ ಕಲ್ಪನೆ ಮಾಡಲಿಕ್ಕೂ ಅಸಾಧ್ಯವಾಗಿದೆ. ಇನ್ನು ಒಂದೂವರೆ ತಿಂಗಳು ನೀರು ಹರಿಸಿದರೆ ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ, ನೀರು ಹರಿಸದೇ ಇದ್ದರೆ ರೈತರ ಸ್ಥಿತಿ ಅಯೋಮಯವಾಗಲಿದೆ ಎಂದು ಸಿದ್ದೇಶ್ವರ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಾಲೆಯಲ್ಲಿ ನೀರು ನಿಲ್ಲಿಸುವುದೊಂದೇ ಪರಿಹಾರವಲ್ಲ, ಅದರ ಬದಲಾಗಿ ಸರ್ಕಾರ ಭದ್ರಾ ಡ್ಯಾಂ ಕ್ಯಾಚ್‌ಮೆಂಟ್ ಏರಿಯಾಗಳಲ್ಲಿ ಮೋಡ ಬಿತ್ತನೆ ಮಾಡಲಿ ಅದನ್ನು ಬಿಟ್ಟು ನೀರು ನಿಲ್ಲಿಸುವುದೊಂದನ್ನೇ ಮೊದಲನೇ ಆದ್ಯತೆಯಾಗಿ ಪರಿಗಣಿಸುವುದು ಬೇಡ. ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಲಿ, ಕೃಷಿಯ ಬಗ್ಗೆ ಅನುಭವವೇ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗಬಹುದು ಎಂಬುದಕ್ಕೆ ಕಾವೇರಿ ಮತ್ತು ಭದ್ರಾ ಜಲಾಶಯ ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಬೂಬು ಹೇಳದೇ ಮೊದಲು ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಂತೆ ನಾಲೆಯಲ್ಲಿ ನೀರು ಹರಿಸಿ ರೈತರ ಬಗ್ಗೆ ಕಾಳಜಿ ಮೆರೆಯಿರಿ. ಇಲ್ಲದೇ ಇದ್ದರೆ ರೈತರ ಹಿತಕಾಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.