Site icon Kannada News-suddikshana

Siddaramaiah: ಕುಟುಂಬ ರಾಜಕಾರಣಕ್ಕೆ ಸೇರುವ 34 ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಿರಲಿಲ್ಲವೇ…? ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ಬಾಣ

Cm Siddaramaih

Cm Siddaramaih

SUDDIKSHANA KANNADA NEWS/ DAVANAGERE/ DATE:16-08-2023

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆಯಿಂದ ನೀವು ಮಾಡಿದ ಚುನಾವಣಾ ಭಾಷಣವನ್ನು ಗಮನಿಸಿದೆ. ದೇಶವನ್ನು ಕಾಡುತ್ತಿರುವ ಗಂಭೀರ ವಿದ್ಯಮಾನಗಳಿಗೆ ಮುಖಾಮುಖಿಯಾಗುವ, ಸಂವಿಧಾನದ ಆಶಯಗಳಡಿ ಅಭಿವೃದ್ಧಿ ಪಥವನ್ನು ಅನಾವರಣಗೊಳಿಸುವ ಮಾತುಗಳನ್ನಾಡಬೇಕಾದ ನೀವು ಚುನಾವಣಾ ಸಮಾವೇಶದಲ್ಲಿ ಮಾಡುವಂತಹ ರಾಜಕೀಯ ಭಾಷಣಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದು ವಿಷಾದನೀಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.

ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ಮಣಿಪುರ ಹಿಂಸಾಚಾರದ ಕುರಿತು ಖಚಿತ ನಿಲುವನ್ನು ಪ್ರಕಟಿಸದೆ ಬಾಯುಪಚಾರದ ಮಾತುಗಳ ಮೂಲಕ ಜಾರಿಕೊಂಡದ್ದು ನಿಮ್ಮ ವೈಫಲ್ಯಕ್ಕೆ ಹಿಡಿದ ಕನ್ನಡಿ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿಹೋಗಿದ್ದಾರೆ. ದೇಶದ ಉತ್ತರ ಭಾಗದಲ್ಲಿ ನೈಸರ್ಗಿಕ ವಿಕೋಪಗಳಾದ ಅತಿವೃಷ್ಟಿ, ಮೇಘಸ್ಫೋಟದಿಂದ ಜನ ಬೀದಿಗೆ ಬಿದ್ದಿದ್ದಾರೆ, ದೇಶದ ರಾಜಧಾನಿಯಲ್ಲಿನ ಪ್ರವಾಹ ಜನರನ್ನು ಭೀತಿಗೀಡುಮಾಡಿದೆ. ಈ ವಿಷಯಗಳ ಬಗೆಗಿನ ನಿಮ್ಮ ಜಾಣಮೌನವನ್ನು ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಿದ್ದಾರೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆ ಜಿಲ್ಲೆ ಬರಪೀಡಿತ ಘೋಷಣೆ? ಒಂದು ವಾರದ ಬಳಿಕ ಗೊತ್ತಾಗುತ್ತೆ…!

ಜಾತಿ,ಧರ್ಮಗಳ ಆಧಾರದಲ್ಲಿ ದೇಶವನ್ನು ಒಡೆಯುವ ಬಿಜೆಪಿಯ ಅಜೆಂಡಾ ಈಗ ಗುಪ್ತವಾಗಿ ಉಳಿದಿಲ್ಲ, ಸರ್ಕಾರದ ಸಾಧನೆಗಳ ಆಧಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯ ಇಲ್ಲ ಎನ್ನುವುದು ನಿಮಗೆ ಮನದಟ್ಟಾಗಿದೆ. ಈ ಪರಿಸ್ಥಿತಿಯಲ್ಲಿ ಉಳಿದಿರುವ ಮತ್ತು ನಿಮಗೆ ಅತ್ಯಂತ ಪ್ರಿಯವಾದ ಅಸ್ತ್ರ ಅನ್ಯಧರ್ಮಗಳ ದ್ವೇಷದ ರಾಜಕಾರಣ ಮತ್ತು ಕಾಂಗ್ರೆಸ್ ವಿರುದ್ಧ ಓಲೈಕೆ ರಾಜಕಾರಣ ಮಾತ್ರ ಎಂದು ಸಿದ್ದರಾಮಯ್ಯ (Siddaramaiah)  ಕಿಡಿಕಾರಿದ್ದಾರೆ.

ನಿಮ್ಮ ಸುದೀರ್ಘ ಭಾಷಣದಲ್ಲಿ ಮತ್ತೆ ಮತ್ತೆ ಕುಟುಂಬವಾದವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಚುಚ್ಚುವ ಪ್ರಯತ್ನ ಮಾಡಿದ್ದೀರಿ. ಕುಟುಂಬವಾದದ ಬಗೆಗಿನ ನಿಮ್ಮ ನಿಲುವು ವೈಯಕ್ತಿಕವಾದದ್ದೇ? ಇಲ್ಲವೇ ಪಕ್ಷದ್ದೇ? ಕರ್ನಾಟಕದ
ಚುನಾವಣೆಯಲ್ಲಿ ಈ ಬಾರಿ ನಿಮ್ಮ ಪಕ್ಷ ಕುಟುಂಬ ರಾಜಕಾರಣಕ್ಕೆ ಸೇರುವ 34 ಅಭ್ಯರ್ಥಿಗಳಿಗೆ ಚುನಾವಣಾ ಟಿಕೆಟ್‌ ನೀಡಿತ್ತು. ಬಿ.ಎಸ್‌ ಯಡಿಯೂರಪ್ಪನವರ ಕುಟುಂಬ, ಜಾರಕಿಹೊಳಿ ಕುಟುಂಬ, ಕತ್ತಿ ಕುಟುಂಬ, ಜೊಲ್ಲೆ, ನಿರಾಣಿ,
ಗಣಿ ರೆಡ್ಡಿಗಳು, ಗುತ್ತೇದಾರ್‌ಗಳು ಇವರೆಲ್ಲಾ ನಿಮ್ಮ ಪಕ್ಷದ ಟಿಕೆಟ್‌ ಪಡೆದು ಚುನಾವಣೆ ಎದುರಿಸಲಿಲ್ಲವೇ? ಎಂದು ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

ಅಡ್ಡ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಾಗ ನಿಮಗೆ ಕುಟುಂಬವಾದದ ನೆನಪಾಗುವುದಿಲ್ಲವೇ ಮೋದಿ ಅವರೇ? ಕರ್ನಾಟದಲ್ಲಿ ದೇವೇಗೌಡರ ಕುಟುಂಬ, ಮಹಾರಾಷ್ಟ್ರದಲ್ಲಿ ಠಾಕ್ರೆ ಕುಟುಂಬ, ಹರಿಯಾಣದಲ್ಲಿ ಚೌತಾಲಾ ಕುಟುಂಬ,
ಕಾಶ್ಮೀರದಲ್ಲಿ ಮುಫ್ತಿ ಕುಟುಂಬ, ಪಂಜಾಬ್‌ನಲ್ಲಿ ಬಾದಲ್‌ ಪರಿವಾರ ಇವರೊಂದಿಗೆ ನಿಮ್ಮ ಪಕ್ಷ ಅಧಿಕಾರ ಸವಿದಿಲ್ಲವೇ? ‌ಎಂದು ವಾಗ್ದಾಳಿ ನಡೆಸಿದ್ದಾರೆ.

ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ,
ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

 

Exit mobile version