SUDDIKSHANA KANNADA NEWS/ DAVANAGERE/ DATE:21-10-2023
ಬೆಂಗಳೂರು: ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಅಪಾರ ಸ್ಪಂದನೆ ಮತ್ತು ಸಾರ್ವಜನಿಕರ ಮೆಚ್ಚುಗೆ ವ್ಯಕ್ತ ಆಗಿರುವ ಹಿನ್ನೆಲೆಯಲ್ಲಿ 5675 ಹೊಸ ಬಸ್ ಖರೀದಿಯ ಗುರಿ ಹೊಂದಲಾಗಿದ್ದು, ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸೂಚಿಸಿದರು.
Read Also This Story:
ಎಲ್ಲೆಡೆ ವಿಶ್ವಕಪ್ ಕ್ರಿಕೆಟ್ (Cricket World Cup) ಫೀವರ್: ವರ್ಲ್ಡ್ ಕಪ್ ನಮ್ಮದು ಎಂಬ ಸಿದ್ಧಗಂಗಾ ಮಕ್ಕಳೇ ರೂಪಿಸಿರುವ ವಿಡಿಯೋದಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ…?
ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್ಗಳ ಖರೀದಿಗೆ 500 ಕೋಟಿ ರೂ. ಒದಗಿಸಲಾಗಿದ್ದು, ಖರೀದಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಿದರು.
ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 15 ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಹೆಚ್ಚುವರಿ ಶೆಡ್ಯೂಲ್ ಗಳನ್ನು ಸೇರಿಸಲು ಅನುವಾಗುವಂತೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಅನುವಾಗುವಂತೆ ಬಸ್ಗಳನ್ನು ಸೇರ್ಪಡೆಗೊಳಿಸುವಂತೆ ತಿಳಿಸಿದರು.
ಸಾರಿಗೆ ಇಲಾಖೆಯ ರಾಜಸ್ವ ಗುರಿ ಸಂಗ್ರಹ ಹಾಗೂ ಸಾರಿಗೆ ನಿಗಮಗಳ ಹಣಕಾಸು ನಿರ್ವಹಣೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಾಹನ ತನಿಖೆಯಿಂದ 83 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಿಯಾವುಲ್ಲಾ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಎಲ್ಲ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.