Home ದಾವಣಗೆರೆ ಶೋಷಿತ ಸಮುದಾಯಗಳಿಗೆ ಉನ್ನತ ರಾಜಕೀಯ ಪ್ರಾತಿನಿಧ್ಯ ಸಿಗಲು ಇಷ್ಟು ವರ್ಷ ಬೇಕಾಯಿತೇ? ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಲಾಢ್ಯ ನಾಯಕರಿಗೆ ಶಕ್ತಿ ಇದ್ದರೂ ಸಿಗಲಿಲ್ಲ ಅಧಿಕಾರ: ಡಾ. ಜಿ. ಪರಮೇಶ್ವರ ಬೇಸರ!
ದಾವಣಗೆರೆಬೆಂಗಳೂರು

ಶೋಷಿತ ಸಮುದಾಯಗಳಿಗೆ ಉನ್ನತ ರಾಜಕೀಯ ಪ್ರಾತಿನಿಧ್ಯ ಸಿಗಲು ಇಷ್ಟು ವರ್ಷ ಬೇಕಾಯಿತೇ? ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಲಾಢ್ಯ ನಾಯಕರಿಗೆ ಶಕ್ತಿ ಇದ್ದರೂ ಸಿಗಲಿಲ್ಲ ಅಧಿಕಾರ: ಡಾ. ಜಿ. ಪರಮೇಶ್ವರ ಬೇಸರ!

Share
ಡಾ. ಜಿ. ಪರಮೇಶ್ವರ
Share

ದಾವಣಗೆರೆ: “1952ರಿಂದ ರಾಜ್ಯದಲ್ಲಿ ಹಲವು ಚುನಾವಣೆಗಳು ನಡೆದು, ಅನೇಕ ನಾಯಕರು ಮುಖ್ಯಮಂತ್ರಿ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ನಮ್ಮ ಶೋಷಿತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆಯಂತಹ ಉನ್ನತ ರಾಜಕೀಯ ಪ್ರಾತಿನಿಧ್ಯ ದೊರಕಲು 2018ರವರೆಗೆ ಕಾಯಬೇಕಾಯಿತು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ಸಮಾಜದ ವ್ಯವಸ್ಥೆ ಹೇಗಿದೆ ಎಂದರೆ, ಶೋಷಿತ ಸಮುದಾಯ ಮುಂದೆ ಬರಬೇಕು, ಆ ಸಮುದಾಯಕ್ಕೆ ಉತ್ತೇಜನ ಕೊಡಬೇಕು ಎಂದು ಭಾಷಣಗಳನ್ನು ಮಾಡುತ್ತೇವೆ. ಆದರೆ, ಆ ಸಮುದಾಯಕ್ಕೆ ಡಿಸಿಎಂ ಕೊಡೋದಿಕ್ಕೆ ಇಷ್ಟು ವರ್ಷ ಏಕೆ ಆಯ್ತು? ಎಲ್ಲರೂ ಒಮ್ಮೆ ಆಲೋಚನೆ ಮಾಡಿ,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿರಿಯ ನಾಯಕರ ಯೋಗ್ಯತೆಯನ್ನು ಸ್ಮರಿಸಿದ ಪರಮೇಶ್ವರ್:

ರಾಜ್ಯದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳಿಗೆ ಸಮರ್ಪಕ ಅವಕಾಶಗಳು ದೊರೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, “ಹಿಂದಿನ ನಾಯಕರ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಬಿ. ಬಸವಲಿಂಗಪ್ಪ ಅವರಿಗಿಂತ ಸಾಮರ್ಥ್ಯ ಇರುವವರಿದ್ದಾರ? ಕೆ.ಎಚ್. ರಂಗನಾಥ್ ಅವರಿಗಿಂತ ಬುದ್ಧಿವಂತರು ಯಾರಿದ್ದಾರೆ? ಮಲ್ಲಿಕಾರ್ಜುನ ಖರ್ಗೆ ಅವರು ನಿಭಾಯಿಸದೇ ಇರುವ ಖಾತೆಯಾದರೂ ಯಾವುದಿದೆ ಹೇಳಿ? ಅವರ ಮೇಲೆ ಯಾವುದಾದರೂ ಆಪಾದನೆ ಇತ್ತೇ? ಹೀಗಿದ್ದರೂ ನಮಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗಲು ದೀರ್ಘಾವಧಿ ಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸುವ ಭರವಸೆ:

“ನನಗೆ ಯಾವುದೋ ಕಾರಣಕ್ಕೆ ಡಿಸಿಎಂ ಹುದ್ದೆ ಸಿಕ್ಕಿತು, ಕಾಂಗ್ರೆಸ್ ಪಕ್ಷ ನನ್ನನ್ನು ಮತ್ತೆ ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪ್ರಸ್ತುತ ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಈ ರಾಜ್ಯದ ಶೋಷಿತ ಸಮುದಾಯಗಳು, ನೊಂದವರು, ತುಳಿತಕ್ಕೊಳಗಾದವರು ಹಾಗೂ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಲು ನಾನು ಈ ಸ್ಥಾನದಲ್ಲಿದ್ದೇನೆ,” ಎಂದು ಅವರು ಭಾವುಕರಾಗಿ ನುಡಿದರು.

ಇದೇ ವೇಳೆ, ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಶಿಕ್ಷಣವೇ ಪ್ರತಿಯೊಬ್ಬರ ಅಸ್ತ್ರವಾಗಬೇಕು ಹಾಗೂ ಯುವಜನತೆ ಉನ್ನತ ಸಾಧನೆ ಮಾಡಿ ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮೀಜಿ, ಸಂಸದರು, ಶಾಸಕರು ಹಾಗೂ ಛಲವಾದಿ ಮಹಾಸಭಾದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles