SUDDIKSHANA KANNADA NEWS/ DAVANAGERE/ DATE:03-11-2024
ದಾವಣಗೆರೆ: ಅಡಿಕೆ ಬೆಳೆಗಾರರಿಗೆ ಒಂದು ಶಾಕಿಂಗ್ ನ್ಯೂಸ್. ಮತ್ತೊಂದು ಗುಡ್ ನ್ಯೂಸ್.
ಹೌದು. ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಚನ್ನಗಿರಿ, ದಾವಣಗೆರೆ, ಹೊನ್ನಾಳಿ ಸೇರಿದಂತೆ ಹಲವೆಡೆ ಅಡಿಕೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಚನ್ನಗಿರಿ ಅಡಿಕೆ ನಾಡು ಅಂತಾನೇ ಖ್ಯಾತಿ ಪಡೆದಿದೆ. ಅಡಿಕೆ ಧಾರಣೆಯು ಪ್ರತಿ ಒಂದು ಕ್ವಿಂಟಲ್ ಗೆ 51 ಸಾವಿರ ರೂಪಾಯಿ ಗಡಿ ದಾಟಿದ್ದು, ಅಡಿಕೆ ಬೆಳೆಗಾರರ ಖುಷಿಗೆ ಕಾರಣವಾಗಿದೆ.
ಮತ್ತೊಂದೆಡೆ ಅಡಿಕೆ ಬೆಳೆಯು ಈ ಬಾರಿ ಹೆಚ್ಚಾಗಿ ಬಂದಿಲ್ಲ. ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆಲವೆಡೆ ಅಡಿಕೆ ತೋಟಗಳಲ್ಲಿ ನೀರು ನಿಂತಿದ್ದ ಕಾರಣ ಅಡಿಕೆ ಇಳುವರಿ ಹೆಚ್ಚಾಗಿ ಬಂದಿಲ್ಲ. ಹಸಿ ಅಡಿಕೆಯು ಹೆಚ್ಚು ತೂಕ ಬರುತ್ತಿಲ್ಲ. ಇದು ರೈತರಿಗೆ ನಿರಾಸೆ ತಂದಿದೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಅಡಿಕೆ ಧಾರಣೆಯು ಪ್ರತಿ ಕ್ವಿಂಟಲ್ ಗೆ 41 ಸಾವಿರ ರೂ.ನಿಂದ 45 ಸಾವಿರ ರೂಪಾಯಿ ಇತ್ತು. ಕೇವಲ ಒಂದು ವಾರಕ್ಕೆ 5 ರಿಂದ ಆರು ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಗೆ ಹೆಚ್ಚಾಗಿದ್ದು, ಸಂತಸ ತಂದಿದೆ. ಮತ್ತೊಂದೆಡೆ ಅಡಿಕೆ ಕೀಳಿಸಿ, ಸುಲಿದು, ಒಣಗಿಸಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಮಾರಾಟ ಮಾಡಲು ಹೋದಾಗ ತೂಕ ಕಡಿಮೆ ಬರುತ್ತಿದೆ. ಒಂದು ಎಕರೆಗೆ ಕನಿಷ್ಠ ಏನಿಲ್ಲಾ ಎಂದರೂ ಒಂದರಿಂದ ಎರಡು ಕ್ವಿಂಟಲ್ ಅಡಿಕೆ ತೂಕ ಕಡಿಮೆ ಬಂದಿದೆ.
ಚನ್ನಗಿರಿ ತಾಲೂಕು ಒಂದರಲ್ಲಿಯೇ ಬರೋಬ್ಬರಿ 39500 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ಈ ಪ್ರದೇಶದಲ್ಲಿ ಉತ್ತಮ ಮುಂಗಾರು ಮತ್ತು ಹಿಂಗಾರು ಮಳೆಯಾಗಿರುವುದರಿಂದ ಅಡಿಕೆ ಬೆಳೆಗಾರರಿಗೆ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕಳೆದ ವರ್ಷ ಬರಗಾಲ ತಲೆದೋರಿದ್ದ ಕಾರಣ ಅಡಿಕೆ ಬೆಳೆಗಾರರು ತೋಟಗಳಿಗೆ ನೀರು ಒದಗಿಸಲು ಹೆಚ್ಚು ಖರ್ಚು ಮಾಡಿದ್ದರು. ಬಂದ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಅಡಿಕೆ ತೋಟ ಉಳಿಸಿಕೊಳ್ಳಲು ಖರ್ಚು ಮಾಡಿದ್ದರು.
ಆದ್ರೆ, ಈ ವರ್ಷ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮಳೆಯಾಗಿದ್ದು, ರೈತರಿಗೆ ನೀರಿನ ಸಮಸ್ಯೆ ತಲೆದೋರಿಲ್ಲ. ಚನ್ನಗಿರಿ, ಮಾಯಕೊಂಡ, ದಾವಣಗೆರೆ, ಹೊನ್ನಾಳಿ, ಜಗಳೂರಿನ ಕೆಲವೆಡೆ ಈಗಾಗಲೇ ಅಡಿಕೆ ಕೊಯ್ಲು ಶುರುವಾಗಿದೆ. ಮತ್ತೊಂದೆಡೆ
ಅಡಿಕೆ ಧಾರಣೆಯು ಹೆಚ್ಚಳವಾಗಿರುವುದರಿಂದ ರೈತರಿಗೆ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಎಲ್ಲಿ ಅಡಿಕೆ ತೂಕ ಕಡಿಮೆ ಬರುತ್ತದೆ ಎಂಬ ಆತಂಕವೂ ಕಾಡುತ್ತಿದೆ.
ಕಳೆದ ವರ್ಷ ಮಳೆ ಆಗದೇ ಇದ್ದರಿಂದಾಗಿ ಇಳುವರಿ ತುಂಬಾನೇ ಕಡಿಮೆ ಆಗಿತ್ತು. ಜೊತೆಗೆ ಖರ್ಚು ಹೆಚ್ಚಾಗಿತ್ತು. ಅಡಿಕೆ ತೋಟ ಸ್ವಚ್ಛಗೊಳಿಸಲು, ತೋಟಕ್ಕೆ ನೀರುಣಿಸಲು, ಗೊಬ್ಬರ ಸೇರಿದಂತೆ ಶೇಕಡಾ 60 ರಿಂದ 65ರಷ್ಟು ಆದಾಯದಲ್ಲಿ
ಖರ್ಚಾಗಿತ್ತು. ಈ ವರ್ಷ ಮಳೆಯಾಗಿರುವುದರಿಂದ ಎಲ್ಲೆಡೆ ಅಡಿಕೆ ಮರಗಳು ಹಸಿರುನಿಂದ ನಳನಳಿಸುತ್ತಿವೆ.
ಕ್ವಿಂಟಲ್ ಗೆ ಕನಿಷ್ಠ 43 ಸಾವಿರ ರೂಪಾಯಿ, ಗರಿಷ್ಠ 51 ಸಾವಿರ ರೂಪಾಯಿ ಇದ್ದು, ಸರಾಸರಿ 49,407 ದರ ನಿಗದಿ ಇದ್ದು, ಅಡಿಕೆ ಮಾರಾಟಕ್ಕೆ ಮುಂದಾಗಿದ್ದೇವೆ ಎನ್ನುವ ಅಡಿಕೆ ಬೆಳೆಗಾರರು ತೂಕ ಕಡಿಮೆ ಆಗುವ ಆತಂಕವನ್ನೂ ಉಲ್ಲೇಖಿಸುತ್ತಾರೆ.
ಚಳಿಗಾಲವೂ ತೀವ್ರಗೊಂಡಿದ್ದು, ಚನ್ನಗಿರಿ ತಾಲೂಕಿನ ಅಡಿಕೆಗೆ ಗುಟ್ಕಾ ತಯಾರಿಕಾ ಕಂಪೆನಿಗಳಿಂದ ಬೇಡಿಕೆ ಇದ್ದು, ಇಲ್ಲಿಗೆ ಬಂದು ರೈತರಿಂದ ನೇರವಾಗಿ ಖರೀದಿ ಮಾಡಿಕೊಂಡು ಹೋಗುತ್ತಾರೆ. ಚಲಿಗಾಲದಲ್ಲಿ ಅಡಿಕೆ ತೇವಾಂಶ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಮೊದಲ ವಾರದವರೆಗೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಅಡಿಕೆ ದರವು 51 ಸಾವಿರ ರೂಪಾಯಿ ಇರುವುದರಿಂದ ಬೆಳೆಗಾರರು ಹೆಚ್ಚು ದಿನ ಸಂಗ್ರಹ ಇಟ್ಟುಕೊಳ್ಳದೇ ಮಾರಾಟಕ್ಕೆ ಮುಂದಾಗಿದ್ದಾರೆ. ತೂಕ ಚೆನ್ನಾಗಿ ಬಂದರೆ ಸಾಕು. ಈ ಬಾರಿಯಾದರೂ ಲಾಭಾಂಶ ಕಾಣಬಹುದು ಎಂದು ಎದುರುಗಣ್ಣಿನಿಂದ ರೈತರು ನೋಡುತ್ತಿದ್ದಾರೆ.