ದಾವಣಗೆರೆ: “ನಾನು ರಾಜಕೀಯಕ್ಕೆ ಯಾಕೆ ಬಂದೆ ಎಂದು ಈಗ ತುಂಬಾ ಬೇಸರವಾಗುತ್ತಿದೆ…” – ಇವು ಚನ್ನಗಿರಿ ಕಾಂಗ್ರೆಸ್ ಶಾಸಕ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಆಪ್ತ ವಲಯದ ಶಿವಗಂಗಾ ಬಸವರಾಜ್ ಅವರ ಅಂತರಾಳದ ಮಾತುಗಳು.
ದಾವಣಗೆರೆ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ವೈಯಕ್ತಿಕ ನಿಂದನೆಗಳು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿರಿಯ ನಾಯಕರು ಬಳಸಿದ ಕೀಳು ಮಟ್ಟದ ಪದ ಬಳಕೆ ಮತ್ತು ಕುಟುಂಬದವರ ಹೆಸರುಗಳನ್ನು ಎಳೆದುತಂದಿರುವ ರೀತಿ ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜಕಾರಣದಲ್ಲಿ ಸೈದ್ಧಾಂತಿಕ ಟೀಕೆಗಳು, ರಾಜಕೀಯ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ, ವೈಯಕ್ತಿಕ ವಿಚಾರಗಳು, ತಂದೆ ಮತ್ತು ಕುಟುಂಬದ ಹೆಸರುಗಳನ್ನು ಕೆಟ್ಟ ಪದಗಳೊಂದಿಗೆ ಬಳಕೆ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಯಾವ ಸಮುದಾಯದವರೂ ಅಥವಾ ನಾಯಕರೂ ಈ ರೀತಿಯ ವರ್ತನೆ ತೋರಬಾರದು” ಎಂದು ತೀವ್ರವಾಗಿ ಖಂಡಿಸಿದರು.
ಮುಂದುವರೆದು ಮಾತನಾಡಿ, “ನಾವು ಕೂಡ ಆಡುಭಾಷೆಯಲ್ಲಿ ಮಾತನಾಡುತ್ತೇವೆ. ಆದರೆ, ಹಿರಿಯರ ಈ ರೀತಿಯ ಪದ ಪ್ರಯೋಗವನ್ನು ನಾಳೆ ನಮ್ಮ ಮೇಲೂ ಮಾಡಿದರೆ ಹೇಗೆ ಎಂಬ ಆತಂಕ ಮತ್ತು ಭಯ ಶುರುವಾಗಿದೆ. ಸಮಾಜದಲ್ಲಿ ಹಿರಿಯರನ್ನು ನಾವು ಅನುಸರಿಸಬೇಕು, ಆದರೆ ಇಂಥ ಘಟನೆಗಳು ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
ಹೈಕಮಾಂಡ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆಯ ಒತ್ತಾಯ:
ಈ ವಿವಾದಕ್ಕೆ ತೆರೆ ಎಳೆಯಲು ಎರಡೂ ಪಕ್ಷಗಳ ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ಮೊದಲು ಯಾರು ಮಾತನಾಡಿದರು, ಆಮೇಲೆ ಯಾರು ಪ್ರತಿಕ್ರಿಯಿಸಿದರು ಎಂಬುದು ಮುಖ್ಯವಲ್ಲ. ಹೈಕಮಾಂಡ್ ಇಬ್ಬರೂ ನಾಯಕರಿಗೆ ವೈಯಕ್ತಿಕ ಮತ್ತು ಕುಟುಂಬದ ಟೀಕೆಗಳನ್ನು ಮಾಡದಂತೆ ಕಟ್ಟುನಿಟ್ಟಿನ ಕಟ್ಟಪ್ಪಣೆ (ಎಚ್ಚರಿಕೆ) ವಿಧಿಸಬೇಕು. ಇಬ್ಬರನ್ನೂ ಒಂದೆಡೆ ಕೂರಿಸಿ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ಜಿಲ್ಲೆಯ ರಾಜಕೀಯ ವಾತಾವರಣ ಕಲುಷಿತವಾಗದಂತೆ ಎಚ್ಚೆತ್ತುಕೊಳ್ಳಬೇಕು ಎಂದಿರುವ ಅವರು, ರಾಜಕೀಯವನ್ನು ರಾಜಕೀಯವಾಗಿಯೇ ನೋಡಬೇಕೇ ಹೊರತು ವೈಯಕ್ತಿಕ ದ್ವೇಷ ಸಾಧನೆಗೆ ಬಳಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.





Leave a comment