SUDDIKSHANA KANNADA NEWS/ DAVANAGERE/ DATE:02-10-2023
ಶಿವಮೊಗ್ಗ(Shimoga): ಶಾಂತಿಯ ತಾಣವಾಗಿದ್ದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಮತ್ತೆ ಉರಿಯುವಂತಾಗಿದೆ. ಈಗಾಗಲೇ 144 ಸೆಕ್ಷನ್ ಜಾರಿಗೊಳಿಸಿರುವ ಪೊಲೀಸ್ ಇಲಾಖೆ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಇದುವರೆಗೆ ಸುಮಾರು 65ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದೆ. ಕೋಮುಸಂಘರ್ಷ ಸೃಷ್ಟಿಸುವವರಿಗೆ ಸಖತ್ ಪಾಠ ಕಲಿಸಲು ಇಲಾಖೆ ಸಜ್ಜಾಗಿದೆ. ಗಲಭೆಕೋರರ ಹೆಡೆಮುರಿ ಕಟ್ಟುವ ಕೆಲಸ ಮಾಡಿದೆ. ಜೊತೆಗೆ ಶಿವಮೊಗ್ಗ ಶಾಂತವಾಗಿಸಲು ಪೊಲೀಸರು ಹರಸಾಹಸವೇ ಪಡಬೇಕಾಯಿತು. ಸದ್ಯಕ್ಕೆ ಶಾಂತವಾಗಿದ್ದು, ಆದ್ರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪೊಲೀಸ್ ಸರ್ಪಗಾವಲಿನಲ್ಲಿ ರಾಗಿಗುಡ್ಡ ಇದೆ.
Read Also This Story:
Davanagere: ನಾನೇನೂ ಮಂತ್ರಿಗಿರಿ ಕೇಳಿಲ್ಲ,ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ, ಸಿಎಂ ಸಿದ್ದರಾಮಯ್ಯ ಕರೆದಾಗ ಹೋಗಿ ಮಾತನಾಡುತ್ತೇನೆ: ಶಾಮನೂರು ಶಿವಶಂಕರಪ್ಪ
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವ ಘಟನೆ ಶಿವಮೊಗ್ಗದ ರಾಗಿಗುಡ್ಡ ಶಾಂತಿನಗರದಲ್ಲಿ ನಡೆದಿತ್ತು. 2 ಗುಂಪಿನ ನಡುವೆ ಕಲ್ಲು ತೂರಾಟ ನಡೆದು, 6 ಮಂದಿ ಗಾಯಗೊಂಡಿದ್ದರು.
7 ಮನೆ, 1 ಕಾರು, 1 ಬೈಕ್ ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ರಾಗಿಗುಡ್ಡದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಆಗಿದೆ ಎಂದು ಗುಲ್ಲೆಬ್ಬಿಸಿದ್ದಾರೆ. ಆ ಬಳಿಕ ಕಲ್ಲು ತೂರಾಟ ಮಾಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೋ ಒಬ್ಬ ವ್ಯಕ್ತಿಯು ಹಿಂದೂ ಮನೆಗಳ ಟಾರ್ಗೆಟ್ ಮಾಡಿ ತೋರಿಸುತ್ತಿದ್ದ ಎನ್ನಲಾಗಿದೆ. ಆದ್ರೆ, ಪೊಲೀಸರು ಖಚಿತಪಡಿಸಿಲ್ಲ. ಎರಡು ಓಮ್ನಿಯಲ್ಲಿ ಬಂದವರು ಈ ಕೃತ್ಯದ ಹಿಂದೆ ಇರಬಹುದು ಎಂದು ಶಂಕಿಸಲಾಗಿದೆ.
ಕಠಿಣ ಕ್ರಮ ಎಂದ ಮಧು ಬಂಗಾರಪ್ಪ:
ಕೋಮುಸಂಘರ್ಷದಂಥ ಘಟನೆಯಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಸ್ಪಿ ಅವರಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು
ಸೂಚನೆ ನೀಡಲಾಗಿದೆ. ಯಾವುದೇ ಧರ್ಮದವರಾಗಲೀ, ಗಲಭೆ ನಡೆಸಲು ಮುಂದಾದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಟಿಪ್ಪು ಭಾವಚಿತ್ರ ಪ್ರದರ್ಶನದಿಂದ ಘಟನೆ ಆಗಿದೆ ಎಂದು ಹೇಳುತ್ತಿದ್ದಾರೆ. ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ನಾನು ಜನಪ್ರತಿನಿಧಿಯಾಗಿ ನನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕೆಲಸ ಆಗುತ್ತಿದೆ. ಪ್ರಕರಣದ ತನಿಖೆಯನ್ನು ತನಿಖಾಧಿಕಾರಿಗಳು ಮಾಡುತ್ತಾರೆ. ಕಾನೂನು ಕೈಗೆತ್ತಿಕೊಂಡರೆ ಕ್ರಮ ಗ್ಯಾರಂಟಿ. ಇಂಥ ಘಟನೆಗಳಲ್ಲಿ ರಾಜಕೀಯ ಮಾಡಿ ಕೆಲವರು ಅವಕಾಶ ಮಾಡಿಕೊಳ್ಳುತ್ತಾರೆ. ನಾವು ಹಾಗೆ ಮಾಡೋದಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ ಕದಡುವವರು ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಎಲ್ಲ ಮಾಹಿತಿ ತೆಗೆದುಕೊಂಡಿದ್ದೇನೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಧಿಕಾರಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.
ಸಮಾಜದಲ್ಲಿ ಕೆಟ್ಟವರನ್ನು ನಾವು ತಿದ್ದುವ ಕೆಲಸ ಮಾಡಬೇಕು. ಮಹಾತ್ಮ ಗಾಂಧಿಯವರ ಮೂರ್ತಿಯನ್ನು ದ್ವಂಸ ಮಾಡಿದ್ದರು. ಇಂತಹ ವಿಕೃತ ಮನಸ್ಸುಗಳ ತಲೆ ಹರಟೆ ಕೆಲಸಗಳನ್ನು ನಿಲ್ಲಿಸಬೇಕು. ಇದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಜವಾಬ್ದಾರಿ ಕೂಡ ಇರುತ್ತದೆ. ಎಲ್ಲರೂ ಸೇರಿ ಶಾಂತಿ ನಿರ್ಮಾಣ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಹತ್ತಿಕ್ಕುತ್ತೇವೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾನೂನು ಬಾಹಿರ ಚಟುವಟಿಕೆ ಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
![CM SIDDARAMAI](http://suddikshana.com/wp-content/uploads/2023/09/CM-SIDDARAMAI-300x225.jpg)
ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ. ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಅದನ್ನು ಹತ್ತಿಕ್ಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ತಿಳಿಸಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪೊಲೀಸರ ಮೇಲೂ ಕಲ್ಲು ಎಸೆದಿದ್ದು, ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಗಲಾಟೆಗೆ ಕಾರಣಕರ್ತರಾಗಿರುವ 43 ದುಷ್ಕರ್ಮಿಗಳನ್ನು ಬಂದಿಸಿದ್ದು ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ನಿಯಂತ್ರಣದಲ್ಲಿದೆ. ಪೊಲೀಸರು ಕ್ರಮ ಕೈಗೊಂಡು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಶಾಂತಿ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದೊಡ್ಡ ಗಲಾಟೆ ತಪ್ಪಿದೆ: ಗೃಹ ಸಚಿವರ ಉಡಾಫೆ…!
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಉಡಾಫೆ ಮಾತು ಆಡಿದ್ದಾರೆ.
ಪೊಲೀಸರು ದೊಡ್ಡ ಪ್ರಮಾಣದಲ್ಲಿ ಆಗಬೇಕಿದ್ದ ಗಲಾಟೆ ತಪ್ಪಿಸಿದ್ದಾರೆ. ಹಬ್ಬ ಮತ್ತಿತರೆ ಸಂದರ್ಭದಲ್ಲಿ ಬ್ಯಾನರ್ ಕಟ್ಟುತ್ತಾರೆ, ಪೋಸ್ಟರ್ ಹಾಕುತ್ತಾರೆ. ಇದನ್ನೇ ಕೆಲವರು ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುತ್ತಾರೆ. ಶಿವಮೊಗ್ಗ ಘಟನೆಗೆ ಕಾರಣ ಏನೆಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ಸಂಭವಿಸಲು ಬಿಡುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮೆರವಣಿಗೆ ವೇಳೆ ಕತ್ತಿ ಬಳಕೆ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ಏನಾಗಿದೆ ಎಂದು ಗೊತ್ತಿದೆ, ಹೇಳಿಕೆ ಕೊಡುವವರು ಕೊಡುತ್ತಾರೆ. ಶಿವಮೊಗ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದೇವು. ಆರೋಪಿಗಳ ಹೆಸರು ಬಹಿರಂಗಗೊಳಿಸುವುದಿಲ್ಲ, ನಿಮಗೂ ಹೇಳಲ್ಲ. ಅನುಮತಿ ಇಲ್ಲದೆ ಆಗಿದೆ. ಇಂತಹದ್ದಕ್ಕೆಲ್ಲ ಪ್ರಚೋಚನೆ ನೀಡುವುದಿಲ್ಲ ಎಂದು ತಿಳಿಸಿದರು.
ಎಸ್ಪಿ ಹೇಳಿದ್ದೇನು…?
ಶಿವಮೊಗ್ಗ ನಗರವು ಶಾಂತವಾಗಿದೆ. ಕೊತ ಕೊತ, ಧಗ ಧಗ ಇಲ್ಲ. ಜನರೂ ಆತಂಕಪಡಬೇಕಿಲ್ಲ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ. ರಾಗಿಗುಡ್ಡ ಪೊಲೀಸ್ ನಿಯಂತ್ರಣದಲ್ಲಿದೆ. ವದಂತಿ ಹಬ್ಬಿಸಿದರೆ ಕಠಿಣ ಕ್ರಮ ಜರುಗಿಸಲಾಗಿದೆ. ಕೋಮುಘರ್ಷಣೆಯಲ್ಲಿ ಪಾಲ್ಗೊಂಡ ಕಿಡಿಗೇಡಿಗಳ ಬಂಧನವೂ ಆಗಿದೆ. ಬಾಲ ಬಿಚ್ಚಿದರೆ ಹುಷಾರ್ ಎಂದು ಖಡಕ್ ಎಚ್ಚರಿಕೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್
ಕುಮಾರ್ ಎಚ್ಚರಿಕೆ ನೀಡಿದ್ದಾರೆ.