SUDDIKSHANA KANNADA NEWS/ DAVANAGERE/ DATE:20-11-2024
ದಾವಣಗೆರೆ: ದಾವಣಗೆರೆಯಲ್ಲಿ ಕುಟುಂಬ ರಾಜಕಾರಣ ಹೆಚ್ಚಿದೆ ಎಂಬ ಆರೋಪ ಮಾಡುತ್ತಿರುವ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್, ವಿರಕ್ತಮಠದ ಬಸವಪ್ರಭು ಸ್ವಾಮೀಜಿ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಗರಂ ಆಗಿದ್ದಾರೆ.
ನಗರದ ಚಿಗಟೇರಿ ಆಸ್ಪತ್ರೆಆವರಣದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ವಿಭಾಗಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಟುಂಬ ರಾಜಕಾರಣ ಅಂದ್ರೆ ಏನು? ಯಾರು ಬೇಡ ಅಂತಾರೆ ನೀವು ಮುಂದೆ ಬನ್ನಿ. ಎಲೆಕ್ಷನ್ ನಿಂತು ಗೆಲ್ಲಲಿ ಯಾರು ಬೇಡ ಅಂತಾರೆ. ಯಾವುದೋ ಎರಡು ಸ್ಕೂಲ್ ನಡೆಸುವವನು ದಾವಣಗೆರೆಗೆ ಬರುತ್ತಾನೆ. ಕುಟುಂಬ ರಾಜಕಾರಣ ಎನ್ನುತ್ತಾನೆ. ಅದಕ್ಕೆ ಕಾವಿ ಧರಿಸಿರುವ ಸ್ವಾಮಿ ಅದಕ್ಕೆ ದನಿಗೂಡಿಸುತ್ತಾನೆ ಎಂದು ಏಕವಚನದಲ್ಲಿಯೇ ಹರಿಹಾಯ್ದರು.
ಆ ಸ್ವಾಮಿ ಕಾವಿ ಬಟ್ಟೆ ಬಿಟ್ಟು ಖಾದಿ ಧರಿಸಿ ಚುನಾವಣೆಗೆ ನಿಲ್ಲಲಿ. ಯಾರು ಬೇಡ ಅಂತಾರೆ. ಇಂಥವರಿಂದ ದೇಶ ಉದ್ದಾರಗಲ್ಲ. ಒಳ್ಳೆಯ ಸ್ವಾಮೀಜಿಗಳಿದ್ದರೆ ನಮಸ್ಕಾರ ಮಾಡೋಣ. ಈಗ ಸ್ವಾಮೀಜಿಗಳನ್ನು ನೋಡಿದರೆ ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲರೂ ಎಚ್ಚರದಿಂದ ಹೋಗಬೇಕಿದೆ ಎಂದು ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.
ದಯವಿಟ್ಟು ದಿನೇಶ್ ಗುಂಡುರಾವ್ ಅವರು ತೊಂದರೆಗಳನ್ನು ನಿವಾರಣೆ ಮಾಡುವಂತೆ ಮನವಿ ಮಾಡುತ್ತೇನೆ. ಚಿಗಟೇರಿ ಆಸ್ಪತ್ರೆಯ ಉನ್ನತೀಕರಣಕ್ಕೆ ಹೆಚ್ಚಿನ ನೆರವು ನೀಡಬೇಕು. ಸರ್ಕಾರದಿಂದ ಅನುದಾನ ಕೊಟ್ಟು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.