SUDDIKSHANA KANNADA NEWS/ DAVANAGERE/ DATE:17-02-2024
ದಾವಣಗೆರೆ: ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ನಮ್ಮ ಮನವಿ ಸ್ವೀಕರಿಸಿ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರ ಅನಾವರಣದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸಮಾರಂಭ ಬಸವಕಲ್ಯಾಣದಲ್ಲಿ ಏರ್ಪಡಿಸಲಾಗಿದೆ. ಅಂಬೇಡ್ಕರ್ ಭವನ ಪ್ರತಿ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ಅದೇ ರೀತಿ ಬಸವ ಭವನ
ನಿರ್ಮಾಣ ಮಾಡಬೇಕೆಂದು ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕಟ್ಟುನಿಟ್ಟಿನ ಭಾವನೆ ತೊರೆದು ವೀರಶೈವ ಧರ್ಮವನ್ನು ಅಪ್ಪಿಕೊಂಡು ವೀರಶೈವರ ಉದ್ದಾರಕ್ಕೆ ಶ್ರಮಿಸಿದರು. ಬಸವಣ್ಣನವರು ಹೆಣ್ಣು ಮಕ್ಕಳು ಮನೆಯ ಒಳಗಡೆ ಇರಬೇಕು ಎಂಬ ಮಾತನ್ನು ಆಡುತ್ತಿದ್ದವರಿಗೆ ಅದನ್ನು ತಪ್ಪು ಎಂದು ತಿಳಿಸಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವನ್ನು ಕೊಡಿಸಿದರು. ಹೆಣ್ಣು ಮಕ್ಕಳು ಅಷ್ಟೇ ಅಲ್ಲದೇ ಜಾತಿ ರಹಿತ, ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣಕ್ಕೆ ಪ್ರಾತಿನಿಧ್ಯ ನೀಡಿ ಆಡಳಿತ ನಡೆಸಿದಂತವರು ಬಸವಣ್ಣನವರು ಎಂದು ಹೇಳಿದರು.
ವೀರಶೈವ ಧರ್ಮವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ಕೂಡ, ಅವರಲ್ಲಿದ್ದ ಸಮಾನತೆ ತತ್ವ ಎಲ್ಲರಿಗೂ ಆದರ್ಶನೀಯ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತಾನಾಡಿ ಮಹಾಸಭಾದ ನಿರ್ಣಯದಂತೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ. ಬಸವಣ್ಣನವರ ಹಾದಿಯಲ್ಲಿ ನಡೆದರೆ, ಈ ನಾಡು ಶಾಂತಿಯುತ ಸರ್ವಜನಾಂಗದ ನಾಡಾಗುತ್ತದೆ. ಬಸವಣ್ಣನ ಅನುಯಾಯಿಗಳಾದರೆ ಶಾಂತಿ ನೆಲೆಸಿ, ನೆಮ್ಮದಿ ಸಿಗಲಿದೆ. ಬಸವಣ್ಣನವರ ತತ್ವ ಸಿದ್ದಾಂತ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಶಾಂತಿ, ಸಮಾನತೆ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ಬಸವಣ್ಣನವರ ತತ್ವ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. ಬಸವಣ್ಣ ಎಂದರೆ ಅದು ಕಾಯಕಯೋಗಿ ಬಸವಣ್ಣ, ಇವರ ಹೆಸರು ನಾಮಕರಣ ಮಾಡುವ ಮೂಲಕ ಅನುಯಾಯಿಗಳಾಗಬೇಕು. ಪಠ್ಯಪುಸ್ತಕದಲ್ಲಿ ಬಸವಣ್ಣನವರ ಕುರಿತಂತೆ ಪ್ರತಿದಿನ ಅವಧಿಯ ತರಗತಿ ಮೀಸಲಿರಿಸಲು ಮನವಿ ಮಾಡಬೇಕೆಂದರು.
ಈ ಹಿಂದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಅಳವಡಿಸಬೇಕೆಂದು ಆದೇಶ ಮಾಡಲಾಗಿದ್ದು ಈಗ ಭಾವಚಿತ್ರದ ಕೆಳಗೆ ಸಾಂಸ್ಕøತಿಕ ನಾಯಕ ಎಂದು ಹೆಸರು ನಮೂದಿಸಬೇಕು. ಪೌರಕಾರ್ಮಿಕರಿಗಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು ಅವರಿಗೆ ಕಡಿಮೆ ವೇತನ ಸಿಕ್ಕರೂ ಮನೆಯವರೆಗೆ ಹಣ ತೆಗೆದುಕೊಂಡು ಹೋಗುತ್ತಿಲ್ಲ, ಇದರಿಂದ ಅವರ ಕುಟುಂಬ, ಜೀವನ ಕಷ್ಟಕರವಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಸುಧಾರಣೆಗೆ ಮುಂದಾಗಬೇಕು ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಾದ ಹೆಚ್.ವಿಶ್ವನಾಥ್ ಉಪನ್ಯಾಸ ನೀಡಿದರು. ಶ್ರೀಬಸವಪ್ರಭು ಸ್ವಾಮಿಜೀಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ.ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಅಪರ ಜಿಲ್ಲಾಧಿಕಾರಿ ಸೈಯದಾ ಆಫ್ರಿನ್ ಭಾನು ಎಸ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಬಸವ ಬಳಗದ ಮಹಾಂತೇಶ್ ಅಗಡಿ, ಜಿ.ಕ.ಸಾ.ಪ ಅಧ್ಯಕ್ಷರಾದ ವಾಮದೇವಪ್ಪ, ರುದ್ರಮುನಿ ಆವರಗೆರೆ, ರಮೇಶ್ ಹಾಗೂ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ ಅವರು ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು. ವೇದಿಕೆ ಕಾರ್ಯಕ್ರಮ ಮುನ್ನ ಬಸವ, ಬುದ್ದ, ಅಂಬೇಡ್ಕರ್ ಅವರ ಸಂವಿಧಾನ ಜಾಗೃತಿ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವತಿಯಿಂದ ಯುವ ಸಮೃದ್ದಿ ಸಮ್ಮೇಳ ಬೃಹತ್ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜಿಲ್ಲೆಯಲ್ಲಿ 15 ದಿನಗಳಿಂದ ವಿಪತ್ತು ನಿರ್ವಾಹಣಾ ತರಬೇತಿ ನೀಡಿದ ತರಬೇತುದಾರರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.