SUDDIKSHANA KANNADA NEWS/ DAVANAGERE/ DATE:25-11-2023
ಬೆಂಗಳೂರು: ಜಾತಿಗಣತಿ ವರದಿ ವಿಚಾರ ಈಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪರ- ವಿರೋಧ ವ್ಯಕ್ತವಾಗುತ್ತಲೇ ಇದೆ. ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವರದಿಯನ್ನು ಸರ್ಕಾರ ಮೊದಲು ಅಂಗೀಕರಿಸಲಿ. ಮೊದಲು ಓದಲಿ, ಅದರಲ್ಲಿರುವ ಅಂಶಗಳ ಬಗ್ಗೆ ತಿಳಿದುಕೊಳ್ಳಲಿ. ಅದನ್ನು ಬಿಟ್ಟು ವರದಿ ಸಲ್ಲಿಕೆ ಮುನ್ನವೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದರೆ, ಶಾಮನೂರು ಶಿವಶಂಕರಪ್ಪರು ಜಾತಿಗಣತಿ ವರದಿ ಅವೈಜ್ಞಾನಿಕವಾಗಿದ್ದು, ವರದಿ ಒಪ್ಪಲು ಸಾಧ್ಯವಿಲ್ಲ. ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.
ಈ ವಿಚಾರ ಈಗ ಸಿಎಂ ಸಿದ್ದರಾಮಯ್ಯರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಶಾಮನೂರು ಶಿವಶಂಕರಪ್ಪರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿತ್ತು. ಈಗ ಮತ್ತೆ ಜಾತಿಗಣತಿ ವಿಚಾರ ಭುಗಿಲೆದ್ದಿದೆ. ಈ ಹಿಂದೆಯೇ ಈ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದು. ಎಲ್ಲೋ ಕುಳಿತು ವರದಿ ಸಿದ್ಧಪಡಿಸಿದರೆ ಒಪ್ಪಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ವರದಿ ತಯಾರಿಸಿಲ್ಲ ಎಂದಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರಾಗಿರುವ ಕಾರಣಕ್ಕೆ ಶಾಮನೂರು ಶಿವಶಂಕರಪ್ಪರ ವಾದಕ್ಕೆ ಬಲ ದೊರಕುತ್ತದೆ. ವೀರಶೈವ ಲಿಂಗಾಯತ ಸಮುದಾಯವೇ ಅವರ ಬೆಂಬಲವಾಗಿ ನಿಲ್ಲುತ್ತದೆ. ಹಾಗಾಗಿ, ಮತ್ತೆ
ವೀರಶೈವ ಲಿಂಗಾಯತರನ್ನು ಎದುರು ಹಾಕಿಕೊಳ್ಳುವ ಪ್ರಸಂಗ ಸಿಎಂ ಸಿದ್ದರಾಮಯ್ಯರಿಗೆ ಬಂದಿದೆ. ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ, ಸೂಕ್ತ ಹುದ್ದೆ ನೀಡದಿರುವ ವಿಚಾರ ಮಾಸುವ ಮುನ್ನವೇ ಜಾತಿಗಣತಿ ವಿಚಾರ ರಾಜ್ಯ ಸರ್ಕಾರಕ್ಕೆ
ಕಗ್ಗಂಟಾಗಿ ಪರಿಣಮಿಸಿದೆ.
ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಜಾತಿ ಗಣತಿ ವರದಿಯು ಸಮರ್ಪಕವಾಗಿಲ್ಲ. ಇದೊಂದು ಅವೈಜ್ಞಾನಿಕ ವರದಿ. ವೈಜ್ಞಾನಿಕವಾಗಿ ಮತ್ತೆ ಸಮಿಕ್ಷೆಯಾಗಬೇಕು ಎಂದು ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ”ಜಾತಿ ಗಣತಿ ಲೋಪದಿಂದ ಕೂಡಿದೆ ಎಂದು ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಅಂತ ಅದೆಲ್ಲ ಲೀಕ್ ಆಗಿದೆ. ಇದರಲ್ಲಿ ಲಿಂಗಾಯತ ವೀರಶೈವ ಎಂದು ಬರೆದುಕೊಂಡೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವು ದೋಷಗಳಿರುವ ಈ ವರದಿಗೆ ಪ್ರತಿಯೊಬ್ಬರ ವಿರೋಧ ಇದೆ. ಈಗಾಗಲೇ ಅದು ವ್ಯಕ್ತವಾಗುತ್ತಿದೆ. ಈ ವಿಚಾರ ಕುರಿತಂತೆ ನಾವು ಸಹ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡುತ್ತೇವೆ. ಈಗಾಗಲೇ ಒಕ್ಕಲಿಗ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್ ನ ಒಕ್ಕಲಿಗ ಶಾಸಕರು, ನಾಯಕರು ವಿರೋಧ ವ್ಯಕ್ತಪಡಿಸುವ ಪ್ರತಿಗೆ ಸಹಿ ಹಾಕಿದ್ದಾರೆ. ಈ ರೀತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಶಾಸಕರು ಸಹಿ ಸಂಗ್ರಹಿಸಿ ಸಲ್ಲಿಕೆ ಮಾಡುತ್ತೇವೆ. ವರದಿ ಕುರಿತು ಈಗಾಗಲೇ ಮೌಖಿಕವಾಗಿ ಸಿಎಂ ಬಳಿ ಚರ್ಚೆ ನಡೆಸಿದ್ದೇವೆ, ನೋಡೋಣ, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಜಾತಿಗಣತಿ ವರದಿಗೆ ವಿರೋಧ:
ಇನ್ನು ದಾವಣಗೆರೆಯಲ್ಲಿಯೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ದಾವಣಗೆರೆ ತಾಲೂಕು ಘಟಕವು ವಿರೋಧ ವ್ಯಕ್ತಪಡಿಸಿದ್ದು, ಜಾತಿಗಣತಿ ವರದಿಯು ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವು ಅಂಗೀಕರಿಸಬಾರದು ಎಂದು ಆಗ್ರಹಿಸಿದೆ.
ಜಾತಿಗಣತಿ ವರದಿ ತಯಾರಿಸುವಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಎಲ್ಲೋ ಕುಳಿತು ವರದಿ ಸಿದ್ದಪಡಿಸಲಾಗಿದೆ ಎಂದು ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪನವರೇ ಹೇಳಿದ್ದಾರೆ. ಆದ್ದರಿಂದ ಒಳ್ಳೆಯ ಆಯೋಗ ರಚನೆ ಮಾಡಬೇಕು ಹಾಗೂ ಮನೆಮನೆಗೆ ತೆರಳಿ ಸರ್ವೆ ನಡೆಸಿ ವರದಿ ತಯಾರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಶಿವಯೋಗಪ್ಪ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
2015 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಜಾತಿಗಣತಿ ವರದಿ ರಚಿಸಿದ್ದು ಹೆಚ್. ಕಾಂತರಾಜು ನೇತೃತ್ವದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ದತ್ತಾಂಶ ಆಧರಿಸಿ ಜಾತಿಗಣತಿ ವರದಿ ಸಿದ್ಧಿಪಡಿಸಲು ರಚಿಸಿದ್ದರು. ಆಗಿನ ಮುಖ್ಯಮಂತ್ರಿ ಅವಧಿಯಲ್ಲಿ ಆಯೋಗ ಸಿದ್ಧಪಡಿಸಿ ಸರ್ಕಾರಕ್ಕೆ ಒಪ್ಪಿಸಲು ಸಿದ್ಧರಾದಾಗ ಮುಖ್ಯಮಂತ್ರಿಗಳು ಆ ವರದಿಯನ್ನು ಸ್ವೀಕರಿಸದೆ ಅವರ ಕಾಲಾವಧಿಯನ್ನು ಮುಗಿಸಿದರು. ಈಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದು ಜಾತಿಗಣತಿಯ ವರದಿಯನ್ನು ತೆಗೆದುಕೊಳ್ಳಲು ಸಿದ್ದರಾಗಿದ್ದಾರೆ. ಈಗ ಆ ವರದಿ ಪರಿಗಣಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ಉಪಮುಖ್ಯಮಂತ್ರಿಗಳು ಅವರ ಸಮಾಜದ ವತಿಯಿಂದ ವರದಿಗೆ ವಿರೋಧವಾದ ಕಾರಣ ಅವರು ಸಹ ವಿರೋಧಿ ಪತ್ರಕ್ಕೆ ಸಹಿ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಒಂದು ರೀತಿಯಲ್ಲಿ ಮುಖ್ಯಮಂತ್ರಿಗಳು ಒಡೆದ ಹಾಗೆ ಮಾಡುತ್ತಾರೆ, ಉಪಮುಖ್ಯಮಂತ್ರಿಗಳು ಸತ್ತ ಹಾಗೆ ಮಾಡುತ್ತಾರೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಜಾತಿಗಣತಿ ಬಗ್ಗೆ ಮುಖ್ಯಮಂತ್ರಿಗಳು ಜಾತಿ ಜಾತಿಗಳ ನಡುವೆ ಒಡೆದಾಡುವ ನೀತಿ ಅನುಸರಿಸಲಿಕ್ಕೆ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವ ಮೂಲಕ ಈ ಅವಧಿಯಲ್ಲಿ ವರದಿ ಮಂಡಿಸಲು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.
ಮನೆಮನೆಗಳಿಗೆ ಹೋಗಿ ಪೂರ್ಣವಾಗಿ ಮಾಹಿತಿ ಪಡೆಯದೆ ಹೊರಗೆ ವರದಿ ಸಿದ್ಧಪಡಿಸಲಾಗಿದೆ ಮತ್ತು ವರದಿಯಲ್ಲಿ ನಮ್ಮ ಸಮಾಜದ ಕೋಡ್ ಇಲ್ಲದೆ ಇರುವುದು ಕೆಲವು ಉಪಜಾತಿಗಳಾಗಿ ಸೇರಿಸಿ ಬರೆದುಕೊಂಡಿರುವುದಾಗಿ ತಿಳಿದು ಬಂದಿದೆ. ಶಾಮನೂರು ಶಿವಶಂಕರಪ್ಪ ಈ ವರದಿ ಎಲ್ಲಿಯೋ ಕುಳಿತು ಸಿದ್ದಪಡಿಸಿದ ವರದಿಯಾಗಿದೆ ಎಂದಿದ್ದಾರೆ. ವೀರಶೈವ ಲಿಂಗಾಯಿತ ಜಾತಿ ಎಂದು ಬರೆದುಕೊಳ್ಳದೆ ಹಿಂದುಗಳು ಮತ್ತು ಉಪಜಾತಿಗಳನ್ನು ಬರೆದುಕೊಂಡಿದ್ದು ಇದು ನಮ್ಮ ಸಮಾಜವನ್ನು ಒಡೆದು ಆಳುವ ನೀತಿಯಾಗಿದೆ ಎಂದು ನಮ್ಮ ಅಧ್ಯಕ್ಷರು ಖಂಡಿಸಿದ್ದಾರೆ. ಮೂಲಪ್ರತಿ ಇಲ್ಲದೆ ಮತ್ತು ಕಾರ್ಯದರ್ಶಿಗಳು, ಮುಖ್ಯಸ್ಥರ ಸಹಿ ಮಾಡದೆ ಇರುವ ಈ ಜಾತಿಗಣತಿಯನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ನಮ್ಮ ಸಮಾಜ ಯಾವಾಗಲೂ ಇವನಾರವ ಇವನಾರವ ಎನ್ನದೇ ಎಲ್ಲರೂ ನಮ್ಮವರೆಂದು ಬಸವ ತತ್ವದಲ್ಲಿ ನಡೆದುಕೊಂಡು ಬಂದಿದೆ. ಮುಂದೆಯೂ ಅದರಂತೆ ನಡೆಯುತ್ತದೆ ಎಂದರು.
ನಾವು ಜಾತಿವಾದಿಗಳಲ್ಲ. ಯಾವುದೇ ಧರ್ಮದ ಉಪ ಪಂಗಡಗಳ ವಿರೋಧಿಗಳಲ್ಲ. ಪೂರ್ಣವಾಗಿ ಮನೆ ಮನೆಗೆ ಹೋಗಿ ಸರಿಯಾದ ಮಾಹಿತಿ ಪಡೆದು ವರದಿಯನ್ನು ಮತ್ತೊಮ್ಮೆ ಸಿದ್ಧಪಡಿಸಬೇಕು ಎಂಬುದು ನಮ್ಮ ಬೇಡಿಕೆ. ನಮ್ಮ ಪ್ರಕಾರ ಈಗಾಗಲೇ 2 ಕೋಟಿ 40 ಲಕ್ಷಕ್ಕಿಂತ ಹೆಚ್ಚು ನಮ್ಮ ಸಮಾಜ ಇರುವುದಾಗಿ ತಿಳಿದು ಬಂದಿದೆ ನಾವು ಶಾಮನೂರು ಶಿವಶಂಕರಪ್ಪರ ಆಶಯದಂತೆ ನಡೆದುಕೊಳ್ಳುತ್ತೇವೆ ಎಂದರು.