
SUDDIKSHANA KANNADA NEWS/ DAVANAGERE/ DATE:19-04-2025
ದಾವಣಗೆರೆ: ಪ್ರಚೋದನಕಾರಿ ಮಾತು ಆಡಿದ್ದ ಕಾಂಗ್ರೆಸ್ ನ ಮಾಜಿ ಮಹಾನಗರ ಪಾಲಿಕೆ ಸದಸ್ಯ ಅಹಮದ್ ಕಬೀರ್ ಖಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರಚೋದನಕಾರಿ ಹೇಳಿಕೆ ನೀಡಿದ್ದು ಅವರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ ಮತ್ತು ಖಂಡನೀಯ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಆಕ್ರೋಶ ವ್ಯಕ್ತಪಡಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬೀರ್ ಖಾನ್ ದಾಂಧಲೆ ಸೃಷ್ಟಿಸಲು, ಸಾರ್ವಜನಿಕ ಆಸ್ತಿಗಳ ನಾಶ ಮಾಡಬೇಕು. ಬೆಂಕಿ ಹಚ್ಚಬೇಕು. ಗಲಾಟೆ ಮಾಡಬೇಕು ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಖಂಡನೀಯ. ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ದೂರಿನಲ್ಲಿ ಸೆಕ್ಷನ್ ಗಳನ್ನು ಹಾಕುವಾಗ ಸಹ ಪೊಲೀಸರ ಕೈಕಟ್ಟಿ ಹಾಕಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ನೇರವಾಗಿ ಈ ರೀತಿಯ ಘಟನೆಗಳಿಗೆ ಬೆಂಬಲವನ್ನು ಸಚಿವರೇ ಸೂಚಿಸಿದಂತಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಹಿಂದೂಗಳ ಮೇಲೆ ದೌರ್ಜನ್ಯ ಹಲ್ಲೆ ಸೇರಿದಂತೆ ಶಾಂತಿ ಕದಡುವ ಗಲಬೆ ಸೃಷ್ಟಿಸುವಂತಹ ಅನೇಕ ಘಟನೆಗಳು ನಮ್ಮ ಕಣ್ಮುಂದೆ ಇವೆ. ಮುಖ್ಯಮಂತ್ರಿಗಳು ಗೃಹ ಸಚಿವರು ಇಂದು ಮುಸಲ್ಮಾನರ ತುಷ್ಟೀಕರಣಕ್ಕೆ ನಿಂತಿದ್ದು, ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ ನಡೆಸಿದ ಘಟನೆಗಳು ನಮ್ಮ ಮುಂದಿದ್ದು, ಈ ತರಹದ ಹಿಂದೂಗಳನ್ನು ಗುರಿಯಾಗಿಸಿ ನಡೆಸಿದ ಗಲಾಟೆಗಳು ದಾಂಧಲೆ ಪ್ರಕರಣಗಳಲ್ಲಿ ಗಲಭೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಗಲಭೆಕೋರರ ರಕ್ಷಣೆಗೆ ಇಂದು ಇಡೀ ಸರ್ಕಾರವೇ ನಿಂತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಕ್ಸ್ ತಿದ್ದುಪಡಿ ಕಾಯ್ದೆ ವಕ್ಸ್ ಕಾಯ್ದೆಯಲ್ಲಿ ನ ಹಲವಾರು ನ್ಯೂನತೆಗಳನ್ನು ಸರಿಪಡಿಸಲು ಒಂದು ಅಸ್ತ್ರವಾಗಿದೆ. ಪ್ರಭಾವಿಗಳು ವಕ್ಸ್ ಆಸ್ತಿಯನ್ನು ಕಬಳಿಸಿರುವ ವಿರುದ್ಧ ಬಹುದೊಡ್ಡ ಆಕ್ರೋಶ ಮುಸಲ್ಮಾನ್ ಬಂಧುಗಳಲ್ಲಿದೆ. ಕಾಯ್ದೆ ವಿರೋಧಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಕಬೀರ್ ಖಾನ್ ಗೆ ಈ ಪ್ರಕರಣದಲ್ಲಿ ರಾಷ್ಟ್ರ ವಿರೋಧಿ ಕಾಯ್ದೆಗಳನ್ನು ಬಳಸಿ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು. ಪೊಲೀಸರಿಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಆರೋಪಿಯನ್ನು ರಕ್ಷಿಸುವಲ್ಲಿ ಮುಂದಾದರೆ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮಾಜಿ ಸದಸ್ಯರಾದ ಪೈಲ್ವಾನ್ ಕೆ. ಎಂ. ವೀರೇಶ್, ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.