SUDDIKSHANA KANNADA NEWS/ DAVANAGERE/ DATE-06-05-2025
ದಾವಣಗೆರೆ: ಚನ್ನಗಿರಿ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ಹಳ್ಳಿಮಲ್ಲಾಪುರ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ತಣಿಗೆರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಮಾಸಿಕ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲರೂ ಸಮ್ಮತಿ ಸೂಚಿಸಿದರು. ಹಾಗಾಗಿ, ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು. ಗೌರವಾಧ್ಯಕ್ಷರಾಗಿ ಲಲಿತಮ್ಮ, ಕಾರ್ಯದರ್ಶಿಯಾಗಿ ಮಂಜಪ್ಪ ಚಿರಡೋಣಿ, ಖಜಾಂಚಿಯಾಗಿ ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಶಾಸಕ ಶಿವಗಂಗಾ ವಿ. ಬಸವರಾಜ್ ಸಮ್ಮುಖದಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷರಾದ ಬಳಿಕ ಮಾತನಾಡಿದ ರಮೇಶ್ ಹಳ್ಳಿಮಲ್ಲಾಪುರ ಹಾಗೂ ಶಿವಕುಮಾರ ತಣಿಗೆರೆ ಅವರು, ನ್ಯಾಯಬೆಲೆ ಅಂಗಡಿ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾಲೀಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. ಬಯೋಮೆಟ್ರಿಕ್, ಇಂಟರ್ ನೆಟ್, ವೆಬ್ ಸೈಟ್ ಸಮಸ್ಯೆ ಸೇರಿದಂತೆ ಹಲವು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಹಕರು ಬಂದಾಗ ನಿಧಾನಗತಿಯಲ್ಲಿ ವೆಬ್ ಸೈಟ್ ತೆರೆಯುತ್ತದೆ. ಈ ವೇಳೆ ಗ್ರಾಹಕರು ಸುಮಾರು ಹೊತ್ತು ಕಾಯುವಂಥ ಸನ್ನಿವೇಶ ನಿರ್ಮಾಣ ಆಗುತ್ತದೆ. ಹಾಗಾಗಿ, ರಾಜ್ಯ ಸರ್ಕಾರವು ಸರ್ವರ್ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರ ವಿನಾಕಾರಣ ಆರೋಪ ಮಾಡುವವರೂ ಇದ್ದಾರೆ. ಹಾಗಾಗಿ, ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನ್ಯಾಯಬೆಲೆ ಅಂಗಡಿ ನಡೆಸಿಕೊಂಡು ಹೋಗುವವರ ಪರವಾಗಿ ಯಾವಾಗಲೂ ನಾವು ನಿಲ್ಲುತ್ತೇವೆ.
ಮತ್ತಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಗ್ರಾಹಕರು, ನ್ಯಾಯಬೆಲೆ ಅಂಗಡಿ ಮಾಲೀಕರು, ಸರ್ಕಾರದ ನಡುವಿನ ಕೊಂಡಿಯಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಶಿವಗಂಗಾ ವಿ. ಬಸವರಾಜ್ ಮಾತನಾಡಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಗ್ರಾಹಕರ ಜೊತೆ ಬಾಂಧವ್ಯದ ಜೊತೆಗೆ ಒಳ್ಳೆಯ ಸೇವೆ ನೀಡಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚನೆ ನೀಡುವಂತೆ ಹೇಳಿದರು. ಯಾವುದೇ ಆರೋಪ ಬಾರದಂತೆ ಜನರಿಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಆಹಾರ ಇಲಾಖೆ ಸಿಬ್ಬಂದಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು, ಕಾರ್ಯದರ್ಶಿಗಳು ಮತ್ತಿತರರು ಹಾಜರಿದ್ದರು. ಶಶಿಧರ ಮಲ್ಲಹಾಳ, ವಸಂತಕುಮಾರ ಹಳ್ಳಿ ಮಲ್ಲಾಪುರ, ಸಂಜು ಪಾಟೀಲ್, ಪರಮೇಶ್ವರಪ್ಪ ಅಬ್ಲಿಗೆರೆ, ಸರ್ಜಿ ರಮೇಶ, ಗೋಪಿ, ಅಜ್ಜಯ್ಯ, ಸೈಯಾದ ಮಾಬು, ಅಣ್ಣಪ್ಪ, ರಾಜಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಹಳ್ಳಿಮಲ್ಲಾಪುರ, ಉಪಾಧ್ಯಕ್ಷರಾದ ಶಿವಕುಮಾರ ತಣಿಗೆರೆ ಮತ್ತು ಪದಾಧಿಕಾರಿಗಳನ್ನು ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಅವರು ಅಭಿನಂದಿಸಿದ್ದಾರೆ.