SUDDIKSHANA KANNADA NEWS/ DAVANAGERE/ DATE:08-02-2025
ದಾವಣಗೆರೆ: ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಸ್ವಾಮಿ, ವಾರ್ಡನ್ ಬಂಧಿಸಲಾಗಿದೆ.
ಘಟನೆ ಹಿನ್ನೆಲೆ:
ಹರಿಹರ ತಾಲೂಕಿನ ಜಿಗಳಿ ಗ್ರಾಮದ ರಾಮಪ್ಪ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 11 ವರ್ಷದ ಮಗನನ್ನು ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದ. ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಶಿಥಿಲಗೊಂಡಿದ್ದು ಪ್ರಾಣಕ್ಕೆ ಸಂಚಕಾರವನ್ನುಂಟು ಮಾಡುತ್ತದೆ ಎಂದು ಗೊತ್ತಿದ್ದರು ಸಹ ಫೆಬ್ರವರಿ 3ರಂದು ಬೆಳಿಗ್ಗೆ 9 ಗಂಟೆಗೆ ಶಾಲೆಯ ವಾರ್ಡನ್ ನಿರ್ಲಕ್ಷ್ಯ ತೋರಿದ್ದಾರೆ.
ತನ್ನ ಪುತ್ರ ಹಾಗೂ ಆತನ ಸ್ನೇಹಿತರಿಗೆ ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಗೆ ಉರಿ ಹಾಕಿ ಬರುವಂತೆ ಹೇಳಿ ಕಳುಹಿಸಿದ್ದಾರೆ. ಬಾಯ್ಲರ್ ಗೆ ಉರಿ ಹಾಕುತ್ತಿರುವಾಗ ಶಿಥಿಲಗೊಂಡಿದ್ದ ಬಾಯ್ಲರ್ ಬಾಲಕನ ಮೇಲೆ ಬಿದ್ದಿತ್ತು. ದೇಹದ
ಒಳಭಾಗದಲ್ಲಿ ಪೆಟ್ಟು ಬಿದ್ದಿದ್ದರೂ ಸಹ ಯಾವುದೇ ಚಿಕಿತ್ಸೆಯನ್ನು ಕೊಡಿಸಿಲ್ಲ. ಬಾಲಕನ ಸಾವಿಗೆ ಶಾಲೆಯ ಮುಖ್ಯೋಪಾಧ್ಯಾಯರು, ವಾರ್ಡನ್ ಹಾಗೂ ಶಾಲೆಯ ಆಡಳಿತ ಮಂಡಳಿಯವರು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ
ಆರೋಪಿಸಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ.ಎಂ ಸಂತೋಷ, ಮಂಜುನಾಥ ಮಾರ್ಗದರ್ಶನದಲ್ಲಿ ದಾವಣಗೆರೆ ನಗರ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಬಿ. ಅವರ ನೇತೃತ್ವದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್
ಇನ್ಸ್ ಪೆಕ್ಟರ್ ಹೆಚ್. ಎಸ್. ಸುನೀಲ್ ಕುಮಾರ್, ಪಿಎಸ್ಐ ಲತಾ.ಆರ್ ರವರಿಗೆ ಪ್ರಕರಣದ ಸೂಕ್ತ ತನಿಖೆಯನ್ನು ಮಾಡಿ ತಪ್ಪಿಸ್ಥರನ್ನು ಬಂಧಿಸುವಂತೆ ಸೂಚಿಸಿದ್ದರು.
ಪ್ರಕರಣದ ಆರೋಪಿತರಾದ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಾರ್ಡನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.