ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಿತಿಮೀರಿದ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕೀಯದಿಂದ, ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡವರನ್ನು ವಂಚಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸಿಕ್ಕ ನಂತರ, ಈ ಅಹಿಂದ ವರ್ಗಗಳಲ್ಲಿ ಕೂಡ ಬೇಧಭಾವ ಮಾಡುತ್ತಿರುವ ನಿಮಗೆ, ಹಿಂದುಳಿದ, ದಲಿತ ಬಾಂಧವರು ಏನು ಅನ್ಯಾಯ ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಸ್ಥಾನಗಳ ಉದಾರ ಹಂಚಿಕೆ ವಿರುದ್ಧ ಆಕ್ರೋಶ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಫೆಬ್ರವರಿ 2026ರಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಒಂದು ಕಡೆ ಸುಮಾರು 54 ಜನರಿಗೆ ಹೊಸದಾಗಿ ರಾಜ್ಯ ಸಚಿವ ದರ್ಜೆಯ (MoS) ಸ್ಥಾನಮಾನ ನೀಡುವ ಮೂಲಕ ರಾಜಕೀಯ ಪುನರ್ವಸತಿ ಕಲ್ಪಿಸಲಾಗುತ್ತಿದೆ, ಇನ್ನೊಂದೆಡೆ ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಬಜೆಟ್‌ನಲ್ಲಿ ಭಾರೀ ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳ ಅನುದಾನವು 2022-23ಕ್ಕೆ ಹೋಲಿಸಿದರೆ ಶೇ. 50ಕ್ಕಿಂತ ಹೆಚ್ಚು ಕುಸಿದಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ (SCSP/TSP) ಯೋಜನೆಯ ಸುಮಾರು ₹27,630 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. “ರಾಜಕೀಯ ನಾಯಕರಿಗೆ ಸವಲತ್ತು ನೀಡಲು ಹಣವಿದೆ, ಆದರೆ ಶೋಷಿತ ವರ್ಗಗಳ ಅಭಿವೃದ್ಧಿಗೆ ಹಣದ ಕೊರತೆಯೇ?” ಎಂದು ಪ್ರಶ್ನಿಸಿದ್ದಾರೆ.





Leave a comment