
ನವದೆಹಲಿ: ಹರಿಯಾಣದ ಜನಪ್ರಿಯ ನೃತ್ಯಗಾರ್ತಿ ಹಾಗೂ ಗಾಯಕಿ ಸಪ್ನಾ ಚೌಧರಿ ಅವರು ತಮ್ಮ ಪತಿ, ನಟ-ಗಾಯಕ ವೀರ್ ಸಾಹು ಅವರೊಂದಿಗೆ ಆರು ವರ್ಷಗಳ ದಾಂಪತ್ಯ ಜೀವನದ ಬಳಿಕ ಅಧಿಕೃತವಾಗಿ ವಿಚ್ಛೇದನ ಪಡೆದಿರುವುದಾಗಿ ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ 36 ವರ್ಷ ವಯಸ್ಸಿನ ಸಪ್ನಾ ಚೌಧರಿ, ಸಂಬಂಧದಲ್ಲಿ ಉಂಟಾದ ಕಹಿ ಅನುಭವಗಳು ಹಾಗೂ ದಾಂಪತ್ಯದಲ್ಲಿ ಮೋಸದ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಮದುವೆಯ ಬಳಿಕ ತಾನು ತನ್ನ ಸ್ವಂತ ಗುರುತನ್ನು ಕಳೆದುಕೊಂಡಿದ್ದೆ ಎಂದು ನೋವು ತೋಡಿಕೊಂಡಿರುವ ಅವರು, ಭವಿಷ್ಯದಲ್ಲಿ ತಾನು ಮತ್ತೆ ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಸಪ್ನಾ ಚೌಧರಿ, ಸಂಬಂಧ ಚೆನ್ನಾಗಿದ್ದಾಗ ಜೊತೆಯಲ್ಲಿದ್ದೆವು, ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ. ಮದುವೆಯಾದ ಬಳಿಕವೂ ಪತ್ನಿಯರಿಗೆ ಮೋಸ ಮಾಡುವ ಗಂಡಂದಿರ ಕುರಿತು ಪ್ರತಿಕ್ರಿಯಿಸಿದ ಅವರು, “ಒಂದು ಕಡೆ ತಿನ್ನಲಾಗದವರು ಎಲ್ಲಿಯೂ ತಿನ್ನಲು ಸಾಧ್ಯವಿಲ್ಲ” ಎಂದು ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಗ್ ಬಾಸ್ ನಂತರ ಮದುವೆಯಾಗಿ ಉತ್ತಮ ಸೊಸೆ, ಪತ್ನಿ ಮತ್ತು ತಾಯಿಯಾಗಿ ಕರ್ತವ್ಯ ನಿರ್ವಹಿಸಿದರೂ, ತಾನು ಕೇವಲ ಇತರರ ಸಂಬಂಧಗಳ ಗುರುತಿನಲ್ಲಿಯೇ ಕಳೆದುಹೋಗಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ. 2020ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ವಿಚ್ಛೇದನ ಮತ್ತು ಮೋಸದ ಸುಳಿವು: ಆರು ವರ್ಷಗಳ ದಾಂಪತ್ಯಕ್ಕೆ ಅಂತ್ಯಹಾಡಿರುವ ಸಪ್ನಾ ಚೌಧರಿ, ಅನೈತಿಕ ನಡವಳಿಕೆ ಹಾಗೂ ಮೋಸದ ವಿರುದ್ಧ ನೇರವಾದ ಮಾತುಗಳನ್ನಾಡಿದ್ದಾರೆ.
ಸ್ವಂತ ಗುರುತಿನ ನಷ್ಟ: ಮದುವೆ ಮತ್ತು ಕುಟುಂಬದ ಜವಾಬ್ದಾರಿಯಲ್ಲಿ ಸಿಲುಕಿ ತನ್ನದೇ ಆದ ಸ್ವಯಂ-ಕಾಳಜಿ ಹಾಗೂ ಅಸ್ಮಿತೆಯನ್ನು ಕಳೆದುಕೊಂಡಿದ್ದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಮರುಮದುವೆ ನಿರಾಕರಣೆ: ಪ್ರೀತಿಯಲ್ಲಿ ಆಳವಾಗಿ ಮುಳುಗುವ ತನಗೆ ಈ ಸಂಬಂಧದಿಂದ ದೊಡ್ಡ ಪಾಠ ಕಲಿತಿದ್ದು, ಮುಂದಿನ ಜೀವನದಲ್ಲಿ ಎಂದಿಗೂ ಮದುವೆಯಾಗುವುದಿಲ್ಲ ಎಂದು ನಟಿ ಖಡಕ್ ಆಗಿ ತಿಳಿಸಿದ್ದಾರೆ.
ಕಳೆದ ಜೂನ್‌ನಲ್ಲಿ ದೌರ್ಜನ್ಯ ದೂರು: ಈ ವರ್ಷದ ಜೂನ್‌ನಲ್ಲಿ ದ್ವಾರಕ ಮಹಿಳಾ ನ್ಯಾಯಾಲಯವು ಸಪ್ನಾ ಚೌಧರಿ ಅವರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪತಿಗೆ ನಿರ್ಬಂಧಕಾಜ್ಞೆ ನೀಡಿತ್ತು. ಪತಿಯಿಂದ ಹಲ್ಲೆ ಹಾಗೂ ಬೆದರಿಕೆ ಎದುರಿಸಿದ್ದಾಗಿ ಅವರು ದೂರು ದಾಖಲಿಸಿದ್ದರು.




