SUDDIKSHANA KANNADA NEWS/ DAVANAGERE/ DATE:07-07-2023
ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿರುವ ಪುಷ್ಕರಣೆಗೆ (Santhebennur Pushkarini) ವಾರಾಂತ್ಯದ ದಿನಗಳಲ್ಲಿ ಹೆಚ್ಚಾಗಿ ಜನರು ಬರುತ್ತಾರೆ. ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣಕ್ಕೆ ಇಲ್ಲಿನ ಸೌಂದರ್ಯ ಸವಿದು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಲು ಬರುತ್ತಾರೆ. ಆದ್ರೆ, ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳು, ಚನ್ನಗಿರಿ ತಾಲೂಕಿನ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರ ದಂಡು ಹರಿದುಬರತೊಡಗಿದೆ.
ಸಂತೆಬೆನ್ನೂರು ಚನ್ನಗಿರಿ ತಾಲೂಕಿನಲ್ಲಿದೆ. ಇಲ್ಲಿನ ಪುಷ್ಕರಣೆ (Santhebennur Pushkarini)ಸುಂದರ ಪ್ರವಾಸಿ ತಾಣವೂ ಹೌದು. ಕರುನಾಡು ಶಿಲ್ಪ ಕಲೆಗಳ ನೆಲೆವೀಡು. ಕಲೆ ಸಾಹಿತ್ಯದ ತವರೂರು. ಪ್ರವಾಸಿಗರಿಗೆ ಮುದ ನೀಡುವ ಒಂದು ಸುಂದರ ಪ್ರವಾಸಿ ತಾಣಕ್ಕೆ ಹುಡುಕಾಡುತ್ತಾರೆ. ಇಲ್ಲಿಗೆ ಬರುವವರು ಪುಷ್ಕರಣೆಯ ಸೌಂದರ್ಯಕ್ಕೆ ಮಾರು ಹೋಗುತ್ತಾರೆ.
ಸಂತೇಬೆನ್ನೂರಿನಲ್ಲಿ ಸುಂದರ ಪುಷ್ಕರಣೆ (Santhebennur Pushkarini) ಪುರಾತತ್ವ ಇಲಾಖೆಗೆ ಕೆಲವು ವರ್ಷಗಳ ಹಿಂದೆಯಷ್ಟೇ ಸೇರ್ಪಡೆಯಾಗಿದೆ. ಈ ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳ ಬೆಳಕಿಗೆ ಬಂದಿಲ್ಲ ಅನ್ನೋ ಕೊರಗು ಸ್ಥಳೀಯರಲ್ಲಿ ಈಗಲೂ ಕಾಡುತ್ತಿದೆ. ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡುತ್ತಿದ್ದಂತೆ ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬಂದು ಪುಷ್ಕರಣೆಯ ಸೌಂದರ್ಯದ ಸವಿ ಸವಿಯುವ ಜೊತೆಗೆ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು ಖುಷಿಪಡುತ್ತಿದ್ದಾರೆ.
ಮೊದಲೆಲ್ಲಾ ಶನಿವಾರ ಮತ್ತು ಭಾನುವಾರ ಮಾತ್ರ ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದರು. ಆದ್ರೆ, ಈಗ ಪ್ರತಿದಿನವೂ ಜನಸಂದಣಿ ಇರುತ್ತದೆ. ಶಕ್ತಿ ಯೋಜನೆಯಿಂದ ಪುಷ್ಕರಣೆಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಚನ್ನಗಿರಿ ತಾಲೂಕಿನ ಗ್ರಾಮಗಳ ಮಹಿಳೆಯರು ಮತ್ತು ಕಾಲೇಜು ಯುವತಿಯರು ಹೆಚ್ಚಾಗಿ ಬರುತ್ತಿರುವುದರಿಂದ ಆದಾಯವೂ ಗಣನೀಯವಾಗಿ ಪುಷ್ಕರಣೆ (Santhebennur Pushkarini) ಆಡಳಿತ ಮಂಡಳಿಗೆ ಸಿಗುತ್ತಿದೆ.
ಪುಷ್ಕರಣೆ ವಿಶೇಷ ಏನು…?
10 ಎಕೆರೆಯಷ್ಟು ವಿಶಾಲವಾದ ಈ ಪ್ರದೇಶ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪುಷ್ಕರಣೆ (Santhebennur Pushkarini)ಹತ್ತು ಹಲವು ವಿಶೇಷತೆಗಳನ್ನ ಹೊಂದಿದ್ದರೂ ಪ್ರಚಾರ ಮಾತ್ರ ಕಡಿಮೆ. ಇದು ದಕ್ಷಿಣ ಭಾರತದಲ್ಲಿರುವ ಏಕೈಕ ಅತೀ ಸುಂದರ ಪುಷ್ಕರಣೆ (Santhebennur Pushkarini)ಎಂಬ ಖ್ಯಾತಿ ಹೊಂದಿದೆ. 235 ಅಡಿ ಉದ್ದ, 245 ಅಡಿ ಅಗಲದ ಧ್ವಜಾಯದಲ್ಲಿ ಈ ಪುಷ್ಕರಣೆಯನ್ನ ನಿರ್ಮಿಸಲಾಗಿದೆ. ಸುತ್ತಲು ಎಂಟು ದಿಕ್ಕುಗಳಿಗೂ ಆಯಾ ದಿಕ್ಪಾಲಕರ ಹೆಸರಿನ ಮಂಟಪ ನಿರ್ಮಿಸಲಾಗಿದ್ದು, ಈಗ 6 ಮಾತ್ರ ಮಂಟಪಗಳಿವೆ. ಅಲ್ಲದೇ ಕೊಳದ ಸುತ್ತ 44 ಚಿಕ್ಕ ಪಾವಟಿಗೆಗಳಿವೆ.
ಈ ಸುದ್ದಿಯನ್ನೂ ಓದಿ:
Siddaramaiah Budget: ಸಿಎಂ ಸಿದ್ದರಾಮಯ್ಯ ಮಂಡಿಸಿದ ದಾಖಲೆ ಬಜೆಟ್ ನಲ್ಲಿ ಏನುಂಟು ಏನಿಲ್ಲ: ರೈತರಿಗೆ ಸಿಂಹಪಾಲು, ಗ್ಯಾರಂಟಿಗಳಿಗೆ ಹಣ ಮೀಸಲು
ಸ್ವಾಭಾವಿಕ ಜಲಪ್ರಾಪ್ತಿಯಿಲ್ಲ:
ಈ ಪುಷ್ಕರಣಿಗೆ ಸ್ವಾಭಾವಿಕ ಜಲಪ್ರಾಪ್ತಿಯಿಲ್ಲ. ಮಳೆ ನೀರು ಸಂಗ್ರಹವಾಗಿ ನಂತರ ಪುಷ್ಕರಣೆಗೆ ಹರಿದು ಬರುತ್ತದೆ. ಮತ್ತೊಂದು ವಿಶೇಷವೆಂದರೆ ಈ ಪುಷ್ಕರಣೆಯನ್ನ ಒಂದು ದೊಡ್ಡ ಬಂಡೆಕಲ್ಲಿನ ಮೇಲೆ ನಿರ್ಮಿಸಲಾಗಿದೆ. ಕುಡಿಯುವ ನೀರು ಸಂಗ್ರಹಕ್ಕೆ ಈ ಪುಷ್ಕರಣೆಯನ್ನು ಹಿಂದಿನ ಕಾಲದಲ್ಲಿ ಬಳಸಿಕೊಳ್ಳಲಾಗಿತ್ತಂತೆ. ಈ ಪುಷ್ಕರಣೆಯಲ್ಲಿರುವ ದೊಡ್ಡ ಹೊಂಡವೊಂದಕ್ಕೆ ಆನೆ ಹೊಂಡವೆಂದು ಕರೆಯಲಾಗುತ್ತಿತ್ತಂತೆ. ಹೊಂಡದಲ್ಲಿ ಶೇಖರಣೆಯಾದ ನೀರು ಭೂಮಿ ಒಳಗಿನಿಂದ ಹಂತ, ಹಂತವಾಗಿ ಸಂಸ್ಕರಣೆಗೊಂಡು ಬರುತ್ತಿತ್ತಂತೆ. ಇದರಿಂದ ಕುಡಿಯಲು ನೀರು ತುಂಬಾ ಯೋಗ್ಯವಾಗುತ್ತಿತ್ತು ಎನ್ನಲಾಗಿದೆ.
ಸಂತೇಬೆನ್ನೂರನ್ನು 16ನೇ ಶತಮಾನದಲ್ಲಿ ಒಂದು ರಾಜಮನೆತನ ರಾಜಧಾನಿಯನ್ನಾಗಿ ಮಾಡಿಕೊಂಡು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಡಳಿತ ಮಾಡುತ್ತಿತ್ತಂತೆ. ಹಾಗಾಗಿ ಸಂತೇಬೆನ್ನೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿಂತ್ತು ಎನ್ನಲಾಗಿದೆ. ನಂತರ ವಿಜಯ ನಗರ ವಂಶಸ್ಥರಿಗೆ ಮುಸ್ಲಿಂರ ವಿರುದ್ಧ ಹೋರಾಟ ಮಾಡಲು ಸಹಾಯಕಾರಾಗಿದ್ದ ಕಾರಣ ಸಂತೇಬೆನ್ನೂರನ್ನು ರಾಜವಂಶಸ್ಥರಿಗೆ ನೀಡಿದ್ದರು ಎನ್ನಲಾಗಿದೆ.
ನಂತರ, ಕ್ರಿ.ಶ. 1558ರಲ್ಲಿ ಕೆಂಗಾ ಹನುಮಂತಪ್ಪ ನಾಯಕ ಸಂತೇಬೆನ್ನೂರಿನಲ್ಲಿ ಈ ಒಂದು ಸುಂದರ ಪುಷ್ಕರಣೆಯನ್ನು ಕಟ್ಟಿಸಿದರು ಎಂಬ ಇತಿಹಾಸವಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ತಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವವರೂ ಇಲ್ಲ. ಇಂಥ ಅದ್ಭುತ ಪ್ರೇಕ್ಷಣೀಯ ತಾಣದ ಬಗ್ಗೆ ಪುರಾತತ್ವ ಇಲಾಖೆ ಹಾಗೂ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಪಶ್ವಿಮ ದಿಕ್ಕಿನಲ್ಲಿ 58 ದೊಡ್ಡ ಮೆಟ್ಟಿಳುಗಳನ್ನ ಪುಷ್ಕರಣಿಗೆ ಇಳಿಯಲು ನಿರ್ಮಿಸಲಾಗಿದೆ. ಇಂಥ ಅಧ್ಬುತ ಪುಷ್ಕರಣಿ ಇದಾಗಿದೆ. ಹೀಗಾಗಿ ಇಲ್ಲಿದೆ ಪ್ರವಾಸಿಗರ ದಂಡೆ ಆಗಮಿಸುತ್ತದೆ. ಇದು ಕಾಲೇಜು ಯುವತಿಯರ ಮನ ಸೆಳೆಯುತ್ತಿದೆ.
ಇಲ್ಲಿಗೆ ಬಂದರೆ ಸಾಕು ಮನಸ್ಸು ನಿರಾಳವಾಗುತ್ತದೆ. ಸೆಲ್ಫಿ ತೆಗೆದುಕೊಳ್ಳದೇ ಹೋಗಲು ಮನಸ್ಸೇ ಬರುವುದಿಲ್ಲ. ಇಲ್ಲಿ ದೊಡ್ಮನೆ ಹುಡುಗ ಸೇರಿದಂತೆ ಕೆಲ ಚಿತ್ರಗಳ ಚಿತ್ರೀಕರಣವೂ ನಡೆದಿದೆ. ದೊಡ್ಮನೆ ಹುಡುಗ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯಿಸಿದ್ದರು. ಸಿನಿಮಾವೂ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಆಗ ಪುಷ್ಕರಣೆಯ ಸೊಬಗು ಹೇಗಿದೆ ಎಂಬುದನ್ನು ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ನಾವು ಸಹ ಪುಷ್ಕರಣೆಯ ಸೌಂದರ್ಯ ಸವಿಯಲು ಬಂದಿದ್ದೆವು. ಇಲ್ಲಿನ ಸೌಂದರ್ಯ ನಿಜಕ್ಕೂ ಮನಸ್ಸಿಗೆ ಆಹ್ಲಾದ ತಂದಿತು ಎನ್ನುತ್ತಾರೆ ಕಾಲೇಜು ಯುವತಿಯರು.
Santhebennur Pushkarini, Santhebennur Pushkarini Place, Santhebennur Pushkarini Beaty, Santhebennur Pushkarini Visit College Students, ಸಂತೇಬೆನ್ನೂರು ಪುಷ್ಕರಣೆ ಸೊಬಗಿಗೆ ಮಾರು ಹೋದ ಕಾಲೇಜು ಕನ್ಯೆಯರು, ಪುಷ್ಕರಣೆ ಸೊಬಗಿಗೆ ಫಿದಾ, ಸಂತೇಬೆನ್ನೂರು ಪುಷ್ಕರಣೆ ಸೌಂದರ್ಯ ಸವಿಯಲು ಬನ್ನಿ…
Comments 2