SUDDIKSHANA KANNADA NEWS/ DAVANAGERE/ DATE:28-03-2025
ದಾವಣಗೆರೆ: ಇಲ್ಲಿನ ಎಸ್ ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ವೈದರ ತಂಡ ಆತ್ಮಹತ್ಯೆಗೆ ಯತ್ನಿಸಿ ಆಮ್ಲೀಯ (ಆಸ್ಯಿಡ್) ಟಾಯ್ಲೆಟ್ ಕ್ಲೀನರ್ ಕುಡಿದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಅತ್ಯಂತ ಕ್ಲೀಷ್ಟ ಶಸ್ತ್ರ ಚಿಕಿತ್ಸೆಯ ಮೂಲಕ ಬದುಕಿಸಿದ್ದಾರೆ.
ಪಕ್ಕದ ಜಿಲ್ಲೆಯಿಂದ ಎಸ್ ಎಸ್ ನಾರಾಯಣ ಆಸ್ಪತ್ರೆಗೆ ಅತ್ಯಂತ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರೋಲಾಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ ಅವರ ವೈದ್ಯರ ತಂಡ ಸುಮಾರು ೬ ತಾಸು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಜೀವದಾನ ನೀಡಿದೆ.
ಈ ವಿರಳ ಹಾಗೂ ಕ್ಲೀಷ್ಟಕರ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡಿದ ಡಾ. ನಾಯ್ಕ ಅವರು, “ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ವ್ಯಕ್ತಿ ಹೈಡ್ರೋಕ್ಲೋರಿಕ್ ಆಸಿಡ್ ಮತ್ತು ಇತರೆ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವ ಶೌಚಾಲಯ ಶುದ್ಧಿಕರಣ ದ್ರಾವಕವನ್ನು( ಟಾಯ್ಲೇಟ್ ಕ್ಲೀನರ್) ಸೇವಿಸಿದ್ದರು. ಆಸ್ಪತ್ರೆಗೆ ಬಂದಾಗ ಅವರ ಸ್ಥಿತಿ ಗಂಭೀರವಾಗಿತ್ತು, ಅವರಿಗೆ ತುರ್ತಾಗಿ ವೆಂಟಿಲೇಟರ್ ಬೆಂಬಲದೊಂದಿಗೆ ಹಾಗೂ ಐನೋಟ್ರೋಪಿಕ್ ಸಹಾಯ ನೀಡಲಾಯಿತು” ಎಂದರು.
” ಹೊಟ್ಟೆಯ ಸಿಟಿ ಸ್ಕ್ಯಾನ್‌ನಲ್ಲಿ ಜಠರ ಹಾಗೂ ಸಮೀಪದ ಸಣ್ಣ ಕರುಳಿನ ಭಾಗಕ್ಕೆ ರಕ್ತಪ್ರವಾಹ ಕಡಿಮೆಯಾಗಿರುವುದು (ಇಸ್ಕೀಮಿಯಾ) ಕಂಡುಬಂದಿತು. ಎಂಡೋಸ್ಕೋಪಿಕ್ ಪರೀಕ್ಷೆಯಲ್ಲಿ ಅವರ ಹೊಟ್ಟೆಗಾಯವನ್ನು ಜರ್ಗರ್ ನಾಲ್ಕನೇಯ ಹಂತ Zargar Grade-4 ಎಂದು ವರ್ಗೀಕರಿಸಲಾಯಿತು – ಇದು ಕೊರೆಸಿವ್ (ಕೊರೆತ) ಗಾಯದ ಅತ್ಯಂತ ಗಂಭೀರ ಹಂತವಾಗಿದೆ” ಎಂದು ಡಾ. ನಾಯ್ಕ ಹೇಳಿದರು.
ವ್ಯಕ್ತಿಯ ಆರೋಗ್ಯದ ಗಂಭೀರತೆಯನ್ನು ಅರಿತ ಡಾ. ನಾಯ್ಕ ಅವರ ನೇತೃತ್ವದ ತಂಡ ತುರ್ತು ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆಯಲ್ಲಿ ಟೋಟಲ್ ಗ್ಯಾಸ್ಟ್ರೆಕ್ಟಮಿ (ಪೂರ ಜಠರ ತೆಗೆದುಹಾಕಲಾಯಿತು), ಸರ್ವಿಕಲ್ ಈಸೋಫಗೊಸ್ಟಮಿ (ಅನ್ನನಾಳವನ್ನು ಹೊರಕ್ಕೆ ತರುವ ಶಸ್ತ್ರಚಿಕಿತ್ಸೆ), ಡ್ರೇನಿಂಗ್ ಟ್ರಾನ್ಸ್ ಅಬ್ಡೊಮಿನಲ್ ಈಸೋಫಗೊಸ್ಟಮಿ ಮತ್ತು ಫೀಡಿಂಗ್ ಜೆಜುನೋಸ್ಟಮಿ (ಸಣ್ಣ ಕರುಳಿನ ಮೂಲಕ ಆಹಾರ ನೀಡುವ ವ್ಯವಸ್ಥೆ) ನೆರವೇರಿಸಲಾಯಿತು.
“ರೋಗಿಯನ್ನು ಬದುಕುಳಿಸಲು, ಹರಿದ ಜಠರವನ್ನು ನಿರ್ವಹಿಸಲು, ಹಾಗೂ ಬೇರೆ ತೊಂದರೆಗಳನ್ನು ನಿವಾರಿಸಲು ಈ ಶಸ್ತ್ರಚಿಕಿತ್ಸೆ ಅತ್ಯಂತ ಮುಖ್ಯವಾಗಿತ್ತು.” ಎಂದರು.
ವೈದ್ಯಕೀಯ ತಜ್ಞರ ತಂಡದಲ್ಲಿ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರೋಲಾಜಿಯ ಡಾ. ನಾಗರಾಜ ಎನ್, ಡಾ. ಜಯಂತ್ ಎಂ., ತುರ್ತು ವೈದ್ಯಕೀಯ ವಿಭಾಗದ ಡಾ. ನರೇಂದ್ರ ಎಸ್ ಎಸ್, ಡಾ. ಗಣೇಶ್ ಬಿ ಎಸ್, ಡಾ. ದಿಲೀಪ್ ಸಿ ಎನ್, ಅನಸ್ಥೇಷಿಯಾ ತಂಡದ ಡಾ. ಚಿರಾಗ್ ಬಾಬು ಪಿ ಎಸ್, ಡಾ. ಜಯಶ್ರೀ ಪಾಟೀಲ್, ಡಾ. ಅನು ಮತ್ತು ಐಸಿಯು ತಜ್ಞ ಡಾ. ಕಿರಣ್ ಬಿ ಆರ್ , ಡಾ. ವಿಶ್ವಾಸ್ ಜಿ ಕೆ ಇದ್ದರು.
ವೈದ್ಯಕೀಯ ನಿಗಾ ಮತ್ತು ತ್ವರಿತ ಚಿಕಿತ್ಸೆ ಫಲವಾಗಿ, ರೋಗಿ ಆರು ದಿನಗಳ ಕಾಲ ವೆಂಟಿಲೇಟರ್ ಬೆಂಬಲದಲ್ಲಿದ್ದು ಬಳಿಕ ಚೇತರಿಕೆ ಕಾಣತೊಡಗಿದರು. ಶಸ್ತ್ರಚಿಕಿತ್ಸೆಯ ನಂತರದ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಯಿತು, ಬಳಿಕ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದು ಡಾ. ನಾಯ್ಕ ತಿಳಿಸಿದರು.
ಎಸ್ ಎಸ್ ಆಸ್ಪತ್ರೆ ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಯ ವ್ಯವಸ್ಥಾಪಕ ವಿಭಾಗದ ನಿರ್ದೇಶಕರು ವೈದ್ಯರ ತಂಡದ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.