SUDDIKSHANA KANNADA NEWS/DAVANAGERE/DATE:01_11_2025
ದಾವಣಗೆರೆ: ನಾನು ಎಲ್ಲೆಲ್ಲಿ ಆಸ್ತಿ ಮಾಡಿದ್ದೇನೆಂದು ನನಗೇ ಗೊತ್ತಿಲ್ಲ. ಒಂದು ಜೀಪ್, ಕಾರು ನೀಡುತ್ತೇನೆ. ಆಫೀಸ್ ನಲ್ಲಿ ದಾಖಲೆಗಳು ಇರುತ್ತವೆ. ಬೇಕಾದರೆ ನೋಡಿಕೊಂಡು ಬರಲಿ, ಆಮೇಲೆ ಮಾತನಾಡಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಗೆ ಪಂಥಾಹ್ವಾನ ನೀಡಿದ್ದಾರೆ.
READ ALSO THIS STORY: ಕೈ ಹಚ್ಚಿದರೆ ಮೇಲೇಳಲು ಆಗಬಾರದು ಹಾಗೆ ಕೈ ಹಚ್ಚುತ್ತೀನಿ: ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಕೆಂಡಾಮಂಡಲ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಬಿ. ಪಿ. ಹರೀಶ್ ಅವರ ತಂದೆ ಸಮಾಧಿ ನೋಡಿಕೊಂಡು ಬರಲಿ. ನಾನು ಅವನಷ್ಟು ನೀಚ, ಕೀಳುಮಟ್ಟಕ್ಕೆ ಹೋಗಲ್ಲ. ಆನೆ ಹೋಗುತ್ತಿರುತ್ತದೆ, ನಾಯಿ ಬೊಗಳುತ್ತದೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಪಾಡಿಗೆ ಅದು ಆಗುತ್ತೆ. ಆತ ಅನುಭವಿಸುತ್ತಾನೆ ಎಂದು ಹೇಳಿದರು.
ಹರಪನಹಳ್ಳಿ ಮತ್ತು ಹರಿಹರ ತಾಲೂಕಿನಲ್ಲಿ ರೈತರ ಭೂಮಿ ಲಪಟಾಯಿಸಲು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಬಿ. ಪಿ. ಹರೀಶ್ ಆರೋಪಗಳನ್ನು ತಳ್ಳಿ ಹಾಕಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ನನಗೆ ಈಗ 58 ವರ್ಷ. 25 ವರ್ಷಗಳ ಹಿಂದೆಯೇ ಭೂಮಿ ಖರೀದಿಸಿದ್ದೇನೆ. ಎರಡೂ ಕಡೆಯ ರೈತರಿದ್ದಾರೆ. ನಾನು ತೆಗೆದುಕೊಂಡಿರುವುದು ಬಹಳ ಹಿಂದೆಯೇ ಎಂದು ಹೇಳಿದರು.
ಆಸ್ತಿ ಎಲ್ಲಿವೆ? ಎಷ್ಟು ಇದೆ ಎಂಬುದೇ ಗೊತ್ತಿಲ್ಲ. ಮಧ್ಯದಲ್ಲಿ ಹಳ್ಳ ಹೋಗಿದೆ. ಆ ಕಡೆಯೂ ನಮ್ಮವರು ಇದ್ದಾರೆ, ಈ ಕಡೆಯೂ ಇದ್ದಾರೆ. ಒತ್ತುವರಿ ನೂರಕ್ಕೆ ನೂರರಷ್ಟು ಆಗಿಲ್ಲ. ಅಲ್ಲಿ ಮಳೆಯಿಂದ ಹಿನ್ನೀರು ಬರುತ್ತೆ. ಮತ್ತೆ ಇಳಿಯುತ್ತಾ ಹೋಗುತ್ತದೆ. ಹಿನ್ನೀರು ಬಂದಾಗ ತೊಂದರೆಯಾಗಬಾರದು ಎಂದು ಮಣ್ಣು ಏರುತ್ತಾರೆ. ಖರಾಬು ಬಂದರೆ ಯಾರಿಗೆ ಸೇರುತ್ತದೆ ನೀವೇ ಹೇಳಿ. ಇಲ್ಲಿ ಬೇರೆಯವರು ಇದ್ದಾರೆಯೇ? ಎಂದು ಪ್ರಶ್ನಿಸಿದರು.
ನಾನು ಮಾತನಾಡುತ್ತಾ ಹೋದರೆ ಬಹಳ ಆಗುತ್ತದೆ. ನೂರೆಂಟು ವಿಚಾರಗಳು ಇವೆ. ಯಾವ ಬರೆಯಬೇಕು, ಯಾವುದನ್ನೂ ಬಿಡಬೇಕು ಎಂಬುದನ್ನು ನಿರ್ಧರಿಸಿ. ಕಾನೂನು ಪ್ರಕಾರವಾಗಿದ್ದರೆ ಮಾಡಲಿ. ಮಾಡಲು ಸಾಕಷ್ಟು ಕೆಲಸ ಇದೆ. ನಿಮ್ಮ ಟೈಂ ವೇಸ್ಟ್, ನಮ್ಮ ಟೇಂ ವೇಸ್ಟೂ. ಮುಖ್ಯ ಕಾರ್ಯದರ್ಶಿಯವರ ಬಳಿ ಕುಳಿತು ಆಕ್ಷೇಪಣೆ ಸಲ್ಲಿಸಿದ್ದಾರೆ. ಸರಿಯಾಗಿದ್ದರೆ ಏನು ಮಾಡುತ್ತಾರೆ. ವರದಿ ಸರಿಯಾಗಿದೆ ಎಂದು ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದರು.






