SUDDIKSHANA KANNADA NEWS/ DAVANAGERE/DATE:15_08_2025
ದಾವಣಗೆರೆ: ಇಂಡಿವಿಷಲ್ ಬಂದರೆ ಸುಮ್ಮನಿರಲ್ಲ. ಅವ್ನಿಗೂ ಇಂಡಿವಿಷಲ್ ಆಗಿ ಬರಬೇಡ ಅಂತೇಳಿ. ನನ್ನ ಜಾಗವಿದ್ದರೆ ನಾನು ಇಂದೇ ಪುಕ್ಸಟ್ಟೆ ಬರೆದುಕೊಡುತ್ತೇನೆ. ಅವ್ನು ಬರೆದುಕೊಡ್ತಾನಾ ಕೇಳಿ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
READ ALSO THIS STORY: ಹೊಲಿಗೆ ಯಂತ್ರ ವಿತರಣೆ: ಸಹಾಯಧನ, ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಸ್ವಾತಂತ್ರ್ಯ ದಿನಾಚರಣೆ ಬಳಿಕ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಅಶೋಕ ರಸ್ತೆ ಬಳಿಯ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ. ಜಿಲೆಬಿಯಂತೆ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಏರ್ ಇಂಡಿಯಾದಲ್ಲಿ ಎರಡೂ ಕಡೆ ಗೊಂಬೆ ಇಟ್ಟು ಮಹಾರಾಜರ ಫೋಟೋ ಹಾಕುತ್ತಿದ್ದರು. ಇಂಥ ಅಂಡರ್ ಪಾಸ್ ಮಾಡಿರುವ ನಿರ್ಮಾಪಕನ ಪ್ರತಿಮೆ ಹಾಕಬೇಕು ಎಂದು ವ್ಯಂಗ್ಯವಾಡಿದರು.
ಅವ್ನು ನಾಲ್ಕು ಬಾರಿ ಪುಕ್ಸಟ್ಟೆ ಎಂಪಿಯಾಗಿದ್ದಾನೆ. ಅವರ ತಂದೆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ನಾಲ್ಕು ಬಾರಿ ಸಂಸದರಾದರೂ ಆತನ ಕೊಡುಗೆ ಏನು? ಇಬ್ಬರು ಬಾಡಿಗಾರ್ಸ್ ಇಟ್ಟುಕೊಂಡಿದ್ದಾನೆ. ಕಸ ವಿಲೇವಾರಿ ಜಾಗ ಮಾಡಿದ್ದರಿಂದ ದಾವಣಗೆರೆ ಸ್ವಚ್ಛವಾಗುತ್ತಿದೆ. ಇಲ್ಲದಿದ್ದರೆ ಎಷ್ಟು ಕಷ್ಟವಾಗುತಿತ್ತು. ಸ್ಮಾರ್ಟ್ ಸಿಟಿಗೆ ಸೇರಿದ್ದು ಹೇಗೆ? ಬಾರ್ಕೊಡು, ಮಾನದಂಡ ಎಲ್ಲ ಅಂಶಗಳನ್ನೂ ನೋಡಿ ಕೇಂದ್ರ ಸರ್ಕಾರವು ಗ್ರೇಡಿಂಗ್ ಮಾಡುತ್ತದೆ. ನಾವು ಶ್ರಮ ಪಟ್ಟ ಕಾರಣ ದಾವಣಗೆರೆ ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿಗೆ ಸೇರಿತು. ಸುಮ್ಮನೆ ನಾವು ಮಾಡಿದ್ದೇವೆ, ನಮ್ಮಿಂದಲೇ ಆಗಿದ್ದು ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪೂನಾದಲ್ಲಿ ಕಾರ್ಪೊರೇಷನ್ ಚೆನ್ನಾಗಿದೆ. ಅಲ್ಲಿಗೆ ಹೋಗಿ ನೋಡಿಕೊಂಡು ಬಂದು ಅದೇ ಮಾದರಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಒಳ್ಳೆಯ ಕೆಲಸ ಮಾಡಲಿ. ಯಾರು ಬೇಡ ಎನ್ನುತ್ತಾರೆ.
ಅಂಡರ್ ಪಾಸ್ ಮಾಡಿರುವುದರಿಂದ ಜನರಿಗೆ ಎಷ್ಟು ಅನಾನುಕೂಲವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಎಂಜಿನಿಯರ್ ನಾನಲ್ಲ ಎಂದು ಹೇಳುವ ಮಾಜಿ ಸಂಸದರು ಈಗ ಏನು ಮಾಡುತ್ತಿದ್ದಾರೆ? ಒಳ್ಳೆಯ ಎಂಜಿನಿಯರ್ ಆದರೂ ಇಟ್ಟುಕೊಳ್ಳಬೇಕಲ್ವಾ. ಬ್ರಿಡ್ಜ್ ಪಕ್ಕ ಸರ್ವೀಸ್ ರಸ್ತೆ ಮಾಡಿ ಇನ್ನೊಂದು ಅಂಡರ್ ಪಾಸ್ ಮಾಡಿ ಪ್ಯಾರಲರ್ ರಸ್ತೆ ನಿರ್ಮಾಣಕ್ಕೆ 32 ಕೋಟಿ ರೂಪಾಯಿ ನೀಡಿದ್ದೇವೆ. ಸುತ್ತಮುತ್ತಲಿನ
ಜಾಗದ ಮಾಲೀಕರ ಜೊತೆ ಚರ್ಚೆ ನಡೆಸಿದ್ದೇವೆ. ನಮ್ಮ ಜಾಗ ಇದೆ ಎಂಬ ಕಾರಣಕ್ಕೆ ಕಾಮಗಾರಿ ನಡೆದಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದರು.
ಗೋಷ್ಠಿಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಮತ್ತಿತರರು ಹಾಜರಿದ್ದರು.