SUDDIKSHANA KANNADA NEWS/ DAVANAGERE/ 03-04-2023
ದಾವಣಗೆರೆ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ (DAVANAGERE) ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿ ಬಂದಿದ್ದೇನೆ. ವಯಸ್ಸಿನ ಕಾರಣಕ್ಕೆ ನನಗೆ ಟಿಕೆಟ್ (TICKET) ನಿರಾಕರಿಸಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿ ಬಂದಿದ್ದೇನೆ ಎಂದು ಬಿಜೆಪಿಯ ಹಿರಿಯ ಶಾಸಕ ಎಸ್. ಎ. ರವೀಂದ್ರನಾಥ್ (S. A. RAVINDRANATH) ಘೋಷಿಸಿದ್ದಾರೆ.
ಶಿರಮಗೊಂಡನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರೋಗ್ಯ ಸರಿ ಇಲ್ಲದ ಕಾರಣ ಸ್ಪರ್ಧೆ ಮಾಡುತ್ತಿಲ್ಲ, ವಯಸ್ಸಿನ ಕಾರಣಕ್ಕಲ್ಲ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರ ಮುಂದೆ ತನ್ನ ಅಭಿಪ್ರಾಯ ಹೇಳಿದ್ದೇನೆ. ಜಿಲ್ಲಾವಾರು ಸಭೆ ನಡೆಸಲಾಯಿತು. ಈ ವೇಳೆ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ (TICKET) ನೀಡಬೇಕೆಂಬ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಜಿಲ್ಲಾಧ್ಯಕ್ಷರು ಯಾವ ಯಾವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದಾರೆ ಎಂಬ ಕುರಿತಂತೆ ಮಾಹಿತಿ ನೀಡಿದರು ಎಂದು ತಿಳಿಸಿದರು.
ದಾವಣಗೆರೆ ಉತ್ತರದಲ್ಲಿ ಬಿಜೆಪಿಯ ಐವರು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಬಿಜೆಪಿ (BJP) ಮಾಜಿ ಅಧ್ಯಕ್ಷ ಜೀವನಮೂರ್ತಿ, ಧನಂಜಯ ಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ನಾನು ಸ್ಪರ್ಧೆ ಮಾಡೋಲ್ಲ ಎಂದ ಮೇಲೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.
ಪಕ್ಷ ಸೂಚನೆ ಕೊಟ್ಟಿತ್ತು:
ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದೆ. ಆದ್ರೆ, ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲುವುದಿಲ್ಲ ಎಂಬುದಾಗಿ ಎಲ್ಲಿಯೂ ಹೇಳಬೇಡಿ ಎಂಬ ಸೂಚನೆ ನೀಡಿತ್ತು. ಈ ಕಾರಣಕ್ಕೆ ಬಹಿರಂಗವಾಗಿ ನಾನು ಎಲ್ಲಿಯೂ ಸ್ಪರ್ಧೆ ಮಾಡೋದಿಲ್ಲ ಎಂದಿರಲಿಲ್ಲ. ಈಗ ಸ್ಪಷ್ಟವಾಗಿ ತಿಳಿಸಿ ಬಂದಿದ್ದೇನೆ ಎಂದು ಹೇಳಿದರು.
ದಾವಣಗೆರೆ ಉತ್ತರ, ಚನ್ನಗಿರಿಯಿಂದ ಸಿಎಂ ಸ್ಪರ್ಧೆ ಮಾಡಲ್ಲ. ಕೇವಲ ವದಂತಿ ಅಷ್ಟೇ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ. ಒಂದೇ ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ ಸಹಕಾರ ಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ ಆಗುತ್ತೆ ಎಂದರು.
50 ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದೇನೆ:
ರಾಜಕಾರಣ ಅಂದ ಮೇಲೆ ನೋವು ಸಹಜ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗದು. 50 ವರ್ಷಗಳ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ, ಇದೇನೂ ಹೊಸದೇನೂ ಅಲ್ಲ. ಕೊನೆ ಅವಧಿಗೆ ಸಚಿವ ಸ್ಥಾನ ನೀಡದಿದ್ದರ ಬಗ್ಗೆ ಪರೋಕ್ಷವಾಗಿ ಎಸ್. ಎ. ರವೀಂದ್ರನಾಥ್ (S. A. RAVINDRANATH) ಅವರು ಅಸಮಾಧಾನ ಹೊರಹಾಕಿದರು.
ಮಾಡಾಳ್ ಟಿಕೆಟ್ ಚರ್ಚೆ ಇಲ್ಲ:
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಶರಾವತಿ ಕರ್ಮಕಾಂಡ ಎಂಬ ಆರೋಪ ನಿಜಲಿಂಗಪ್ಪ (NIJALINGAPPA) ಅವರ ಮೇಲೆ ಕೇಳಿ ಬಂದಿತ್ತು. ಪತ್ರಿಕೆಗಳಲ್ಲಿ ಇದು ನಿತ್ಯವೂ ಪ್ರಕಟವಾಗುತಿತ್ತು. ಆದರೂ ಆಮೇಲೆ ನಡೆದ ಚುನಾವಣಎಯಲ್ಲಿ ನಿಜಲಿಂಗಪ್ಪ ಗೆದ್ದು ಬಂದರು. ಬಾಲ್ ಅನ್ನು ಎಷ್ಟು ಜೋರಾಗಿ ಎಸೆಯುತ್ತೇವೆಯೋ ಅಷ್ಟೇ ವೇಗವಾಗಿ ವಾಪಸ್ ಬರುತ್ತದೆ ಎಂದು ಹೇಳಿದರು.
ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರನಿಗೆ ಟಿಕೆಟ್ ನೀಡಿಕೆ ವಿಚಾರ ಸಂಬಂಧ ಯಾವುದೇ ಚರ್ಚೆಯಾಗಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇವೆ. ಅಭ್ಯರ್ಥಿಗಳ ಗೆಲುವು ಮುಖ್ಯ ಎಂದರು.