SUDDIKSHANA KANNADA NEWS/ DAVANAGERE/ DATE:19-12-2023
ದಾವಣಗೆರೆ: ಸ್ಕೇಟಿಂಗ್ ನಲ್ಲಿ ದಾವಣಗೆರೆಯ ಪ್ರತಿಭೆಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಆದ್ದರಿಂದ ಕ್ರೀಡಾಪ್ರೇಮಿಗಳಾದ ನೀವು ಸ್ಕೇಟಿಂಗ್ ರಿಂಗ್ ಗೆ ಮೂಲಭೂತ
ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಕ್ರೀಡಾಪಟುಗಳ ಸಾಧನೆಗೆ ನೆರವಾಗಬೇಕು ಎಂದು ದಾವಣಗೆರೆ ಸ್ಪೀಡ್ ಸ್ಕೇಟಿಂಗ್ ಮುಖ್ಯ ಕೋಚ್ ಆದ ಪೃಥ್ವಿ ಕಾಂತ್ ಎನ್ ಕೋಟ್ಗಿ ಅವರು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
1999ರಲ್ಲಿ ಯುವಜನ ಸೇವಾ ಮತ್ತು ಯುವಸಬಲೀಕರಣ ಸಚಿವರಾಗಿದ್ದ ತಾವು ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ಕೊಟ್ಟಿದ್ದೀರಾ. ಹಾಗಾಗಿ, ದಾವಣಗೆರೆಯಲ್ಲಿ ಬೇರೆ ಬೇರೆ ವಿಭಾಗಗಳ ಸ್ಪರ್ಧೆಗಳಲ್ಲಿ ಕ್ರೀಡಾಳುಗಳು ಉತ್ತಮ ಸಾಧನೆ
ಮಾಡುತ್ತಿದ್ದಾರೆ. ಸ್ಕೇಟಿಂಗ್ ನಲ್ಲಿಯೂ ಅದ್ವಿತೀಯ ಸಾಧನೆ ತೋರುತ್ತಿದ್ದು, ಸಾಧನೆ ಮಾಡಲು ಸೂಕ್ತ ಸೌಲಭ್ಯಗಳ ಅವಶ್ಯಕತೆ ಇದೆ. ಉಸ್ತುವಾರಿ ಸಚಿವರಾಗಿರುವ ಕಾರಣಕ್ಕೆ ಅನುದಾನ ನೀಡುವ ಮೂಲಕ ಸಹಕಾರ ಕೊಡಬೇಕು ಎಂದು
ಸಚಿವರಿಗೆ ಪೃಥ್ವಿಕಾಂತ್ ಅವರು ಮನವಿ ಮಾಡಿದರು.
ಇದೇ ವೇಳೆ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು. ಎಸ್. ಎಸ್. ಮಲ್ಲಿಕಾರ್ಜುನ್ ಅವರೂ ಸಹ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಅವರ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದರು. ಕರ್ನಾಟಕ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದಾವಣಗೆರೆ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ನ ಕೋಚ್ ಪೃಥ್ವಿ ಕಾಂತ್ ಎನ್ ಕೋಟ್ಗಿ ಅವರ ನೇತೃತ್ವದ ತಂಡ 3ನೇ ಸ್ಥಾನ ಪಡೆದಿದ್ದಾರೆ.
ಲಕ್ಷಿತ್ 2 ಚಿನ್ನ, ಫಲಕ್ 3 ಚಿನ್ನ, ವೈಭವ್ ಕೆ.ಜಿ. 3 ಬೆಳ್ಳಿ, ಪಿ. ರುದ್ರಾಂಶ್ 2 ಕಂಚು, 1 ಬೆಳ್ಳಿ, ಪ್ರಥಮ್ ಹೆಚ್. 3 ಚಿನ್ನ, ಜೀವನ್ ಹೆಚ್. 2 ಚಿನ್ನ ಹಾಗೂ ವಿಶೇಷ ವರ್ಗ ವಿಭಾಗದಲ್ಲಿ ಅರ್ಚಿತ್ ಪಿ. ಜೆ. 3 ಚಿನ್ನದ ಪದಕ ಗಳಿಸುವ ಗಮನ ಸೆಳೆದಿದ್ದಾರೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪದಕಗಳನ್ನು ಗೆದ್ದವರನ್ನು ಅಭಿನಂದಿಸಿ ಸನ್ಮಾನಿಸಿದರು. ಸ್ಕೇಟಿಂಗ್ ಮೈದಾನಕ್ಕೆ ಎಲ್ಲಾ ರೀತಿ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುವುದಾಗಿ ಮಲ್ಲಿಕಾರ್ಜುನ್ ಅವರು ಭರವಸೆ ನೀಡಿದ್ದಾರೆ.