SUDDIKSHANA KANNADA NEWS/ DAVANAGERE/ DATE:18-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ರಣಕಹಳೆ ಊದಿರುವ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಬಣದ ಮುನಿಸು ತಣಿಸುವ ಯತ್ನ ಮುಂದುವರಿದಿದೆ.
ಆದ್ರೆ, ಯಾವುದೇ ಕಾರಣಕ್ಕೂ ಈ ಬಣ ಬಗ್ಗುತ್ತಿಲ್ಲ. ಅಭ್ಯರ್ಥಿ ಬದಲಾಗಲೇಬೇಕು ಎಂಬ ಪಟ್ಟು ಹಿಡಿದಿದ್ದು, ಭಿನ್ನಮತದ ರಣಕಹಳೆ ಮೊಳಗಿಸಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದೆ.
ದಾವಣಗೆರೆಯ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಜಯ್ ಕುಮಾರ್ ಅವರ ನಿವಾಸದಲ್ಲಿ ರವೀಂದ್ರನಾಥ್, ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಬಸವರಾಜ್ ನಾಯ್ಕ್ ಸೇರಿದಂತೆ ಹಲವರು ಸಭೆ ಸೇರಿ ದಾವಣಗೆರೆ ಬಿಜೆಪಿ ಅಭ್ಯರ್ಥಿ ಬದಲಾಗಲೇಬೇಕು ಎಂಬ ನಿರ್ಣಯ ತೆಗೆದುಕೊಂಡಿತ್ತು. ದುರ್ಗಾಂಬಿಕಾ ಜಾತ್ರಾ ಮಹೋತ್ಸವ ಮುಗಿದ ಬಳಿಕ ಬಂಡಾಯ ಅಭ್ಯರ್ಥಿ ನಿಲ್ಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಘೋಷಿಸಿದೆ.
ಈ ಬೆಳವಣಿಗೆ ನಡುವೆ ಹೊನ್ನಾಳಿಯ ಹಿರೇಕಲ್ಮಠದಲ್ಲಿನ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ಮನೆಗೆ ಮಾಜಿ ಸಚಿವ ಹಾಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಪ್ತ ಮುರುಗೇಶ್ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಡ್ಲೇಬಾಳು ಧನಂಜಯ ಸೇರಿದಂತೆ ತಾಲ್ಲೂಕು ಬಿಜೆಪಿ ಮುಖಂಡರು, ಕಾರ್ಯಕರ್ತರು ಜೊತೆ ಸಂಧಾನಕ್ಕೆ ಯತ್ನಿಸಿದರು.
ರೇಣುಕಾಚಾರ್ಯರಿಗೆ ಆಫರ್…?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ. ಮುಂಬರುವ ದಿನಗಳಲ್ಲಿ ಸ್ಥಾನ ಮಾನ ನೀಡಲಾಗುವುದು ಎಂದು ರೇಣುಕಾಚಾರ್ಯರಿಗೆ ಮುರುಗೇಶ್ ನಿರಾಣಿ, ರವಿಕುಮಾರ್ ಅವರು ಭರವಸೆ ನೀಡಿದರು ಎನ್ನಲಾಗಿದೆ. ವಿಧಾನ ಪರಿಷತ್ ಸದಸ್ಯ ಸ್ಥಾನ ಹಾಗೂ ಬಿಜೆಪಿ ರಾಜ್ಯ ಘಟಕದಲ್ಲಿ ಉನ್ನತ ಸ್ಥಾನಮಾನ ನೀಡುವ ಭರವಸೆ ನೀಡಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ರಾಜ್ಯ ನಾಯಕರು ಹಾಗೂ ರಾಷ್ಟ್ರ ವರಿಷ್ಠರು ನಿಮಗೆ ನೀಡಲಿದ್ದು, ಚುನಾವಣೆಯಲ್ಲಿ ಯಾವುದೇ ಭಿನ್ನಮತ ತೋರದೇ ಎಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸೋಣ ಎಂದು ಮುರುಗೇಶ್ ನಿರಾಣಿ ಹೇಳಿದರು ಎನ್ನಲಾಗಿದೆ.
ಎನ್. ರವಿಕುಮಾರ್ ಅವರೂ ಸಹ ದಾವಣಗೆರೆ ಜಿಲ್ಲೆಯು ಬಿಜೆಪಿಯ ಭದ್ರಕೋಟೆ. ದಾವಣಗೆರೆ ಜಿಲ್ಲೆ ಆದಾಗಿನಿಂದ ಇಲ್ಲಿಯವರೆಗೆ ಬಿಜೆಪಿ ಸೋತಿಲ್ಲ. ಮಲ್ಲಿಕಾರ್ಜುನಪ್ಪ, ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಸೋಲು ಕಂಡಿಲ್ಲ. ಈ ಬಾರಿಯೂ ಬಿಜೆಪಿ ಗೆಲ್ಲಿಸಬೇಕು. ಈ ಮೂಲಕ ಬಿಜೆಪಿ ಭದ್ರಕೋಟೆಯೆಂಬುದು ಸಾಬೀತಾಗಬೇಕಿದೆ. ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಅವರು ಎಲ್ಲವನ್ನೂ ಸರಿ ಮಾಡಲಿದ್ದಾರೆ ಎಂದು ರೇಣುಕಾಚಾರ್ಯರ ಮನವೊಲಿಸಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.
ರೇಣುಕಾಚಾರ್ಯ ಹೇಳಿದ್ದೇನು…?
ಈಗ ತೆಗೆದುಕೊಂಡಿರುವ ನಿರ್ಧಾರ ನನ್ನ ಒಬ್ಬನದ್ದಲ್ಲ. ಬಣದವರೆಲ್ಲರೂ ಸೇರಿ ಚರ್ಚಿಸಬೇಕು. ಕೇವಲ ನನಗೆ ಮಾತ್ರ ಆಮಿಷ ತೋರಿದರೆ ಸಾಲದು. ಎಲ್ಲರಿಗೂ ಸಮಾಧಾನವಾಗಬೇಕು. ಇಲ್ಲದಿದ್ದರೆ ಅಭ್ಯರ್ಥಿ ಬದಲಾಗಬೇಕು. ಈ ವಿಚಾರವನ್ನು ವರಿಷ್ಠರು ಹಾಗೂ ರಾಜ್ಯ ನಾಯಕರಿಗೆ ತಲುಪಿಸಿ. ಬೇರೆಯವರಿಗೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಸಿದ್ದೇಶ್ವರ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು. ಈ ನಿಲುವಿನಲ್ಲಿ ಬದಲಾವಣೆ ಇಲ್ಲ. ಹಾಗಾಗಿ, ಅಭ್ಯರ್ಥಿ ಬದಲಾಯಿಸಿದರೆ ಎಲ್ಲವೂ
ಸರಿಹೋಗುತ್ತದೆ ಎಂದು ಹೇಳಿದರು ಎನ್ನಲಾಗಿದೆ.
ನಮ್ಮ ಮಾತಿಗೆ ಬೆಲೆ ಇಲ್ಲ..!
ನಾವು ಮೊದಲಿನಿಂದಲೂ ಸಿದ್ದೇಶ್ವರ ಇಲ್ಲವೇ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಯಡಿಯೂರಪ್ಪ, ವಿಜಯೇಂದ್ರ, ದೆಹಲಿಯ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಅಹವಾಲು ಸಲ್ಲಿಸಿದ್ದೇವೆ. ಸಿದ್ದೇಶ್ವರ ಅವರು ಮಾತನಾಡಿದ ದುರಂಹಕಾರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಸಿದ್ದೇಶ್ವರ ಅವರೇ ಕಾರಣ. ಅವರು ಪ್ರಚಾರಕ್ಕೆ ಸರಿಯಾಗಿ ಬರಲೇ ಇಲ್ಲ. ವಿರೋಧಿಗಳಿಗೆ ನೆರವು ನೀಡಿದರು ಎಂಬ ಆರೋಪವೂ ಇದೆ. ಹಾಗಾಗಿ, ಸಿದ್ದೇಶ್ವರ ಅವರ ಕುಟುಂಬದವರಿಗೆ ನೀಡಿರುವ ಟಿಕೆಟ್ ಅನ್ನು ಬದಲಾಯಿಸಿ ಎಂದು ರೇಣುಕಾಚಾರ್ಯ ಹೇಳಿದರು ಎಂದು ಸಭೆಯಲ್ಲಿದ್ದವರು ಮಾಹಿತಿ ನೀಡಿದರು.