ಡಿಸೆಂಬರ್ 18 ರಂದು ಭಾರತೀಯ ಕ್ರಿಕೆಟ್ನ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಇದು ನನ್ನ ಕೊನೆಯ ದಿನ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಸದ್ಯ ಟೀಮ್ ಇಂಡಿಯಾ ಅಂಗಳದಲ್ಲಿ ಗುಸು ಗುಸುವೊಂದು ಕೇಳಿ ಬರುತ್ತಿದೆ . ಅದೇನಂದ್ರೆ ಇದಿನ್ನು ಆರಂಭ, ಇನ್ನೂ ಅನೇಕರು ಇಂಗ್ಲೆಂಡ್ ಟೂರ್ಗೂ ಮುನ್ನವೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ ಎಂದು.
ರವಿಚಂದ್ರನ್ ಅಶ್ವಿನ್ ನಿವೃತ್ತ ಒಂದು ಆರಂಭದ ಹಂತ, ಮುಂದಿನ ದಿನಗಳಲ್ಲಿ ಸಾಕಷ್ಟು ಹಿರಿಯ ತಲೆಗಳು ನಿವೃತ್ತಿಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಯುವಕರಿಗೆ ಆದ್ಯತೆ ನೀಡಲು, ಮುಂದಿನ ತಲೆಮಾರಿಗೆ ಜಾಗ ಬಿಟ್ಟುಕೊಡುವ ಉದ್ದೇಶದಿಂದ ತಂಡದ ಹಿರಿಯ ತಲೆಗಳು ನಿವೃತ್ತಿ ಎಂಬ ವಿದಾಯವನ್ನು ಘೋಷಿಸಿ ಕ್ರಿಕೆಟ್ ಅಂಗಳವನ್ನು ಸದ್ಯದಲ್ಲಿಯೇ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯ ಮುಗಿದ ಬಳಿಕ ಇಂತಹದೊಂದು ಅಚ್ಚರಿ ಬೆಳವಣಿಗೆ ಟೀಮ್ ಇಂಡಿಯಾದಲ್ಲಿ ಆಗಲಿದೆ ಎಂದು ಹೇಳಲಾಗಿದೆ.
2012 ಹಾಗೂ 2013ರಲ್ಲಿ ಇದೇ ಮಾದರಿಯಲ್ಲಿ ನಿವೃತ್ತಿಗಳು ಘೋಷಣೆಯಾಗಿದ್ದವು. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಗಂಗೂಲಿ, ಸಚಿನ್ ತೆಂಡೂಲ್ಕರ್ ಒಬ್ಬರ ಹಿಂದೆ ಒಬ್ಬರಂತೆ ನಿವೃತ್ತಿ ಘೋಷಿಸಿ ಹೊಸ ಆಟಗಾರರಿಗೆ ತಮ್ಮ ಜಾಗದಲ್ಲಿ ಆಡಲು ಅನುಕೂಲ ಮಾಡಿಕೊಟ್ಟಿದ್ದರು. ಅದೇ ಮಾದರಿಯ ನಿವೃತ್ತಿಗಳ ಸರಣಿ 2025ರಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಈ ಒಂದು ಸರಣಿ ನಿವೃತ್ತಿಯ ಆರಂಭವನ್ನು ಈ ಬಾರಿ ಅಶ್ವಿನ್ ಮಾಡಿದ್ದು, ಮುಂದಿನ ದಿನಗಳಲ್ಲಿ ಆಶ್ಚರ್ಯ ಎನ್ನುವಂತೆ ವಿದಾಯದ ಘೋಷಣೆಗಳು ಬರಲಿವೆಯಂತೆ. ಈಗಾಗಲೇ ರೋಹಿತ್ ಶರ್ಮಾ ಒಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಅದ್ಭುತ ಆಟ ಪ್ರದರ್ಶಿಸುವವರಿಗೆ ಟೀಮ್ ಇಂಡಿಯಾ ಬಾಗಿಲು ತೆರೆದಿದೆ ಎಂಬ ಅವರ ಹೇಳಿಕೆಯೂ ಕೂಡ ಈ ಒಂದು ವಾದಕ್ಕೆ ಪುಷ್ಠಿಯನ್ನು ನೀಡುತ್ತಿವೆ. ಅಶ್ವಿನ್ ಜೊತೆಗೆ ಹಾಗೂ ಅವರಿಗಿಂತ ಕೊಂಚ ಮೊದಲು ಬಂದವರು ಟೀಮ್ ಇಂಡಿಯಾದಲ್ಲಿ ಇಂದಿಗೂ ಕೂಡ ಆಡುತ್ತಿದ್ದಾರೆ. ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕೆ ರಹಾನೆ, ಚೇತೇಶ್ವರ್ ಪೂಜಾರ, ಮತ್ತು ರವೀಂದ್ರ ಜಡೇಜಾ ಒಂದ ಕಾಲಘಟ್ಟದಲ್ಲಿ ಟೀಮ್ ಇಂಡಿಯಾದ ಒಳಗೆ ಬಂದವರು.
2025ರಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಅಮೂಲಾಗ್ರ ಬದಲಾವಣೆಯಾಗುವ ಸುಳಿವೊಂದು ಈಗ ಮೂಡುತ್ತಿದೆ. ಮುಂದಿನ ವರ್ಷ ಅಂದ್ರೆ 2025 ರಲ್ಲಿ ಆನ್ಫಿಲ್ಡ್ ಅಥವಾ ಆಪ್ಫಿಲ್ಡ್ನಲ್ಲಿ ಹಲವು ಕ್ರಿಕೆಟಿಗರು ತಮ್ಮ ನಿವೃತ್ತಿಯನ್ನು ಘೋಷಿಸಲಿದ್ದು ಅದಕ್ಕೆ ರವಿಚಂದ್ರನ್ ಅಶ್ವಿನ್ ವಿದಾಯ ಹೇಳುವ ಮೂಲಕ ಈ ಒಂದು ಸರಣಿ ನಿವೃತ್ತಿಗೆ ಶ್ರೀಕಾರ ಹಾಕಿದ್ದಾರೆ ಎನ್ನಲಾಗಿದೆ.