ನವದೆಹಲಿ : ಟಿಡಿಪಿ ಸಂಸದ ಕಿಂಜರಾಪು ರಾಮಮೋಹನ್ ನಾಯ್ಡು ಅತಿಕಿರಿಯ ವಯಸ್ಸಿನ ಸಚಿವರಾದ ದಾಖಲೆ ನಿರ್ಮಿಸಿದ್ದಾರೆ. ಮೋದಿ 3.0 ಸರ್ಕಾರದಲ್ಲಿ ರಾಷ್ಟ್ರಪತಿಗಳಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಮಮೋಹನ್ ನಾಯ್ಡು ಅವರಿಗೆ ಈಗ ವಯಸ್ಸು ಕೇವಲ 36 ವರ್ಷ. ಇಷ್ಟು ಕಿರಿಯ ವಯಸ್ಸಿನಲ್ಲಿ ಕೇಂದ್ರ ಮಂತ್ರಿಯಾದ ದಾಖಲೆ ಅವರದ್ದಾಗಿದೆ. ನರೇಂದ್ರ ಮೋದಿ ಸತತ ಮೂರು ಬಾರಿ ಪ್ರಧಾನಿ ಆದಂತೆ ರಾಮಮೋಹನ್ ನಾಯ್ಡು ಸತತ ಮೂರನೇ ಬಾರಿ ಸಂಸದರಾಗಿದ್ದಾರೆ. 2014ರಲ್ಲಿ ಅವರು 26ನೇ ವಯಸ್ಸಿಗೆ ಸಂಸದರಾಗಿದ್ದರು. ಎರಡನೇ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ದಾಖಲೆಯನ್ನು ಅವರು ಬರೆದಿದ್ದರು. ಈಗ ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಮಂತ್ರಿ ಎಂಬ ದಾಖಲೆ ಅವರದ್ದಾಗಿದೆ. ಅವರಿಗೆ ಈಗ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವೇ ಸಿಕ್ಕಿದೆ. ಆಂಧ್ರದ ಶ್ರೀಕಾಕುಲಂ ಕ್ಷೇತ್ರದಿಂದ ಟಿಡಿಪಿ ಟಿಕೆಟ್ನಲ್ಲಿ ಸತತವಾಗಿ ಮೂರನೇ ಬಾರಿ ಗೆದ್ದಿರುವ ರಾಮಮೋಹನ್ ರೆಡ್ಡಿ, ಮಾಜಿ ಕೇಂದ್ರ ಸಚಿವ ಕೆ ಯರನ್ ನಾಯ್ಡು ಅವರ ಮಗ. ಕುತೂಹಲ ಎಂದರೆ ಯರನ್ ನಾಯ್ಡು ಕೂಡ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ಮಿನಿಸ್ಟರ್ ಎಂಬ ದಾಖಲೆಯನ್ನು 1996ರಲ್ಲಿ ಸ್ಥಾಪಿಸಿದ್ದರು. 2012ರಲ್ಲಿ ಯರನ್ ನಾಯ್ಡು ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮರಣವಪ್ಪಿದ್ದರು. ಅದಾದ ಬಳಿಕ ರಾಮಮೋಹನ್ ನಾಯ್ಡು ರಾಜಕೀಯಕ್ಕೆ ಬರಬೇಕಾಯಿತು.