SUDDIKSHANA KANNADA NEWS/ DAVANAGERE/ DATE-01-07-2025
ದಾವಣಗೆರೆ: ವೀರಶೈವ ಧರ್ಮದ ಸೈದ್ಧಾಂತಿಕ ತತ್ವ, ಸಿದ್ಧಾಂತಗಳ ಅರಿವಿಲ್ಲದ ಜನ ವೀರಶೈವ ಲಿಂಗಾಯತವೇ ಬೇರೆ, ಲಿಂಗಾಯತವೇ ಬೇರೆ ಎಂಬ ಗೊಂದಲ ಹುಟ್ಟಿಹಾಕಿ ಸಮಾಜ ಕಲುಷಿತಗೊಳಿಸುತ್ತಿದ್ದಾರೆ. ವೀರಶೈವ ಸೈದ್ಧಾಂತಿಕ ಪದ್ಧತಿ. ಲಿಂಗಾಯತ ಎನ್ನೋದು ರೂಢಿಯಿಂದ ಬಂದಿರುವ ಪದ. ಎರಡರಲ್ಲಿ ಬೇಧ ಭಾವನೆಗಳನ್ನು ವೀರಶೈವ ಧರ್ಮದ ಪೀಠಾಚಾರ್ಯರು ಹಿಂದೂ ಕಂಡಿಲ್ಲ. ಇಂದು ಕಾಣಲ್ಲ, ಮುಂದೂ ಕೂಡ ನಾವು ಬೇರೆ ಎಂದು ಕಾಣಲ್ಲ ಎಂಬುದಾಗಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
READ ALSO THIS STORY: ದಾವಣಗೆರೆಯಲ್ಲಿ 40 ವರ್ಷಗಳ ಬಳಿಕ ಪಂಚಪೀಠಾಧ್ಯಕ್ಷರು, ಶಿವಾಚಾರ್ಯರ ಶೃಂಗ ಸಮ್ಮೇಳನ ಜುಲೈ 21,22ಕ್ಕೆ: ಉದ್ದೇಶ ಬಹಿರಂಗಪಡಿಸಿದ ರಂಭಾಪುರಿ ಶ್ರೀ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಬಹಳ ದೊಡ್ಡದು. ಧರ್ಮಕ್ಕೆ ಜಗದ್ಗುರು ರೇಣುಕಾ ಪಂಚಾಚಾರ್ಯರು ಸ್ಥಾಪಿಸಿದ ಈ ಧರ್ಮ ಸಿದ್ಧಾಂತದ ಭದ್ರ ತಳಹದಿಯ ಮೇಲೆ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಈ ಸಂಸ್ಕೃತಿಗೆ ಮಾರುಹೋಗಿ ಧರ್ಮ ಸ್ವೀಕರಿಸಿದ್ದರು. ಧರ್ಮವನ್ನು ಮತ್ತಷ್ಟು ಬೆಳೆಸಿಕೊಂಡು ಬಂದವರು. . ಆದ್ರೆ, ಕೆಲವು ಜನರು ಸ್ವಾರ್ಥಕ್ಕಾಗಿ ಅಖಂಡ ಸಮಾಜವನ್ನು ಛಿದ್ರಗೊಳಿಸಲು ವ್ಯವಸ್ಥಿತ ಪಿತೂರಿ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ಇಂಥ ಕಾರ್ಯಗಳಿಗೆ ಹಿನ್ನೆಡೆಯೂ ಆಗಿದೆ. ಮುಂದೆಯೂ ಫಲಿಸದು ಎಂದು ಎಚ್ಚರಿಕೆ ನೀಡಿದರು.
1904ರಲ್ಲಿ ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿ ಸ್ವಾಮಿಗಳು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಟ್ಟುಹಾಕಿದ್ದರು. ಕೈಗೊಂಡ ಹತ್ತು ನಿಯಮಗಳು ಗುರುಪೀಠ, ವಿರಕ್ತ ಪರಂಪರೆ ಅವರಿಗಷ್ಟೇ ಅಲ್ಲ. ಎಲ್ಲರಿಗೂ ಅನ್ವಯವಾಗುವಂಥ, ಸಮಂಜಸವಾದ ಸೂತ್ರಗಳು. ಎಲ್ಲರೂ ಒಪ್ಪಿದ್ದಾರೆ. ಕುಮಾರಸ್ವಾಮಿ ಶ್ರೀಗಳು ಬರೆದಿಟ್ಟಿದ್ದನ್ನು ಉಲ್ಲಂಘಿಸಿ ಸ್ವೇಚ್ಛಾಚಾರಿಗಳಾಗಿ ಕೆಲವರು ಮಾತನಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಜನರಿದ್ದಾರೆ. ಇಂಥವರಿಂದ ಧರ್ಮಕ್ಕೆ ಅಪಚಾರ ಆಗುತ್ತಿರುವುದನ್ನು ತಡೆಗಟ್ಟಬೇಕು. ಎಲ್ಲಾ ವರ್ಗದ ಜನರಿಗೆ ಒಳ್ಳೆಯದು ಉಂಟು ಮಾಡಬೇಕು. ಉತ್ತಮ ಸಂಸ್ಕಾರ ಕೊಡಬೇಕೆಂಬುದು ಪಂಚಪೀಠಗಳ ಮೂಲ ಗುರಿ ಮತ್ತು ಧ್ಯೇಯವಾಗಿದೆ ಎಂದು ಹೇಳಿದರು.
ಈ ಒಂದು ದಾರಿಯಲ್ಲಿ ಹಿಂದಿನ ಪೀಠಾಚಾರ್ಯರು ಧರ್ಮದ ಸಂಗ್ರಾಮ ಮಾಡಿ ಜನಮನದಲ್ಲಿ ಶಾಂತಿ ಸಾಮರಸ್ಯದ ಬೀಜ ಬಿತ್ತಿದ್ದರು. ಪ್ರಸ್ತುತ ಪಂಚ ಪೀಠಾಧೀಶರು ಹಿರಿಯರ ಆದರ್ಶ ಮುಂದಿಟ್ಟುಕೊಂಡು ಆಧುನಿಕ ಕಾಲದ ಸಮಸ್ಯೆ, ಸವಾಲು ಗಮನದಲ್ಲಿರಿಸಿ ಸಮಾಜ ಕಟ್ಟಬೇಕು. ಸಂಸ್ಕೃತಿ ಬೆಳೆಸಬೇಕು ಎಂಬುದೇ ಈ ಶೃಂಗ ಸಮ್ಮೇಳನದ ಮೂಲ ಉದ್ದೇಶ ಎಂದು ತಿಳಿಸಿದರು.