SUDDIKSHANA KANNADA NEWS/ DAVANAGERE/ DATE:28_07_2025
ಬೆಂಗಳೂರು: ದಲಿತ ಮತ್ತು ಹಿಂದುಳಿದ ಮಠಾಧೀಶರು ನನ್ನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಯಾವ ಸಮುದಾಯ, ಜಾತಿಗಳಿಗೆ ಅಪಮಾನ ಮಾಡುವ ಉದ್ದೇಶವಾಗಲೀ, ನಿಂದಿಸುವ ರೀತಿಯಲ್ಲಾಗಲೀ ಮಾತನಾಡಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
READ ALSO THIS STORY: ಚನ್ನಗಿರಿಯಲ್ಲಿ ಗಂಡನಿಗೆ ಮಕ್ಕಳಾಗಲ್ಲವೆಂದು ಪ್ರಿಯಕರನ ಸಂಗ: ಪತಿ ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧಿಸಿದ್ದೇ ರೋಚಕ!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಬೇಕು ಎಂಬ ನಿಟ್ಟಿನಲ್ಲಿ ಮಾತನಾಡಿದ್ದೇವೆ. ಆಯಾ ಧರ್ಮ, ಜಾತಿಗಳಿಗೆ
ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಇರುತ್ತದೆ. ಇದಕ್ಕೆ ಅಪವಾದದಂತೆ ಮಾತನಾಡಿಲ್ಲ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳು ಒಟ್ಟಾಗಬೇಕು ಎಂಬುದು ನಮ್ಮ ಆಶಯ. ದಾವಣಗೆರೆಯಲ್ಲಿ ನಡೆದ ಶೃಂಗಸಭೆಯಲ್ಲಿಯೂ ಇದನ್ನೇ ಪ್ರತಿಪಾದಿಸಿದ್ದೇವೆ. ಹಿಂದುಳಿದ, ದಲಿತ ಮಠಾಧೀಶರು
ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿರುದ್ಧ ಆರೋಪ ಮಾಡಿರುವುದು ಗಮನಕ್ಕೆ ಬಂದಿದೆ. ತಾವು ಈ ರೀತಿಯಲ್ಲಿ ನಡೆದುಕೊಂಡಿಲ್ಲ. ಯಾವ ಜಾತಿ, ಧರ್ಮ, ಮಠಗಳಿಗೆ ಚ್ಯುತಿ ಬರುವಂತೆ ಮಾತನಾಡಿಲ್ಲ, ದಯವಿಟ್ಟು ಅಪಾರ್ಥ ಕಲ್ಪಿಸಬೇಡಿ ಎಂದು ಶ್ರೀಗಳು ಹೇಳಿದ್ದಾರೆ.
ಅವರವರ ಜಾತಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ, ಸಮಾಜ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಬಗ್ಗೆ ಮಾತನಾಡಿದ್ದೇವೆ. ಕೆಲವು ಶ್ರೀಗಳು ತಪ್ಪಾಗಿ ತಿಳಿದುಕೊಂಡಿದ್ದಾರೆ. ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡುವಂತೆ ಹೇಳಿದ್ದೇನೆ. ಮಾಧ್ಯಮದ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ. ಯಾವ ಸಮುದಾಯ, ಜಾತಿಗೆ ನೋವು ಮಾಡುವ ಉದ್ದೇಶ ಇಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದರು.
ಜಾತಿ ಮಠಗಳಿಂದ ಸಮಾಜ ಕಲುಷಿತಗೊಂಡಿದೆ ಎಂದು ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಂಭಾಪುರಿ ಶ್ರೀಗಳು ಹೇಳಿದ್ದರು. ಇದಕ್ಕೆ ಹಿಂದುಳಿದ ಮತ್ತು ದಲಿತ ಮಠಾಧೀಶರು ಒಟ್ಟಾಗಿ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.