
ಜೈಪುರ (ರಾಜಸ್ಥಾನ): 2028ರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ರಾಜಸ್ಥಾನ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿಗೆ ಭಾರಿ ಮಧ್ಯಂತರ ಆಘಾತ ನೀಡಿದೆ.
ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರ್ಣಾಯಕ ಗೆಲುವಿನತ್ತ ದಾಪುಗಾಲಿಟ್ಟಿದ್ದು, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೇತೃತ್ವದ ಸರ್ಕಾರದ ವಿರುದ್ಧ ರೈತರು ಮತ್ತು ಗ್ರಾಮೀಣ ಮತದಾರರು ಅಸಮಾಧಾನಗೊಂಡಿದ್ದಾರೆ ಎಂಬ ಕಾಂಗ್ರೆಸ್ ವಾದಕ್ಕೆ ಈ ಫಲಿತಾಂಶ ದೊಡ್ಡ ಬಲ ನೀಡಿದೆ.
ರಾಜಸ್ಥಾನದ 41 ಜಿಲ್ಲೆಗಳ ಪೈಕಿ 37 ಜಿಲ್ಲೆಗಳ 1,275 ಜಿಲ್ಲಾ ಪರಿಷತ್ ಸ್ಥಾನಗಳು ಮತ್ತು 7,543 ಪಂಚಾಯತ್ ಸಮಿತಿ ಸ್ಥಾನಗಳಿಗೆ ಮತ ಎಣಿಕೆ ನಡೆದಿದೆ. ಪ್ರಸ್ತುತ ಹಾಲಿ ಸಮಿತಿಗಳ ಐದು ವರ್ಷಗಳ ಅವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿರುವ ಕಾರಣ, ಉಳಿದ ನಾಲ್ಕು ಜಿಲ್ಲೆಗಳ ಫಲಿತಾಂಶವು ಡಿಸೆಂಬರ್ನಲ್ಲಿ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಹನುಮಾನ್ ಬೇನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (RLP) ಮತ್ತು ಭಾರತ್ ಆದಿವಾಸಿ ಪಾರ್ಟಿ (BAP) ಸೇರಿದಂತೆ ಸಣ್ಣ ಪ್ರಾದೇಶಿಕ ಪಕ್ಷಗಳೂ ಸಹ ಗಮನಾರ್ಹ ಸಾಧನೆ ಮಾಡಿವೆ.
ಜಿಲ್ಲಾ ಪರಿಷತ್ ಮತ್ತು ಸಮಿತಿ ಬಲಾಬಲ: ಒಟ್ಟು 37 ಜಿಲ್ಲಾ ಪರಿಷತ್ಗಳ ಪೈಕಿ ಕಾಂಗ್ರೆಸ್ 25ರಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಕೇವಲ 8ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಾಗೆಯೇ 419 ಪಂಚಾಯತ್ ಸಮಿತಿಗಳ ಪೈಕಿ ಕಾಂಗ್ರೆಸ್ 213, ಬಿಜೆಪಿ 85 ಹಾಗೂ ಪಕ್ಷೇತರರು 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ಭದ್ರಕೋಟೆಗಳಿಗೆ ಲಗ್ಗೆ: ಬಿಜೆಪಿಯ ಭದ್ರಕೋಟೆಗಳಾದ ಮೇವಾರ ಮತ್ತು ಮಾರ್ವಾರ ಪ್ರದೇಶಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಜೈಪುರ, ಜೋಧ್ಪುರ, ಬಿಕಾನೇರ್ ಮತ್ತು ಭಿಲ್ವಾರಾ ಜಿಲ್ಲಾ ಪ್ರಮುಖ್ ಹುದ್ದೆಗಳನ್ನು ಕಾಂಗ್ರೆಸ್ ಮರಳಿ ಪಡೆದಿದ್ದು, ಚಿತ್ತೋರ್ಗಢ, ಸಿರೋಹಿ, ರಾಜ್ಸಮಂದ್ ಮತ್ತು ಜಲೋರ್ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಬಿಜೆಪಿ ಅಜ್ಮೀರ್ನಲ್ಲಿ ಹಿಡಿತ ಉಳಿಸಿಕೊಂಡಿದ್ದು, ಉದಯಪುರದಲ್ಲಿ ಸೋಲಿನಿಂದ ಸ್ವಲ್ಪದರಲ್ಲೇ ಪಾರಾಗಿದೆ.
ಸಿಎಂ ಮತ್ತು ಸಚಿವರ ಕ್ಷೇತ್ರಗಳಲ್ಲಿ ಹಿನ್ನಡೆ: ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ತವರು ಜಿಲ್ಲೆ ಭರತ್ಪುರದಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಅವರ ವಿಧಾನಸಭಾ ಕ್ಷೇತ್ರವಾದ ಸಂಗನೇರ್ ಪಂಚಾಯತ್ ಸಮಿತಿಯನ್ನು RLP ಗೆದ್ದುಕೊಂಡಿದೆ. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರ ಜೋಧ್ಪುರ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರ ಬಿಕಾನೇರ್ನಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ.
ಸಚಿವರ ಕುಟುಂಬಸ್ಥರಿಗೆ ಸೋಲು: ರಾಜಸ್ಥಾನ ನಗರಾಭಿವೃದ್ಧಿ ಸಚಿವ ಜಬರ್ ಸಿಂಗ್ ಖರ್ರಾ ಅವರ ಪತ್ನಿ ಶಾಂತಿ ದೇವಿ (ಶ್ರೀಮಾಧೋಪುರ ವಾರ್ಡ್ ನಂ. 17) ಹಾಗೂ ಇಬ್ಬರು ಪುತ್ರರು (ವಾರ್ಡ್ 19 ಮತ್ತು 20) ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಕೈಗಾರಿಕಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಝೋಟ್ವಾರಾ ವ್ಯಾಪ್ತಿಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮತ್ತೊಂದೆಡೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಅವರ ಸಿಕಾರ್ ಮತ್ತು ಸಚಿನ್ ಪೈಲಟ್ ಅವರ ಟೋಂಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.
ಮೂರು ವರ್ಷಗಳ ಹಿಂದೆ 200 ವಿಧಾನಸಭಾ ಸ್ಥಾನಗಳ ಪೈಕಿ 115 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದ್ದ ಬಿಜೆಪಿಗೆ ಹಾಗೂ ಹಿರಿಯ ನಾಯಕಿ ವಸುಂಧರಾ ರಾಜೆ ಅವರನ್ನು ಬದಿಗೊತ್ತಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಭಜನ್ ಲಾಲ್ ಶರ್ಮಾ ಅವರಿಗೆ ಇದು ವೈಯಕ್ತಿಕ ಹಿನ್ನಡೆಯಾಗಿ ಪರಿಣಮಿಸಿದೆ. ಸೆಪ್ಟೆಂಬರ್ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಶೇ. 0.91 ರಷ್ಟು ಸಣ್ಣ ಮತಗಳ ಅಂತರದಿಂದ ಮೇಲುಗೈ ಸಾಧಿಸಿತ್ತು.
ಆದರೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಪರಿಶಿಷ್ಟ ಜಾತಿ, ಜಾಟ್, ಗುರ್ಜರ್ ಮತ್ತು ಮೀನಾ ಮತಬ್ಯಾಂಕ್ ಅನ್ನು ಕ್ರೋಢೀಕರಿಸುವುದರ ಜೊತೆಗೆ, ಬಿಜೆಪಿಯ ನಿಷ್ಠಾವಂತ ಮತಬ್ಯಾಂಕ್ ಎನಿಸಿದ್ದ ರಜಪೂತ ಮತದಾರರಲ್ಲೂ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
- Ashok Gehlot
- Bhajan Lal Sharma
- Congress vs BJP Rajasthan
- India Today news
- Panchayat Samiti Election
- Rajasthan Panchayat Election Results
- Rajasthan Panchayat Polls 2026
- Rajasthan Rural Polls
- Sachin Pilot
- Zila Parishad Results
- ಅಶೋಕ್ ಗೆಹ್ಲೋಟ್
- ಕಾಂಗ್ರೆಸ್ ಭರ್ಜರಿ ಗೆಲುವು
- ಜಿಲ್ಲಾ ಪರಿಷತ್ ಚುನಾವಣೆ
- ಪಂಚಾಯತ್ ಸಮಿತಿ ಫಲಿತಾಂಶ
- ಬಿಜೆಪಿ ಹಿನ್ನಡೆ
- ಭಜನ್ ಲಾಲ್ ಶರ್ಮಾ
- ರಾಜಸ್ಥಾನ ಚುನಾವಣಾ ಫಲಿತಾಂಶ 2026
- ರಾಜಸ್ಥಾನ ಪಂಚಾಯತ್ ಚುನಾವಣೆ
- ರಾಜಸ್ಥಾನ ರಾಜಕೀಯ
- ಸಚಿನ್ ಪೈಲಟ್




