ಡುಂಗರಪುರ: ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿ ಜನಪ್ರಿಯ ವೆಬ್ ಸೀರಿಸ್ ‘ಫರ್ಜಿ’ಯಿಂದ ಸ್ಪೂರ್ತಿ ಪಡೆದು ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾಯಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಮಾಸ್ಟರ್‌ಮೈಂಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಆರಕ್ಕೇರಿದೆ. ಜಿಲ್ಲಾ ಪೊಲೀಸ್ ಸೈಬರ್ ಸೆಲ್ ಹಾಗೂ ವಿಶೇಷ ತಂಡದ ಕಾರ್ಯಾಚರಣೆಯಿಂದ ಈ ಜಾಲ ಪತ್ತೆಯಾಗಿದೆ.
ಸೆಪ್ಟೆಂಬರ್ 30 ರಂದು ರಾಮಸಾಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದಾಗ ಈ ದಂಧೆ ಬೆಳಕಿಗೆ ಬಂದಿತ್ತು. ಅವರ ಬಳಿ ಇದ್ದ 500 ರೂ. ಮುಖಬಲೆಯ 4,95,500 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ವೇಳೆ ಉತ್ತರ ಪ್ರದೇಶದ ರವಿ ಮಿಶ್ರಾ ಈ ಜಾಲದ ಮಾಸ್ಟರ್‌ಮೈಂಡ್ ಎಂಬುದು ತಿಳಿದುಬಂದಿದೆ. ಪಂಜಾಬ್‌ನ ಲುಧಿಯಾನ ರೈಲು ನಿಲ್ದಾಣದಲ್ಲಿ ಪೊಲೀಸರು ಈತನನ್ನು ಸುಮಾರು 1,300 ಕಿಲೋಮೀಟರ್‌ಗಳಷ್ಟು ಸುದೀರ್ಘ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಸ್ಟರ್‌ಮೈಂಡ್ ಬಂಧನ: ಪಂಜಾಬ್‌ನ ಲುಧಿಯಾನದಲ್ಲಿ 1,300 ಕಿ.ಮೀ. ಚೇಸಿಂಗ್ ಬಳಿಕ ರವಿ ಮಿಶ್ರಾ ಸೆರೆ.
ಅಲಿಬಾಬಾ ಹಾಗೂ ಟೆಲಿಗ್ರಾಮ್ ಬಳಕೆ: ಚೀನಾದ ಆನ್‌ಲೈನ್ ಮಾರುಕಟ್ಟೆ ಅಲಿಬಾಬಾ ಮೂಲಕ ವಿಶೇಷ ಕಾಗದ ಆಮದು ಮತ್ತು ‘ಅಂಕಿತ್ ಪೇಪರ್ ಸೆಲ್ಲರ್’ ಟೆಲಿಗ್ರಾಮ್ ಚಾನೆಲ್ ಮೂಲಕ ಕಾಗದ ಸರಬರಾಜು.
ಫರ್ಜಿ ಪ್ರಭಾವ: ಶಾಹಿದ್ ಕಪೂರ್ ಅಭಿನಯದ ‘ಫರ್ಜಿ’ ವೆಬ್ ಸೀರಿಸ್‌ನಿಂದ ಪ್ರೇರಣೆಗೊಂಡು ಯೂಟ್ಯೂಬ್ ಮತ್ತು ಫೋಟೋಶಾಪ್ ಮೂಲಕ ನಕಲಿ ನೋಟು ಮುದ್ರಣ ಕಲಿತ ಆರೋಪಿಗಳು.
ವಿಚಾರಣೆಯ ವೇಳೆ ಹರಿಯಾಣದ ಅಂಬಾಲಾ ನಿವಾಸಿ ಆನಂದ್ ರಾಜ್‌ಪೂತ್ ನಕಲಿ ನೋಟು ತಯಾರಿಸುವ ವಿಧಾನವನ್ನು ಕಲಿಸಿಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ತರುಣ್ ಮೇಕರ್ ಎಂಬಾತ 500 ರೂ. ನೋಟಿನ ಫೋಟೋಶಾಪ್ PSD ಫೈಲ್‌ಗಳನ್ನು ಒದಗಿಸಿದ್ದರೆ, ಆರಿಫ್ ಮೊಹಮ್ಮದ್ ಟೆಲಿಗ್ರಾಮ್ ಚಾನೆಲ್ ಮೂಲಕ ನಕಲಿ ನೋಟಿಗೆ ಬೇಕಾದ ಕಾಗದವನ್ನು ಪೂರೈಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.





Leave a comment