ನವದೆಹಲಿ/ಮಹಾರಾಷ್ಟ್ರ: ಸಾಮಾನ್ಯವಾಗಿ ದೈನಂದಿನ ಟ್ರಾಫಿಕ್, ಕೆಲಸದ ಒತ್ತಡ ಅಥವಾ ಬದುಕಿನ ಸಣ್ಣಪುಟ್ಟ ಕಷ್ಟಗಳಿಗೇ ಬೇಸತ್ತು ದೂರುವ ನಮಗೆ, ಬದುಕಿನ ನೈಜ ಹೋರಾಟದ ಸ್ಪೂರ್ತಿ ಎಲ್ಲಿಂದ ಬೇಕಾದರೂ ಸಿಗಬಹುದು. ಇದಕ್ಕೆ ಸಾಕ್ಷಿ ಎಂಬಂತೆ, ಉನ್ನತ ಶಿಕ್ಷಣದ ಕನಸು ನನಸು ಮಾಡಿಕೊಳ್ಳಲು ಹಗಲಿನಲ್ಲಿ ಕಾಲೇಜಿಗೆ ಹೋಗಿ, ರಾತ್ರಿ 10 ಗಂಟೆಯವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರದ ಯುವತಿಯೊಬ್ಬಳ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಆಕಸ್ಮಿಕ ಭೇಟಿ ನೀಡಿದ ಬದುಕಿನ ಪಾಠ:
ಎಕ್ಸ್ (ಟ್ವಿಟರ್) ಬಳಕೆದಾರ ವಿನೀತ್ ಕೆ ಎಂಬುವವರು ಇತ್ತೀಚೆಗೆ ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ತುಂಬಿಸಲು ತೆರಳಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಸುಮಾರು 45 ನಿಮಿಷಗಳ ಕಾಲ ಭಾರಿ ಟ್ರಾಫಿಕ್‌ನಲ್ಲಿ ಸಿಲುಕಿ ಬೇಸತ್ತಿದ್ದ ವಿನೀತ್, ಪೆಟ್ರೋಲ್ ಬಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಮರಾಠಿ ಬದಲು ಹಿಂದಿಯಲ್ಲಿ ಮಾತನಾಡಿದ್ದನ್ನು ಗಮನಿಸಿ ಆಕೆಯ ಹಿನ್ನೆಲೆ ವಿಚಾರಿಸಿದ್ದಾರೆ.
ಆಗ ಆ ಯುವತಿ ತಾನು ಮಹಾರಾಷ್ಟ್ರದ ರಾಯಗಡ ಜಿಲ್ಲೆಯವಳಾಗಿದ್ದು, ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾಳೆ.
ಕಾಲೇಜು ಫೀಸ್‌ಗಾಗಿ ಹಗಲು-ರಾತ್ರಿ ಶ್ರಮ:
ಯುವತಿಯ ದಿನಚರಿಯನ್ನು ಕೇಳಿ ವಿನೀತ್ ಆಶ್ಚರ್ಯಚಕಿತರಾದರು. ಆಕೆ ಹಗಲಿನಲ್ಲಿ ಕಾಲೇಜು ತರಗತಿಗಳಿಗೆ ಹಾಜರಾಗಿ, ಸಂಜೆಯಿಂದ ರಾತ್ರಿ 10 ಗಂಟೆಯವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಾಳೆ. ಇಷ್ಟೇ ಅಲ್ಲದೆ, ಕಾಲೇಜು ಶುಲ್ಕವನ್ನು ಭರಿಸಲು ವಾರಾಂತ್ಯದಲ್ಲಿ (Saturday & Sunday) ಬೆಳಿಗ್ಗೆ ಮತ್ತು ಸಂಜೆ ಹೀಗೆ ಡಬಲ್ ಶಿಫ್ಟ್ ಕೆಲಸ ಮಾಡುವುದಾಗಿ ಹೇಳಿದ್ದಾಳೆ.
“ನಾವು ಸಣ್ಣಪುಟ್ಟ ವಿಷಯಗಳಿಗೆ ದೂರು ಹೇಳುತ್ತೇವೆ, ಆದರೆ ಇಲ್ಲೊಬ್ಬಳು ಯುವತಿ ಉತ್ತಮ ಭವಿಷ್ಯಕ್ಕಾಗಿ ಯಾರಿಗೂ ಹೊರೆಯಾಗದೆ ನಿಶ್ಯಬ್ದವಾಗಿ ಕಷ್ಟಪಡುತ್ತಿದ್ದಾಳೆ” ಎಂದು ವಿನೀತ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಆಕೆಯ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸಿನ ನೆರವು ನೀಡಲು ಸಹ ವಿನೀತ್ ಮುಂದೆ ಬಂದಿದ್ದಾರೆ.
ನೆಟ್ಟಿಗರ ಶ್ಲಾಘನೆ ಮತ್ತು ಪಾರ್ಟ್-ಟೈಮ್ ಉದ್ಯೋಗದ ಚರ್ಚೆ:
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ಯುವತಿಯ ಸ್ವಾಭಿಮಾನ ಹಾಗೂ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತೆ ಭಾರತದಲ್ಲಿಯೂ ವಿದ್ಯಾರ್ಥಿಗಳಿಗೆ ಪಾರ್ಟ್-ಟೈಮ್ (ಭಾಗಶಃ) ಉದ್ಯೋಗ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು ಮತ್ತು ಕಾಲೇಜು ಆವರಣದಲ್ಲೇ (On-campus jobs) ದುಡಿಯುವ ಅವಕಾಶ ಕಲ್ಪಿಸಬೇಕು ಎಂಬ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ.





Leave a comment