ನವದೆಹಲಿ: ಟಾಟಾ ಸನ್ಸ್ ಕಾಯರ್ಕಾರಿ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮರುನೇಮಕಾತಿ ಸುತ್ತಲಿನ ವಿವಾದ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಉದ್ಯಮಗಳನ್ನು ಸರ್ಕಾರ ತನ್ನ “ಆಟಿಕೆ”ಯಂತೆ ಬಳಸಿಕೊಳ್ಳುತ್ತಿದೆ ಮತ್ತು ಉದ್ಯಮಿಗಳು ಭಯದಿಂದ ಧ್ವನಿ ಎತ್ತುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಟಾಟಾ ಗ್ರೂಪ್ ಸಂಸ್ಥೆಯನ್ನು “ಕ್ರಿಮಿನಲ್ ಆಗಿ ನಾಶಪಡಿಸಲಾಗುತ್ತಿದೆ” ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತೀಯ ಉದ್ಯಮಿಗಳು ಮೌನವಾಗಿರುವುದನ್ನು ಪ್ರಶ್ನಿಸಿದ್ದಾರೆ. ಈ ರೀತಿಯ ಅನ್ಯಾಯ ಮತ್ತು ಅಪರಾಧಗಳ ವಿರುದ್ಧ ಧ್ವನಿ ಎತ್ತಿ ನ್ಯಾಯ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ನಡುವೆ ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಅವರ ಮರುನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಪತ್ರ ಬರೆದಿರುವುದು ಗುಂಪಿನ ಒಳಗಿನ ವಿವಾದವನ್ನು ಬಯಲಿಗೆಳೆದಿದೆ.
ರಾಹುಲ್ ಗಾಂಧಿ ಆರೋಪ: ಬಿಜೆಪಿ ಸರ್ಕಾರ ಉದ್ಯಮಿಗಳನ್ನು ಹೆದರಿಸುತ್ತಿದೆ, ಟಾಟಾ ಸಂಸ್ಥೆಯ ಉಳಿವಿಗಾಗಿ ಮೌನ ಮುರಿಯಬೇಕಿದೆ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ನಿಯಮಾವಳಿಗಳ ಉಲ್ಲಂಘನೆ: ಆರ್ಟಿಕಲ್ 118 ರ ಅಡಿಯಲ್ಲಿ ಯಾವುದೇ ಆಯ್ಕೆ ಸಮಿತಿಯನ್ನು ರಚಿಸದೆ ಚಂದ್ರಶೇಖರನ್ ಅವರ ಮರುನೇಮಕಾತಿ ಆಂಗೀಕರಿಸಲಾಗಿದೆ ಎಂದು ನೋಯೆಲ್ ಟಾಟಾ ದೂರಿದ್ದಾರೆ.
ದಾಖಲೆಗಳ ಮುಚ್ಚಿಡುವಿಕೆ: ಸೆಪ್ಟೆಂಬರ್ 17 ರ ಆಡಳಿತ ಮಂಡಳಿ ಸಭೆಯ ವಿಡಿಯೋ/ಆಡಿಯೋ ರೆಕಾರ್ಡಿಂಗ್ಗಳು ಹಾಗೂ ಅಂತಿಮ ನಡಾವಳಿಗಳನ್ನು (ಮಿನಿಟ್ಸ್) ನೀಡಲು ಸಂಸ್ಥೆ ವಿಫಲವಾಗಿದೆ ಎಂದು ನೋಯೆಲ್ ಟಾಟಾ ಆರೋಪಿಸಿದ್ದಾರೆ.
ಏಳು ದಿನಗಳ ಗಡುವು: 7 ದಿನಗಳ ಒಳಗಾಗಿ ಸಭೆಯ ಎಲ್ಲಾ ದಾಖಲೆಗಳು, ಅಜೆಂಡಾಗಳು ಮತ್ತು ವೀಡಿಯೊ ರೆಕಾರ್ಡಿಂಗ್ಗಳನ್ನು ಒದಗಿಸುವಂತೆ ಮತ್ತು ವಿವಾದ ಇತ್ಯರ್ಥವಾಗುವವರೆಗೆ ಮುಂದಿನ ಕ್ರಮ ತಡೆಯುವಂತೆ ನೋಯೆಲ್ ಟಾಟಾ ಆಗ್ರಹಿಸಿದ್ದಾರೆ.
ಮರುನೇಮಕಾತಿಯ ಪ್ರಕ್ರಿಯೆ ಮತ್ತು ಕಂಪನಿಯ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ನಿಯಮಾವಳಿಗಳನ್ನು ಪಾಲಿಸದಿರುವ ಬಗ್ಗೆ ನೋಯೆಲ್ ಟಾಟಾ ಅವರು ಕಂಪನಿ ಕಾರ್ಯದರ್ಶಿಗೆ ಸುದೀರ್ಘ ಪತ್ರ ಬರೆದಿದ್ದು, ಈ ಸರಣಿ ಬೆಳವಣಿಗೆಗಳು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.





Leave a comment