SUDDIKSHANA KANNADA NEWS/ DAVANAGERE/ DATE:02-05-2023
ದಾವಣಗೆರೆ (DAVANAGERE): ಪ್ರಧಾನಿ ನರೇಂದ್ರ ಮೋದಿ (NARENDRA MODI) ಎಲ್ಲೇ ಹೋದರೂ ತಮ್ಮ ಬಗ್ಗೆಯೇ ಮಾತ್ರ ಮಾತನಾಡುತ್ತಾರೆ. ಜನರ ಸಮಸ್ಯೆಗಳ ಬಗ್ಗೆ ಏನೂ ಚಕಾರ ಎತ್ತಲ್ಲ. ಶೇಕಡಾ 60ರಷ್ಟು ಹೇಳಿಕೊಳ್ಳಿ. ಕನಿಷ್ಠ 30ರಷ್ಟಾದರೂ ಅಭಿವೃದ್ಧಿ, ಜನಪರ ಕಾಳಜಿ ಬಗ್ಗೆ ತಿಳಿಸಿ ಎಂದು ಎಐಸಿಸಿ (AICC) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (RAHUL GANDHI) ವಾಗ್ದಾಳಿ ನಡೆಸಿದರು.
ಹರಿಹರ (HARIHARA) ಪಟ್ಟಣದ ಗಾಂಧಿನಗರ (GANDHI NAGARA)ಮೈದಾನದಲ್ಲಿ ಕಾಂಗ್ರೆಸ್ (CONGRESS) ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ (NANDIGAVI SHRINIVAS) ಪರ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 24 ಗಂಟೆಯೂ ಕುಡಿಯುವ ನೀರಿನ ಸೌಕರ್ಯ ಕೊಡುವ ಯೋಜನೆ ಜಲಸಿರಿಯನ್ನು ದಾವಣಗೆರೆ(DAVANAGERE)ಯಲ್ಲಿ ಅನುಷ್ಠಾನಗೊಳಿಸಿಲ್ಲ. ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೂ ಮೋದಿ ಮಾತನಾಡಬೇಕು. ಆರು ನೂರು ಮನೆಗಳನ್ನು ಹಂಚಿಕೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಇದುವರೆಗೆ ಭೂಮಿಯೂ ಖರೀದಿ ಆಗಿಲ್ಲ. ಅಷ್ಟೇ ಅಲ್ಲ, ರೈತರ (FARMER) ಕಡೆಯಿಂದ ಭೂಮಿಯನ್ನು ಕಸಿದುಕೊಳ್ಳುವ ಯತ್ನ ಕೂಡ ನಡೆಸಲಾಗುತ್ತಿದೆ. ಪ್ರಧಾನಿಯವರು ಇಂತ ವಿಚಾರಗಳ ಬಗ್ಗೆಯೂ ಮಾತನಾಡಬೇಕು ಎಂದು ಸವಾಲು ಹಾಕಿದರು.
ಮೋದಿ (MODI) ಅವರಿಗೆ ಅವರ ಬಗ್ಗೆ ಹೇಳಿಕೊಳ್ಳುವುದು ತುಂಬಾನೇ ಖುಷಿಯಾಗಬಹುದು. ಎಲ್ಲಿ ಹೋದರೂ ನಿಮ್ಮ ಬಗ್ಗೆಯೇ ಹೇಳಿಕೊಳ್ಳುತ್ತೀರಾ. ಜನರಿಗೆ ಏನು ಮಾಡಿದ್ದೀರಾ? ಏನು ಮಾಡಬೇಕು ಎಂದುಕೊಂಡಿದ್ದೀರಾ. ಏನು ತಪ್ಪು ಮಾಡಿದ್ದೀರಾ ಎಂಬ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ನೀಡಿ. ಬಿಜೆಪಿ(BJP)ಯವರಿಗೆ 40 ಸಂಖ್ಯೆ ತುಂಬಾನೇ ಇಷ್ಟ. ಎಲ್ಲಿ ಹೋದರೂ 40 ಮಾತ್ರನೇ ಹೇಳ್ತಾರೆ. ಸರ್ಕಾರಿ ಕೆಲಸ, ಕಾಲೇಜಿಗೆ ಸೇರಲು, ಸಬ್ ಇನ್ ಸ್ಪೆಕ್ಟರ್ ನೇಮಕಾತಿ, ಗುತ್ತಿಗೆದಾರರು ಸೇರಿದಂತೆ ಎಲ್ಲದರಲ್ಲಿಯೂ ಶೇ. 40 ರಷ್ಟು ಕಮೀಷನ್ ಕೇಳುತ್ತಾರೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸ್ಥಾನಗಳನ್ನು ಮಾತ್ರ ನೀಡುವ ಕೆಲಸ ಮಾಡಿ. 150 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ. ಇಲ್ಲದಿದ್ದರೆ ಬಿಜೆಪಿಯು ಆಪರೇಷನ್ ಮಾಡುವ ಸಾಧ್ಯತೆ ಇದೆ. ಬಹುಮತಕ್ಕಿಂತ ಹೆಚ್ಚು ಸ್ಥಾನ ಬಂದರೆ ಸರ್ಕಾರ ಕೆಡವಲು ಆಗದು ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಬಿಜೆಪಿ (BJP) ಸರ್ಕಾರ ಲೂಟಿ ಹೊಡೆದಿದೆ. ಬರುವ ಐದು ವರ್ಷಗಳಲ್ಲಿ ಜನರ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲು ಯೋಜನೆ ಹಾಕಿಕೊಂಡಿದ್ದಾರೆ. ಮುಂಬರುವ ಸರ್ಕಾರ ಅಭದ್ರಗೊಳಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ (CONGRESS) ಪಕ್ಷಕ್ಕೆ ದೊಡ್ಡ ಬಹುಮತ ಕೊಡಿ. ಆಗ ಸರ್ಕಾರ ಅಭದ್ರಗೊಳಿಸಲು ಸಾಧ್ಯವಾಗಲ್ಲ. ಇದಕ್ಕಾಗಿ ಕೋಟ್ಯಾಂತರ ಹಣ ವ್ಯಯಿಸಲು ಬಿಜೆಪಿ ಸಿದ್ಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಿ ನೋಡಿದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಸಿಲಿಂಡರ್, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ದರಗಳು ಏರಿಕೆಯಾಗಿವೆ. ಇಂದು ದೇಶದಲ್ಲಿ 40 ಕೋಟಿ ಜನರು ಬಡತನ ರೇಖೆಗಿಂತ ಕೆಳಗಡೆ ಹೋಗಿದ್ದಾರೆ. ಇಂದು ನಾನು ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಗೌರವದಿಂದ ಕಾಣುತ್ತೇವೆ. ನರೇಂದ್ರ ಮೋದಿ (NARENDRA MODI) ಕರ್ನಾಟಕ ರಾಜ್ಯಕ್ಕೆ ಬಂದಾಗ ಯಾವ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುವುದಿಲ್ಲ. ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹೆಸರು ತೆಗೆದುಕೊಳ್ಳುವುದಿಲ್ಲ.
ಕೇವಲ ಮೋದಿ ಅವರದ್ದೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ರೈತರು, ಯುವಕರು, ಮಹಿಳೆಯರು, ಬಡವರ ಬಗ್ಗೆ ಮೋದಿ ಅವರು ಮಾತನಾಡಬೇಕು. ಶೇಕಡಾ 40 ರಷ್ಟು ಕಮೀಷನ್ ಸರ್ಕಾರವಾಗಿದ್ದರೂ ಯಾರ್ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಏನೆಲ್ಲಾ ತನಿಖೆ ನಡೆಸಿದ್ದೀರಾ ಎಂಬುದರ ಬಗ್ಗೆ ಜನರಿಗೆ ತಿಳಿಸಿ. ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ್ದೀರಾ. 2018ರ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಪ್ರಣಾಳಿಕೆಯಲ್ಲಿ ಶೇ.60ರಷ್ಟು ಈಡೇರಿಸಿಲ್ಲ. ಪ್ರವಾಹ ಬಂದಾಗ ಏನೂ ಮಾಡಿಲ್ಲ. ಜಿಎಸ್ ಟಿ ಹಣ ಕೇಂದ್ರದಿಂದ ರಾಜ್ಯಕ್ಕೆ ಬಂದಿಲ್ಲ. ಕರ್ನಾಟಕ – ಮಹಾರಾಷ್ಟ್ರ ನಡುವೆ ಕಲಹ ಆದಾಗ ಮಾತನಾಡಿಲ್ಲ. ಕಳೆ ಮೂರು ವರ್ಷಗಳ ಕಾಲ ಲೂಟಿ ಹೊಡೆಯುವುದರಲ್ಲಿಯೇ ನಿರತವಾಗಿದೆ. ಕಾಂಗ್ರೆಸ್ ಸರ್ಕಾರ ಏನು ಮಾಡಬೇಕು ನೀವೇ ಹೇಳಿ. ಲೂಟಿ ಹೊಡೆದಿರುವ ಹಣವನ್ನು ಜನರಿಗೆ ವಾಪಸ್ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ (CONGRESS) ಪಕ್ಷವು ಐದು ಗ್ಯಾರಂಟಿ ಕೊಟ್ಟಿದೆ. ಮೊದಲನೇ ಕ್ಯಾಬಿನೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. 2000 ರೂ. ಪ್ರತಿ ತಿಂಗಳು ಮನೆ ಯಜಮಾನಿಗೆ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಮಹಿಳೆಯರಿಗೆ ಬಸ್ ಪ್ರಯಾಣ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ, ಡಿಪ್ಲೊಮೊ ಓದಿದವರಿಗೆ 1500 ರೂಪಾಯಿ ನೀಡುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಈ ಭರವಸೆ ಈಡೇರಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಂಥ ಯೋಜನೆಗಳನ್ನು ನೀಡುತ್ತದೆಯೇ ಎಂದು ಪ್ರಶ್ನಿಸಿದರು.
ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ನಾಲ್ಕು ಸಾವಿರ ಕಿಲೋಮೀಟರ್ ವರೆಗೆ ಭಾರತ್ ಜೊಡೋ ಯಾತ್ರೆ ನಡೆಸಿದ ಗಂಡುಮಗ. ಬಿಜೆಪಿಯಲ್ಲಿ ಇಂಥ ಯಾವ ಗಂಡುಮಗಾನೂ ಇಲ್ಲ. ಬಿಜೆಪಿಯವರು 4000 ಕಿಲೋಮೀಟರ್ ಯಾತ್ರೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ತನಗೆ ಹರಿಹರದಿಂದ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೈ ತಪ್ಪಿದೆ. ನಾಲ್ಕು ದಿನ ಬೇಸರ ಆಗಿತ್ತು. ಅದರಲ್ಲಿ ಎರಡು ಮಾತಿಲ್ಲ. ಈ ಬಾರಿ ಹರಿಹರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಅವರನ್ನು ಗೆಲ್ಲಿಸಲು ನಾವೆಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ಅವಿನಾಶ್ ಪಾಂಡೆ, ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಕಾಂಗ್ರೆಸ್ ಅಭ್ಯರ್ಥಿಗಳಾದ ದೇವೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್, ಡಿ. ಜಿ. ಶಾಂತನಗೌಡ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಪಂಚಮಸಾಲಿ ಪೀಠಕ್ಕೆ ಭೇಟಿ:
ಹರಿಹರ ತಾಲೂಕಿನಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಶ್ರೀ ವಚನಾನಂದ ಸ್ವಾಮೀಜಿ ಅವರ ಜೊತೆ ಸಮಾಲೋಚನೆ ನಡೆಸಿದರು. ಶ್ರೀಗಳು ಶಾಲು ಹೊದಿಸಿ ಗುಲಾಬಿ ಹೂವು ಸುರಿಸಿ ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿದರು. ಈ ವೇಳೆ ಶ್ರೀಗಳ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಅವರು, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು. ಈ ವೇಳೆ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಪಿ. ಸಿ. ಉಮಾಪತಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.