ದಾವಣಗೆರೆ (DAVANAGERE): ಹೆಣ್ಣು ಮಕ್ಕಳು ಶಾಲೆಗೆ ಹೋಗಲು, ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದ ಪರಿಸ್ಥಿತಿ. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು, ನಿರ್ಗತಿಕರು, ಭಿಕ್ಷುಕರ ಮಕ್ಕಳೂ ಸೇರಿದಂತೆ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಕರ್ನಾಟಕದ ಸಾವಿತ್ರಿಬಾಯಿ ಪುಲೆ ಎಂದೇ ಖ್ಯಾತರಾಗಿದ್ದ ಹಾವೇರಿಯ ಪುಟ್ಟಮ್ಮಾಜಿ (PUTTAMMAJI) ಇನ್ನು ನೆನಪು ಮಾತ್ರ.
ಹಾವೇರಿ (HAVERI) ಜಿಲ್ಲೆ ರಾಣೇಬೆನ್ನೂರಿನ ಕೊಡಿಯಾಲ ಗ್ರಾಮದ ವಿವೇಕಾನಂದ ಗ್ರಾಮೀಣ ವಿದ್ಯಾಸಂಸ್ಥೆ ಅಡಿ ಭುವನೇಶ್ವರಿ ಆದರ್ಶ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆಗಿಸುವಲ್ಲಿ ಪುಟ್ಟಮ್ಮಾಜಿ ಪಾತ್ರ ಬಹಳ ಹಿರಿದು. 35 ವರ್ಷಗಳ ಕಾಲ ಪಟ್ಟ ಪರಿಶ್ರಮದಲ್ಲಿ ಸಾವಿರಾರು ಮಕ್ಕಳು ಇಂದು ಬೆಳೆದು ಉನ್ನತ ಉದ್ಯೋಗದಲ್ಲಿದ್ದಾರೆ.
ಅವರಿಗೆ 95 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೋಮಾಕ್ಕೆ ಜಾರಿದ್ದರು. ಅಲ್ಲಿಂದಲೂ ಬೆಡ್ ನಲ್ಲಿಯೇ ಜೀವನ. ಸಾವಿರಾರು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಿದ ಪುಟ್ಟಮ್ಮಾಜಿ ಅವರದ್ದು ಹಾವೇರಿ ಜಿಲ್ಲೆಯ ಬ್ಯಾಡಗಿ ತವರೂರು. ಮದುವೆಯಾದ ಬಳಿಕ ರಾಣೆಬೆನ್ನೂರಿನ ಕುಮಾರಪಟ್ಟಣಂಕ್ಕೆ ಬಂದಿದ್ದರು. ಬಸಯ್ಯ ಹಿರೇಮಠ್ ಧರ್ಮಪತ್ನಿಯಾಗಿದ್ದ ಅವರಿಗೆ ಐವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಅಮೆರಿಕಾದಲ್ಲಿ ಮೊಮ್ಮಕ್ಕಳು ಕೆಲಸ ಮಾಡುತ್ತಿದ್ದಾರೆ.
ಇವರ ಪುತ್ರಿಯರು ಹಾಗೂ ಅಳಿಯಂದಿರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾವೇರಿಯಲ್ಲಿ ಪುಟ್ಟಮ್ಮಾಜಿ ಅಂದರೆ ಸಾವಿತ್ರಿ ಬಾಯಿ ಪುಲೆ ಅಂತಾನೇ ಖ್ಯಾತಿ ಹೊಂದಿದ್ದರು. ರಾಣೆಬೆನ್ನೂರು ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ
ಇವರು ಮಾಡಿದ ಸಾಧನೆ ನಿಜಕ್ಕೂ ಅದ್ವಿತೀಯ.
ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವರನ್ನು ಎರಡರಿಂದ ಮೂರು ಬಾರಿ ಪತಿ ಬಸಯ್ಯ ಹಿರೇಮಠ ಕೆಲಸಕ್ಕೆ ಹೋಗುವುದಕ್ಕೆ ನಿರ್ಬಂಧ ಹಾಕಿದ್ದರು. ಮನೆಯಲ್ಲಿ ಎರಡರಿಂದ ಮೂರು ವರ್ಷ, ಐದು ವರ್ಷಗಳ ಕಾಲ ಇದ್ದರೂ ಮತ್ತೆ
ಕೆಲಸಕ್ಕೆ ಹೋದರೆ ಅವರಿಗೆ ಅವಕಾಶ ನೀಡಲಾಗುತಿತ್ತು. ಅಷ್ಟರ ಮಟ್ಟಿಗೆ ಮಕ್ಕಳ ಪ್ರೀತಿ ಸಂಪಾದನೆ ಮಾಡಿದ್ದ ಎಲ್ಲರ ಮೆಚ್ಚಿನ ಟೀಚರ್ ಆಗಿದ್ದರು.
1988ರಲ್ಲಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಕ್ಕಳು ರಸ್ತೆ ದಾಟಲು ತುಂಬಾನೇ ಕಷ್ಟಪಡುತ್ತಿದ್ದರು. ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಈ ಭಾಗದಲ್ಲಿದ್ದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು
ಎಂಬ ಕಾರಣಕ್ಕೆ ಸ್ವಂತ ಶಾಲೆಯನ್ನು ತೆರೆಯಲು ಮುಂದಾದರು. ಆರಂಭದಲ್ಲಿ ತನಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿಯೇ ಬಡವರು, ನಿರ್ಗತಿಕರು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ದೇವಸ್ಥಾನ, ಮನೆ ಮನೆಗಳಲ್ಲಿ ಸರ್ಕಾರದಿಂದ ಅನುಮತಿ ಪಡೆದು ಮಕ್ಕಳಿಗೆ ಶಿಕ್ಷಣ ಹೇಳಿಕೊಡುವ ಕಾಯಕ ಮುಂದುವರಿಸಿದ್ದಾರೆ. ಕಳೆದ 35 ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದರೂ ಶಿಕ್ಷಕಿ ವೃತ್ತಿ ಬಿಟ್ಟಿರಲಿಲ್ಲ. ಆರೋಗ್ಯ ಕೈಕೊಡುವವರೆಗೂ ಮಕ್ಕಳಿಗೆ ವಿದ್ಯಾದಾನ ಮಾಡಿದ ಮಹಾಮಾತೆ ಪುಟ್ಟಮ್ಮಾಜಿ.
ಕುಟುಂಬದವರು ಮತ್ತು ಪತಿಯು ಶಾಲೆ ತೆರೆಯಲು ಪುಟ್ಟಮ್ಮಾಜಿಗೆ ವಿರೋಧ ವ್ಯಕ್ತಪಡಿಸಿದರೂ ತಲೆಕೆಡಿಸಿಕೊಳ್ಳಲಿಲ್ಲ. ಮನೆ ಮನೆಗಳಿಗೆ ಹೋಗಿ ಪಾಠ ಮಾಡುವ ಪರಿಪಾಠ ಆರಂಭದಲ್ಲಿದತ್ತು. 1988 ರಲ್ಲಿ ಅಂದರೆ ಸುಮಾರು 35 ವರ್ಷಗಳ
ಹಿಂದೆಯೇ ನಿವೃತ್ತಿಯಾದರೂ ಸಮಾಜ ಸೇವೆಯಲ್ಲಿ ಸೈ ಎನಿಸಿಕೊಂಡ ಮಹಾಮಾತೆ.
ಬಡ ಮಕ್ಕಳ ಪಾಲಿಗೆ ಆರಾಧ್ಯ ದೈವ ಆಗಿದ್ದರು. ಊಟಕ್ಕೆ ಇಲ್ಲದಿದ್ದರೂ ವ್ಯವಸ್ಥೆ ಮಾಡುತ್ತಿದ್ದರು. ಶಾಲಾ ಪಠ್ಯಪುಸ್ತಕ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ನೆರವು ನೀಡಿದವರು. ಆದ್ರೆ, ಎಂದೂ ಸಹ ತಾನು ಮಾಡಿದ ಕೆಲಸ ಹೇಳಿಕೊಳ್ಳದ
ನಿಸ್ವರ್ಥ ಜೀವಿ ಆಗಿದ್ದವರು.
ಸ್ವಾಮಿ ವಿವೇಕಾನಂದ ಸಂಸ್ಥೆ ಅಡಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದರೂ ಇದು ಪುಟ್ಟಮ್ಮಜ್ಜಿ ಶಾಲೆ ಅಂತಾನೆ ಪ್ರಸಿದ್ಧಿ ಪಡೆದ ಸಂಸ್ಥೆಯಾಗಿದೆ. ಪುಟ್ಟಮ್ಮಜ್ಜಿ ಬಡಮಕ್ಕಳಿಗಾಗಿ ಶಿಕ್ಷಣ ಕ್ರಾಂತಿ ಮಾಡಿದ್ದರಿಂದ ಕರ್ನಾಟಕದ ಸಾವಿತ್ರಿ ಬಾಯಿ ಫುಲೆ ಅಂತಲೆ ಖ್ಯಾತಿ ಕೂಡ ಪಡೆದರು.
ಇಷ್ಟೆಲ್ಲಾ ಸಾಧನೆ ಮಾಡಿದ ಪುಟ್ಟಾಮ್ಮಾಜಿ ಅವರಿಗೆ ರಾಜ್ಯ ಸರ್ಕಾರ ಗುರುತಿಸಿ ಯಾವುದೇ ಪ್ರಶಸ್ತಿ ನೀಡದೇ ಇದದ್ದು ಬೇಸರ ತರಿಸಿದೆ. ಲಕ್ಷಾಂತರ ಮಕ್ಕಳಿಗೆ ವಿದ್ಯಾರ್ಜನೆ, ಉಚಿತ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ದೇವರು ಎನಿಸಿಕೊಂಡ ಸಾವಿತ್ರಿ ಬಾಯಿ ಪುಲೆ ಖ್ಯಾತಿಯ ಅಮ್ಮನಿಗೆ ಗೌರವ ಸಿಗದಿರುವುದು ತುಂಬಾನೇ ಬೇಸರ ತರಿಸಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್.
ಆರಂಭದಲ್ಲಿ ಸುಸಜ್ಜಿತ ವ್ಯವಸ್ಥೆ ಇರಲಿಲ್ಲ. ಇಂದು ಶಾಲೆಯು ಸುಸಜ್ಜಿತ ಕಟ್ಟಡ ಹೊಂದಿದೆ. ಆದರೂ ಅಮ್ಮ ಹಳೆಯದಾದ ಹಂಚಿನ ಮನೆಯಲ್ಲಿ ವಾಸ ಮಾಡುತ್ತಿದ್ದರು. ಶಾಲೆಯು ಸುಸಜ್ಜಿತ ದೊಡ್ಡ ಕಟ್ಟಡವಾಗಿ ನಿರ್ಮಾಣ ಆದರೂ ಅಮ್ಮ ಮಾತ್ರ ಸಾಮಾನ್ಯ ಮಹಿಳೆಯಂತೆ ಬದುಕಿ ಬಾಳಿದವರು. ಇಂಥವರ ಆದರ್ಶ ಎಲ್ಲರಿಗೂ ಮಾದರಿ. ಎಲ್ಲರಿಗೂ ಒಂದೇ ಬೇಸರ ಏನು ಅಂದರೆ ಇಷ್ಟೆಲ್ಲಾ ಸಾಧನೆ ಮಾಡಿದವರು ಬೆಳಕಿಗೆ ಬರಲಿಲ್ವಾ ಎಂಬ ಕೊರಗು ಪ್ರತಿಯೊಬ್ಬರಲ್ಲಿಯೂ ಇದೆ ಎನ್ನುತ್ತಾರೆ ಮಲ್ಲಿಕಾರ್ಜುನ್.
2009ರಲ್ಲಿ ಈ ಶಾಲೆಯು ಅನುದಾನಿತ ಸರ್ಕಾರಿ ಶಾಲೆಯಾಯಿತು. ಅಂದಿನಿಂದ ಎಲ್ಲಾ ಶಿಕ್ಷಕರಿಗೂ ಸಂಬಳ ಬರುತ್ತಿದೆ. ಇದಕ್ಕಿಂತ ಮುಂಚೆ ಅಮ್ಮ ತನಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ನಮಗೆಲ್ಲಾ ಸಂಬಳ ನೀಡುತ್ತಿದ್ದರು. ಒಟ್ಟಾರೆ ಎಷ್ಟೋ ಮಕ್ಕಳ ಬದುಕು ರೂಪಿಸಿದ ಆ ಮಹಾತಾಯಿಗೆ ಇನ್ನಿಲ್ಲ ಎಂದು ಕೇಳಿದಾಗ ದುಃಖ ಆಯಿತು ಎನ್ನುತ್ತಾರೆ.