SUDDIKSHANA KANNADA NEWS/ DAVANAGERE/ DATE:02-04-2025
ಬೆಂಗಳೂರು: ರಾಜ್ಯದಲ್ಲಿ ಡೀಸೆಲ್, ಹಾಲು, ಮೊಸರು, ವಿದ್ಯುತ್, ಮುದ್ರಾಂಕ ಶುಲ್ಕ ಸೇರಿದಂತೆ ಹಲವು ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಇದು ಬಿಜೆಪಿ ಕಣ್ಣು ಕೆಂಪಾಗಿಸಿದೆ. ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿಯನ್ನೇ ನಡೆಸಿದೆ.
ಮಾತ್ರವಲ್ಲ, ಕನ್ನಡಿಗರ ಮೇಲೆ ತಲೆಗಂದಾಯ ಹೇರಲು ಸಜ್ಜಾಗಿರುವ ಸರ್ಕಾರ ಎಂದು ಟೀಕಿಸಿರುವ ಬಿಜೆಪಿಯು, ಬೆಲೆ ಏರಿಕೆ ಬಾದ್ ಷಾ ಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯದ ಜನರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ಗ್ಯಾರಂಟಿಗಳ ಅನುಷ್ಠಾನದಿಂದ ದಿವಾಳಿಯಾಗಿರುವ ಸಿದ್ದರಾಮಯ್ಯ ಸರ್ಕಾರ ಅದರ ಋಣಭಾರವನ್ನು ಜನರ ಮೇಲೆ ಹಾಕುತ್ತಿದೆ.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಯಾವುದೇ ವಸ್ತುವಿನ ಬೆಲೆ ನಿಂತಲ್ಲಿ ನಿಂತ ಇತಿಹಾಸವೇ ಇಲ್ಲ. ಎಲ್ಲವೂ ದುಪ್ಪಟ್ಟಾಗುತ್ತಿದೆ. ರಾಜ್ಯದ ಜನತೆಗೆ ಮನೆಯೊಳಗಿದ್ದರೂ ಬೆಲೆ ಏರಿಕೆಯ ಚಿಂತೆ, ಹೊರಗಡೆ ಬಂದರೂ ಬೆಲೆ ಏರಿಕೆಯ ಚಿಂತೆ ಆರಂಭವಾಗಿದೆ.
ಹಾಲು, ವಿದ್ಯುತ್, ಮದ್ಯ, ಡೀಸೆಲ್, ಟೀ-ಕಾಫಿ, ಹೋಟೆಲ್ ತಿಂಡಿ-ತಿನಿಸು ಎಲ್ಲವೂ ಗಗನಕ್ಕೆ ಏರುತ್ತಿದೆ. ಬಡವರು ಹೊರಗೆ ಹೋಗಿ ಚಹಾ ಕೂಡಾ ಕುಡಿಯದಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ನೆಮ್ಮದಿಯೇ ಹಾಳಾಗಿದೆ. ಮನೆಹಾಳು ಗ್ಯಾರಂಟಿಗಳಿಗೆ ಕರ್ನಾಟಕ ಬಲಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.