ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಸುಮಾರು ಒಂದು ತಿಂಗಳ ಬಳಿಕ ಬೆಂಗಳೂರಿಗೆ ಮರಳಿದ್ದು, ಬಂಧನವಾಗಿದ್ದಾರೆ.
ವಿದೇಶದಿಂದ ಬರೋಬ್ಬರಿ 34 ದಿನಗಳ ಬಳಿಕ ಬೆಂಗಳೂರಿಗೆ ಮರಳಿದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದೆ. ಪ್ರಜ್ವಲ್ ಅವರಿಗೆ ನೋಟಿಸ್ ಮೇಲೆ ನೋಟಿಸ್ ಜಾರಿ ಮಾಡಿದ್ದರೂ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಅವರು ಲುಕ್‌ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್‌ಗೂ ಜಗ್ಗದೇ ತಲೆಮರೆಸಿಕೊಂಡಿದ್ದರು.
ಇದೀಗ 34 ದಿನಗಳ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಸಂಜೆ 4.05ಕ್ಕೆ ಮ್ಯೂನಿಕ್‌ನಿಂದ ಹೊರಟ ಪ್ರಜ್ವಲ್ ರೇವಣ್ಣ ತಡರಾತ್ರಿ 12.50 ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವ ಸಲುವಾಗಿ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡ ಕಾದು ಕುಳಿತಿತ್ತು. ವಿಮಾನ ನಿಲ್ದಾಣದ ಭದ್ರತಾ ಪಡೆಯಿಂದ ವಿಶೇಷ ಅನುಮತಿ ಪಡೆದು ವಲಸೆ ವಿಭಾಗದ ಬಳಿ ಕಾದು ಕುಳಿತಿದ್ರು. ಪ್ರಜ್ವಲ್ ವಿಮಾನದಿಂದ ಕೆಳಗಿಳಿದು ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಅವರ ಪಾಸ್‌ಪೋರ್ಟ್ ಸೇರಿದಂತೆ ಕೆಲ ದಾಖಲಾತಿಗಳನ್ನು ಪರಿಶೀಲನೆ ನಡೆದಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪ್ರಜ್ವಲ್‌ರನ್ನು ಎಸ್‌ಐಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.