SUDDIKSHANA KANNADA NEWS/ DAVANAGERE/ DATE:29-12-2023
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಜಿಎಂಐಟಿಯಲ್ಲಿ ಮಾಧ್ಯಮವದರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ ವಿಜಯೇಂದ್ರ ಅವರನ್ನು ರಾಷ್ಟ್ರೀಯ ನಾಯಕರು ನೇಮಕ ಮಾಡಿದ್ದಾರೆ. ಈ ಆಯ್ಕೆ ಬಗ್ಗೆ ವಿರೋಧ ಮಾಡೋದು ತಪ್ಪು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡಬಾರದು ಎಂದು ಹೇಳಿದರು.
ಯಾರೇ ಆಗಲಿ ದೂರು, ಸಮಸ್ಯೆ ಇದ್ದರೆ ಕೇಂದ್ರ ನಾಯಕರ ಜೊತೆ ಮಾತನಾಡಲಿ. ವರಿಷ್ಠರಾದ ಅಮಿತ್ ಶಾ, ರಾಜ್ ನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಅವರ ಜೊತೆ ಮಾತನಾಡಲಿ. ಈ ಬಗ್ಗೆ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ಳುತ್ತಾರೆಂದರು.
ಕನ್ನಡ ಪರ ಹೋರಾಟಗಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಟ್ಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಡಿಜೆಹಳ್ಳಿ, ಕೆಜಿ ಹಳ್ಳಿ ದಾಂಧಲೆ ಮಾಡಿದವರ ಕೇಸ್ ವಾಪಸ್ ಪಡೆಯಲು ಹೇಳುವ ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವುದು ಸರಿಯಲ್ಲ. ಕನ್ನಡಪರ ಹೋರಾಟಗಾರರ ಹೋರಾಟ ನ್ಯಾಯಯುತವಾಗಿದೆ. ಆದರೀಗ ಮತ್ತೊಮ್ಮೆ ಹೋರಾಟ ಮಾಡದಂತೆ ಎಲ್ಲ ಸೆಕ್ಷನ್ ಹಾಕಿದ್ದಾರೆ. ಕೆಜಿ ಹಳ್ಳಿ ಗಲಭೆಕೋರರು ಪೊಲೀಸರನ್ನೇ ಕೊಲ್ಲಲು ಹಾಗೂ ಪೊಲೀಸರನ್ನು ಸುಡಲು ಹೊರಟಿದ್ದರು ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಿದೆ. ರಾಜ್ಯ ಸರ್ಕಾರ ಇಂತಹ ಇಬ್ಬಗೆಯ ನೀತಿ ಬಿಟ್ಟು ಹೋರಾಟಗಾರರನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
.ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬುರುಡೆ ಸರ್ಕಾರ ಅಂತ ಆರೋಪ ಮಾಡುತ್ತಿದ್ದರು. ಆದರೆ ಅವರ ಸರ್ಕಾರದಲ್ಲೇ ಕಾಂಗ್ರೆಸ್ ನವರಿಗೆ ಗ್ಯಾಸ್ ಕೊಡೋ ಯೋಗ್ಯತೆ ಇಲ್ಲ. ಅವರಿಗೆ ಮನೆ ಮನೆ ಗ್ಯಾಸ್ ಸಿಗುವಂತೆ ಮಾಡಿದ್ದು ಮೋದಿ ಸರ್ಕಾರ. ಪ್ರಧಾನಿ ಮೋದಿಯವರು 4 ಕೋಟಿ ಮನೆಗಳನ್ನು ಕೊಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಬುರುಡೆ ಸರ್ಕಾರ ಅಂತಾರೆ. ತಮ್ಮ ಸರ್ಕಾರದ ನ್ಯೂನತೆಗಳನ್ನ ಮುಚ್ಚಿ ಹಾಕಲು ಈ ರೀತಿ ವಿಷಯಾಂತರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹರಿಹರ ಶಾಸಕ ಬಿ. ಪಿ. ಹರೀಶ್ ಹಾಜರಿದ್ದರು.