SUDDIKSHANA KANNADA NEWS/ DAVANAGERE/ DATE:23-06-2024
ದಾವಣಗೆರೆ (Davanagere): ಸಂಸತ್ ಭವನದಲ್ಲಿ ಜೂನ್ 24ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ದಾವಣಗೆರೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಸಂಸದೆಯೊಬ್ಬರು ಪ್ರಮಾಣ ವಚನ ಸ್ವೀಕರಿಸುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಇತಿಹಾಸ ಪುಟಗಳಲ್ಲಿ ದಾಖಲಾಗಲಿದೆ. ಇದು ದಾವಣಗೆರೆ ಪಾಲಿಗೆ ಹೆಮ್ಮೆಯ ವಿಚಾರ.
ಚಿತ್ರದುರ್ಗ -ದಾವಣಗೆರೆ ಅವಿಜಭಿತ ಜಿಲ್ಲೆಯಾದಾಗಿನಿಂದಲೂ ಲೋಕಸಭೆಯ ಮಹಿಳಾ ಸದಸ್ಯೆ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದೇ ಮೊದಲ ಬಾರಿಗೆ. ದಾವಣಗೆರೆ ಜಿಲ್ಲೆ ಪ್ರತ್ಯೇಕವಾದ ಬಳಿಕ ಡಾ. ಪ್ರಭಾ
ಮಲ್ಲಿಕಾರ್ಜುನ್ ಅವರೇ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ಸುದ್ದಿಯನ್ನೂ ಓದಿ: BIG BREAKING: ಧಗಧಗಿಸುತ್ತಿದೆ ಬೆಣ್ಣೆನಗರಿ ಬಿಜೆಪಿ ಭಿನ್ನಮತದ ಬೇಗುದಿ: ದಾವಣಗೆರೆ ಬಾಯ್ಸ್ ವಿರುದ್ಧ ಹೈಕಮಾಂಡ್ ಗೆ ಕೊಡ್ತಾರಂತೆ ಕಂಪ್ಲೆಂಟ್..!
ಇಷ್ಟು ದೀರ್ಘಕಾಲದ ಇತಿಹಾಸ ಹೊಂದಿರುವ ರಾಜಕಾರಣದಲ್ಲಿ ಮಹಿಳಾ ಸಂಸದೆಯಾಗಿ ದಾವಣಗೆರೆಯ ಯಾರೂ ಆಗಿರಲಿಲ್ಲ. ಆದ್ರೆ, ಈಗ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತವೂ ಫಿಕ್ಸ್ ಆಗಿದೆ.
ದಾವಣಗೆರೆ ಮೊದಲ ಮಹಿಳಾ ಎಂಪಿ:
ಜೂನ್ 24ರ ನಾಳೆ ಸಂಜೆ 4ಗಂಟೆಯಿಂದ 5 ಗಂಟೆಯೊಳಗೆ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ ಇತಿಹಾಸದಲ್ಲಿ ದಾವಣಗೆರೆಯ ಮಹಿಳೆಯೊಬ್ಬರ ಹೆಸರು ದಾಖಲಾಗುತ್ತಿರುವುದು ವಿಶೇಷ.
ಛಿದ್ರವಾಯ್ತು ದಾವಣಗೆರೆ ಬಿಜೆಪಿ ಭದ್ರಕೋಟೆ:
ದಾವಣಗೆರೆ ಲೋಕಸಭೆ ಬಿಜೆಪಿ ಭದ್ರಕೋಟೆಯನ್ನು ಛಿದ್ರಿಸಿ ಕಳೆದ 26 ವರ್ಷಗಳಿಂದ ಪಾರುಪತ್ಯಕ್ಕೆ ಬ್ರೇಕ್ ಹಾಕಿ ಸಂಸದೆಯಾಗಿ ಆಯ್ಕೆಯಾಗಿದ್ದರು. ದಾವಣಗೆರೆ ಲೋಕಸಭೆ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ
ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪ್ರಭಾ ಮಲ್ಲಿಕಾರ್ಜುನ್ ಅವರು ಪದಗ್ರಹಣ ಮಾಡುವ ಮೂಲಕ ಮೊದಲ ಮಹಿಳೆ ಎಂಬ ಕೀರ್ತಿಯನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.
ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಜಿ. ಎಂ. ಸಿದ್ದೇಶ್ವರ್ ಸತತ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಿದ್ದರು. ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಗಾಯಿತ್ರಿ ಸಿದ್ದೇಶ್ವರ ಅವರನ್ನು ಸೋಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಸೋಲಿಸುವ ಮೂಲಕ ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆ ಬೇಧಿಸಿದ ಕೀರ್ತಿಯೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ.
ಮೊದಲ ಬಾರಿಗೆ ಮಹಿಳೆ ಗೆದ್ದ ಇತಿಹಾಸ:
ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಎಲ್ಲರೂ ಹಗಲಿರುಳು ಶ್ರಮಿಸಿದ್ದರು. ವಿಶೇಷವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಒಳಗೊಂಡಂತೆ ಶಾಸಕರು, ಮುಖಂಡರು, ಕಾರ್ಯಕರ್ತರು ಗೆಲುವಿಗೆ ಕಾರಣಕರ್ತರಾಗಿದ್ದರು. ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಸಭೆ ನಡೆಸಿ ಗಾಯಿತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಕೈ ಬಲಪಡಿಸುವಂತೆ ಮನವಿ ಮಾಡಿದ್ದರು. ಮೋದಿ ಅಲೆಯ ನಡುವೆಯೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವಿನ ನಗೆ ಬೀರಿದ್ದು ಈಗ ಇತಿಹಾಸ.
2004, 2009, 2014 ರ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಸೋಲಿಸಿದ್ದ ಸಿದ್ದೇಶ್ವರ್, 2019ರಲ್ಲಿ ಮಂಜಪ್ಪರನ್ನು ಸೋಲಿಸುವ ಮೂಲಕ
ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ಕು ಬಾರಿ ಗೆದ್ದ ದಾಖಲೆಯನ್ನು ಬರೆದಿದ್ದರು. ಚನ್ನಯ್ಯ ಒಡೆಯರ್ ಬಳಿಕ ಇಷ್ಟು ಬಾರಿ ಗೆದ್ದ ಮೊದಲಿಗರು ಎಂಬ ಕೀರ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಆದ್ರೆ, ಈ ಬಾರಿ ಪತ್ನಿ ಕಣಕ್ಕಿಳಿಸಿದ್ದ ಸಿದ್ದೇಶ್ವರ ಅವರ ಕುಟುಂಬಕ್ಕೆ ಸೋಲುಂಟಾಯಿತು. ಸೋಲಿನ ರುಚಿ ತೋರಿಸಿದ್ದು ಪ್ರಭಾ ಮಲ್ಲಿಕಾರ್ಜುನ್ ಅವರು.
ಜಿಲ್ಲೆಯ ಜನರ ನಾಡಿಮಿಡಿತ ಅರಿತಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಚುನಾವಣೆಗೆ ಮುನ್ನ ಮತ್ತು ನಂತರ ಜನರ ಸಂಪರ್ಕ, ಒಡನಾಟ ಕೆಲಸ ಮಾಡಿದೆ. ವಿಜಯಲಕ್ಷ್ಮೀ ಕಾಂಗ್ರೆಸ್ ಗೆ ಈ ಬಾರಿ ಒಲಿದಿದ್ದಳು. ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ ಗಾಂದಿ, ಸಿಎಂ ಸಿದ್ದರಾಮಯ್ಯ ಅವರ ಪ್ರಚಾರ ವರ್ಕ್ ಔಟ್ ಆಗಿತ್ತು. ಮೋದಿ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಚ್ಚಿಕೊಂಡು ಹೋಗಲಿಲ್ಲ. ಕುರುಬ ಸಮುದಾಯ, ಶಾಮನೂರು ಕುಟುಂಬದ ಬಲ, ಅಹಿಂದ ವರ್ಗದ ಶಕ್ತಿ ಸಿಗುತ್ತೆ ಎಂದುಕೊಂಡಿದ್ದ ಪ್ರಭಾ ಮಲ್ಲಿಕಾರ್ಜುನ್ ರಿಗೆ ಫಲ ಕೊಟ್ಟಿತ್ತು. ಜೊತೆಗೆ ಲಿಂಗಾಯತ ಸಮುದಾಯವೂ ಕೈ ಹಿಡಿದಿತ್ತು. ಇದೆಲ್ಲದರ ಪರಿಣಾಮ ಪ್ರಭಾ ಮಲ್ಲಿಕಾರ್ಜುನ್ ಅವರು ಗೆದ್ದಿದ್ದರು.
ಪ್ರಭಾ ಮಲ್ಲಿಕಾರ್ಜುನ್ ಪರಿಚಯ:
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಕೃಷಿ ಹಿನ್ನೆಲೆಯ ಗೌಡ್ರು ಕುಟುಂಬದಲ್ಲಿ 1976ರ ಮಾರ್ಚ್ 15ರಂದು ಗಿರಿಜಮ್ಮ ಮತ್ತು ದಿವಂಗತ ಕೆ.ಜಿ ಪರಮೇಶ್ವರಪ್ಪರವರ ಪುತ್ರಿಯಾಗಿ ಜನಿಸಿದರು. ಹರಿಹರದ ಕುಮಾರ ಪಟ್ಟಣಂ ನ ಫಾಲಿ ಫೈಬರ್ ಸಿಬಿಎಸ್ಇ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣವನ್ನು ಮುಗಿಸಿ ನಂತರ ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನದಲ್ಲಿ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ.
ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ವಿವಾಹದ ನಂತರ ಅವರ ಕುಟುಂಬದ ಸಾಮಾಜಿಕ, ವ್ಯಾಪಾರ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಬೆಂಬಲವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದಾರೆ.
ದಾವಣಗೆರೆ ಭಾಗ್ಯದೇವತೆ ಡಾ. ಪ್ರಭಾ ಮಲ್ಲಿಕಾರ್ಜುನ್. ದೊಡ್ಮನೆಯ ಸರಳತೆಯ ಸಾಕಾರಮೂರ್ತಿ. ಬಡವರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲಾ ವರ್ಗದವರ ಪಾಲಿನ ಆಶಾಕಿರಣ. ರಾಷ್ಟ್ರ ರಾಜಕಾರಣಕ್ಕೆ ಧುಮುಕಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈಗ ಚಿರಪರಿಚಿತ ಹೆಸರು.
ಕಳೆದ 26 ವರ್ಷಗಳಿಂದಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಶಾಮನೂರು ಶಿವಶಂಕರಪ್ಪರು ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ರ ಚುನಾವಣೆಯಲ್ಲಿ ಸಕ್ರಿಯವಾಗಿ ಓಡಾಡಿದವರು, ಶ್ರಮಿಸಿದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾವ ಹಾಗೂ ಪತಿ ಗೆಲುವಿಗೆ ಟೊಂಕಕಟ್ಟಿ ನಿಂತವರು. ಮನೆ ಮನೆಗೆ ಭೇಟಿ ನೀಡಿ ಮತದಾರರ ಮನಗೆದ್ದವರು. ಪ್ರಭಾ ಮಲ್ಲಿಕಾರ್ಜುನ್ ಅವರೆಂದರೆ ಅಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ, ನೆರವು ನೀಡುವ, ಕಷ್ಟಕ್ಕೆ ಮರಗುವ, ಆರ್ಥಿಕವಾಗಿ ಸಹಾಯ ಮಾಡುವ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುವ ನಾಯಕಿ.