SUDDIKSHANA KANNADA NEWS/ DAVANAGERE/ DATE:18-03-2024
ದಾವಣಗೆರೆ: “ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ, ಕುಡಿಯುವ ನೀರಿಗೆ ಸಾರ್ವಜನಿಕರು ಪರಿತಪಿಸುತ್ತಿದ್ದಾರೆ”. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಎಸ್.ಎಸ್ ಕೇರ್ ಟ್ರಸ್ಟ್ ನೂತನ ಯೋಜನೆಯೊಂದಕ್ಕೆ ಇಂದು ಚಾಲನೆ ನೀಡಿದ್ದು ಅದುವೇ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ನೀಡುವ ಯೋಜನೆ.
ಎಸ್.ಎಸ್ ಕೇರ್ ಟ್ರಸ್ಟ್ ಇಲ್ಲಿಯವರೆಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಹೆರಿಗೆ, ಮಕ್ಕಳ ಆರೈಕೆ, ಡಯಾಲಿಸಿಸ್ ಮತ್ತು ಕಣ್ಣಿನ ಪೊರೆ
ಶಸ್ತ್ರಚಿಕಿತ್ಸೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಮನೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ನೀರಿನ ಬವಣೆಯಿಂದ ಪರಿತಪ್ಪಿಸುತ್ತಿದ್ದ ಸಾರ್ವಜನಿಕರಿಗಾಗಿ 5 ಟ್ಯಾಂಕರ್ ಗಳ ಮೂಲಕ ನೀರನ್ನು ಉಚಿತವಾಗಿ ನೀಡುವ ಮೂಲಕ ತನ್ನ ಜನಪರ ಯೋಜನೆಯನ್ನು ಮುಂದುವರಿಸುತ್ತಿದೆ.
ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿಯಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಇಂದು ಸಂಜೆ ಟ್ಯಾಂಕರ್ ಗಳಿಗೆ ಪೂಜೆ ಸಲ್ಲಿಸುವ ಮೂಲಕ ಉಚಿತ ನೀರು ನೀಡುವ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸಂಸ್ಥಾಪಕ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಪುತ್ರಿ ಡಾ. ಮಂಜುಳಾ ಶಿವಶಂಕರ್, ಮೊಮ್ಮಗ ಸಮರ್ಥ್ ಶಾಮನೂರು, ಗಿರಿಜಮ್ಮ ಸೇರಿದಂತೆ ಕುಟುಂಬ ವರ್ಗದವರು ಉಪಸ್ಥಿತರಿದ್ದರು.