SUDDIKSHANA KANNADA NEWS| DAVANAGERE
ದಾವಣಗೆರೆ: ದಾವಣಗೆರೆ (DAVANAGERE) ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ರ ಪರ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಎಂಸಿಸಿ ಬಿ ಬ್ಲಾಕ್ ನಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಎಂ.ಸಿ.ಸಿ. ‘ಬಿ’ ಬ್ಲಾಕ್ ನಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ 38ನೇ ವಾರ್ಡ್ ಸದಸ್ಯರಾದ ಗಡಿಗುಡಾಳ್ ಮಂಜುನಾಥ್ ರ ನೇತೃತ್ವದಲ್ಲಿ ಬಡಾವಣೆಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ ಐದು ವರ್ಷಗಳಲ್ಲಿ ಆಗಿರುವುದು ಅಭಿವೃದ್ಧಿ ಕಡಿಮೆ. ಮಲ್ಲಿಕಾರ್ಜುನ್ ಅವರು ಶಾಸಕರಾಗಿದ್ದಾಗ, ಸಚಿವರಾಗಿದ್ದಾಗ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಪರ್ವ ಮಾಡಿದರು. ಇಂದಿಗೂ ಮಲ್ಲಿಕಾರ್ಜುನ್ ಅವರು ಮಾಡಿರುವ ಕಾರ್ಯಗಳು ಜನರ ಬಾಯಿ ಮಾತಿನಲ್ಲಿ ಹಾಗೂ ಮನದಲ್ಲಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪಿ. ಬಿ. ರಸ್ತೆ ಅಗಲೀಕರಣ, ಕುಂದುವಾಡ ಕೆರೆ, ಏಷ್ಯಾ ಖಂಡದ ಎರಡನೇ ಅತಿ ದೊಡ್ಡದಾದ ಗಾಜಿನ ಮನೆ, ನೀರಾವರಿ, ಶಿಕ್ಷಣ, ಮೂಲಭೂತ ಸೌಕರ್ಯಕ್ಕೆ ಆದ್ಯತೆ, ಹದಿನಾರು ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ಮನೆ ಕೊಟ್ಟ ಖ್ಯಾತಿ ಮಲ್ಲಿಕಾರ್ಜುನ್ ಅವರಿಗಿದೆ ಎಂದು ಹೇಳಿದರು.
ದಾವಣಗೆರೆ (DAVANAGERE) ಮತ್ತಷ್ಟು ಅಭಿವೃದ್ಧಿ ಆಗಬೇಕಾದರೆ ದೂರದೃಷ್ಟಿತ್ವದ, ಪ್ರಾಮಾಣಿಕ ಆಡಳಿತ ಬೇಕು. ಇದಕ್ಕಾಗಿ ಮಲ್ಲಿಕಾರ್ಜುನ್ ಅವರಿಗೆ ಮತ ಚಲಾಯಿಸಿ ಗೆಲ್ಲಿಸಿ. ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ ಚಾಲನೆ ಸಿಗುವ ಜೊತೆಗೆ ವೇಗವಾಗಿ ಪೂರ್ಣಗೊಳ್ಳುತ್ತವೆ. ನೀವು ಆಶೀರ್ವದಿಸಿದರೆ ಅಭಿವೃದ್ಧಿ ಪರ್ವ ಮತ್ತೆ ಆರಂಭವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.