SUDDIKSHANA KANNADA NEWS/ DAVANAGERE/ DATE_06-07_2025
ದಾವಣಗೆರೆ (DAVANAGERE): ವರದಕ್ಷಿಣೆ ಆಸೆಗಾಗಿ ಪತ್ನಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ ಪೊಲೀಸ್ (POLICE) ಪೇದೆಯೊಬ್ಬ ಬಂಧಿಸಲ್ಪಟ್ಟಿದ್ದಾನೆ. ಚನ್ನಗಿರಿ ತಾಲೂಕಿನ ಸೋಮಲಾಪುರದ ಶಿವು ಬಂಧಿತ ಪೊಲೀಸ್ ಸಿಬ್ಬಂದಿ.
ಘಟನೆ ಹಿನ್ನೆಲೆ ಏನು..?
ದಾವಣಗೆರೆ ಜಿಲ್ಲೆ ಅಣಜಿ ಗ್ರಾಮದ 24 ವರ್ಷದ ವಿದ್ಯಾಳ ಜೊತೆ ಚನ್ನಗಿರಿ ತಾಲ್ಲೂಕಿನ ಸೋಮಲಾಪುರದ ಪೊಲೀಸ್ ಪೇದೆ ಶಿವು ಜೊತೆ ಮದುವೆ ಆಗಿತ್ತು. ಆರಂಭದಲ್ಲಿ ಜೋಡಿ ಚೆನ್ನಾಗಿಯೇ ಇತ್ತು. ನವಬದುಕಿಗೆ ಕಾಲಿಟ್ಟು ಆನಂದವಾಗಿದ್ದ ಈ ಜೋಡಿಯಲ್ಲಿ ಬಿರುಕು ಮೂಡಿದೆ.

READ ALSO THIS STORY: ಕೃಷಿ ಸಾಲ ಪಡೆಯುವುದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕು? ಏನೆಲ್ಲಾ ಪ್ರಯೋಜನಗಳಿವೆ? ಸಂಪೂರ್ಣ ಮಾಹಿತಿ
ಹಾಸನ ಜಿಲ್ಲೆಯ ಅರಸಿಕೆರೆ ರೈಲ್ವೇ ಟ್ರಕ್ ಬಳಿ ವಿದ್ಯಾ ಮೃತದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಇದನ್ನು ನೋಡಿದ ವಿದ್ಯಾಳ ಪೋಷಕರಿಗೆ ಬರಸಿಡಿಲು ಬಡಿದಂತಾಗಿತ್ತು. ಈ ಸಾವಿಗೆ ಪತಿ ಶಿವು ಕುಟುಂಬದವರೇ ಕಾರಣ. ಕೂಡಲೇ ಬಂಧಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸೋಮಲಾಪುರದ ಶಿವು ಮನೆ ಮುಂದೆ ವಿದ್ಯಾಳ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲ, ಬಂಧಿಸುವವರೆಗೆ ಯಾವುದೇ ಕಾರಣಕ್ಕೂ ಶವ ಮೇಲಕ್ಕೆತ್ತುವುದಿಲ್ಲ ಎಂದು ಪಟ್ಟು ಹಿಡಿದರು. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ವಿದ್ಯಾಳ ಕುಟುಂಬದವರ ಆರೋಪ.
ಬೆಂಗಳೂರಲ್ಲಿ ವಾಸ, ಅರಸಿಕೆರೆಯಲ್ಲಿ ಮೃತದೇಹ:
ಕಳೆದ ಆರು ತಿಂಗಳ ಹಿಂದೆಯಷ್ಟೇ ಮದುವೆ ಯಾಗಿದ್ದ ನವವಿವಾಹಿತೆಯದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಶಂಕೆ ಆಕೆ ಪೋಷಕರದ್ದು. ಮೃತ ಮಹಿಳೆಯ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಲು ಬಿಡದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ತಿಂಗಳು ಜೂನ್ 30ರಂದು ಇದ್ದಕ್ಕಿದ್ದಂತೆ ವಿದ್ಯಾ ಕಾಣೆಯಾಗಿದ್ದಾಳೆ ಎಂದು ಪತಿ ಶಿವು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದೇ ದಿನ ಅಂದರೇ ಜೂನ್ 30ರಂದು ಹಾಸನ ಜಿಲ್ಲೆಯ ಅರಸೀಕೆರೆ ರೈಲ್ವೇ ಟ್ರಕ್ ಬಳಿ ಪತ್ನಿ ವಿದ್ಯಾ ಶವ ರಕ್ತಸಿಕ್ತವಾಗಿ ಪತ್ತೆಯಾಗಿತ್ತು. ರೈಲಿಗೆ ಸಿಲುಕಿ ಗಾಯಳಾಗಿದ್ದ ವಿದ್ಯಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಳು, ಮೃತಳ ಸಂಬಂಧಿಕರು ಇದು ಸಹಜ ಸಾವಲ್ಲ, ಪತಿ ಶಿವು ಮತ್ತು ಕುಟುಂಬದವರು ಸೇರಿ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪತಿ ಶಿವು, ಗಾಯತ್ರಮ್ಮ,ಗುಡ್ಡಪ್ಪ, ಶಿಲ್ಪಾ ಎಂಬುವರ ವಿರುದ್ಧ ದೂರು ದಾಖಲಿಸಲಾಗಿದೆ. ಅಂತ್ಯಕ್ರಿಯೆ ನಡೆಸುವ ಮೊದಲು ಪೊಲೀಸರು ಶಿವು ಹಾಗೂ ಆತನ ಕುಟುಂಬಸ್ಥರನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದರು. ಅಲ್ಲದೆ ಉಗ್ರ ಶಿಕ್ಷೆ ನೀಡುವಂತೆ ಪೋಲಿಸರಿಗೆ ಒತ್ತಾಯಿಸಿದ್ದರು. ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದ್ದು, ಈಗಾಗಲೇ ಆರೋಪಿ ಶಿವು ಬಂಧಿಸಲಾಗಿದೆ ಎಂದು ಪೋಲಿಸರು ಮೃತ ವಿದ್ಯಾ ಕುಟುಂಬಸ್ಥರ ಮನವೊಲಿಸಿದ ನಂತರ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಟ್ಟರು.
ಬದುಕಿ ಬಾಳಬೇಕಿದ್ದ ವಿದ್ಯಾಳ ಬದುಕು ಮುಗಿದಿದೆ. ಆದ್ರೆ, ಸಮಾಜಕ್ಕೆ ಮಾದರಿಯಾಗಬೇಕಿದ್ದ ಪೊಲೀಸ್ ಪೇದೆ ಜೈಲು ಕಂಬಿ ಸೇರಿದ್ದಾನೆ. ವಿದ್ಯಾಳ ಪೋಷಕರು ಆರೋಪ ಮಾಡಿದ್ದು ನಿಜವೇ ಆಗಿದ್ದರೆ, ಇಂದಿನ ಕಾಲದಲ್ಲಿ ವರದಕ್ಷಿಣೆ
ಆಸೆಗಾಗಿ ವಿದ್ಯಾಳ ಬದುಕು ಕೊನೆಗಾಣಿಸಿದ್ದೇ ಆದಲ್ಲಿ ಕಠಿಣ ಶಿಕ್ಷೆ ಜೊತೆಗೆ ಮತ್ತೆ ಯಾವತ್ತೂ ಆರೋಪಿಗಳು ಹೊರಗೆ ಬರಲೇಬಾರದು. ಜೈಲಿನಲ್ಲಿಯೇ ಸಾಯಬೇಕು ಎಂದು ಮೃತಳ ಪೋಷಕರು, ಸಂಬಂಧಿಕರು ಆಗ್ರಹಿಸಿದ್ದಾರೆ.