ವಾಷಿಂಗ್ಟನ್ / ಜೈಪುರ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಫ್ಲೋರಿಡಾದ 22ನೇ ಕ್ಷೇತ್ರದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಭಾರತೀಯ ಮೂಲದ ಪಿಯಾ ದಾಂಡಿಯಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಜಸ್ಥಾನದ ಜೈಪುರ ಮೂಲದವರಾಗಿದ್ದು ಅಮೆರಿಕದಲ್ಲಿ ನೆಲೆಸಿರುವ ಇವರ ಈ ರಾಜಕೀಯ ಯಶಸ್ಸು ಇಡೀ ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರ ಸೋದರ ಸಂಬಂಧಿ ಧ್ರುವ್ ದಾಂಡಿಯಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಮರಿಸಿದ್ದಾರೆ.
39 ವರ್ಷದ ಪಿಯಾ ದಾಂಡಿಯಾ ಅವರು ಮಾಜಿ ಶಿಕ್ಷಕಿ ಮತ್ತು ಪ್ರೌಢಶಾಲೆಯ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿದವರು. ವೈದ್ಯರ ಕುಟುಂಬದಿಂದ ಬಂದಿದ್ದರೂ, ಬಾಲ್ಯದಿಂದಲೂ ರಾಜಕೀಯದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದ ಅವರು, ಶ್ರಮದ ಮೂಲಕ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ರಾಜಕೀಯ ಪ್ರವೇಶಕ್ಕೂ ಮುನ್ನ ಭಾರತಕ್ಕೆ ಬಂದು ಕೊಳೆಗೇರಿ ಪ್ರದೇಶದ ಮಕ್ಕಳಿಗೂ ಬೋಧನೆ ಮಾಡಿದ್ದ ಅವರು, ನ್ಯೂಯಾರ್ಕ್ನ ಹಾರ್ಲೆಮ್ನಲ್ಲಿ ಹಿಂದುಳಿದ ಆಫ್ರಿಕನ್-ಅಮೆರಿಕನ್ ವಿದ್ಯಾರ್ಥಿಗಳಿಗಾಗಿ ಶಾಲೆಯೊಂದನ್ನು ಸ್ಥಾಪಿಸಿ ಯಶಸ್ವಿ ಪ್ರಾಚಾರ್ಯೆಯಾಗಿಯೂ ಕೆಲಸ ಮಾಡಿದ್ದರು. ಪ್ರಸ್ತುತ ಫ್ಲೋರಿಡಾದಲ್ಲಿ ಶೇ. 51ರಷ್ಟು ಮತಗಳನ್ನು ಪಡೆದು ಅಮೆರಿಕದ ನೂತನ ಭಾರತೀಯ-ಅಮೆರಿಕನ್ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಬಾಲ್ಯದ ಕನಸು: ಪಿಯಾ ದಾಂಡಿಯಾ ತಮ್ಮ 13ನೇ ವಯಸ್ಸಿನಲ್ಲೇ ತಂದೆಯ ಬಳಿ ತಾನು ರಾಜಕಾರಣಿಯಾಗುವುದಾಗಿ ಮತ್ತು ಅಮೆರಿಕದ ಅಧ್ಯಕ್ಷೆಯಾಗುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದರು.
ಶಿಕ್ಷಣ ಹಾಗೂ ಸಮಾಜಮುಖಿ ಸೇವೆ: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಾಯಕತ್ವ ಕೌಶಲ್ಯ ಬೆಳೆಸಿಕೊಂಡ ಅವರು, ಭಾರತದಲ್ಲಿ ಕೊಳೆಗೇರಿ ಮಕ್ಕಳಿಗೂ ಶಿಕ್ಷಣ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.
ಸಕಾರಾತ್ಮಕ ರಾಜಕೀಯ: ಎದುರಾಳಿಗಳು ಎಷ್ಟೇ ಟೀಕೆಗಳನ್ನು ಮಾಡಿದರೂ ಎಂದಿಗೂ ನಕಾರಾತ್ಮಕ ರಾಜಕೀಯಕ್ಕೆ ಅವಕಾಶ ನೀಡದೆ, ಸಂಪೂರ್ಣ ಸಕಾರಾತ್ಮಕ ಚಿಂತನೆ ಹಾಗೂ ರಚನಾತ್ಮಕ ಸಮಾಜಸೇವೆಯೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಕುಟುಂಬದ ಮೂಲ ಬೇರುಗಳನ್ನು ಮರೆಯದ ಪಿಯಾ ಅವರ ಈ ಮಹಾನ್ ಸಾಧನೆ ಅಮೆರಿಕದ ರಾಜಕೀಯ ವಲಯದಲ್ಲಿ ‘ಸಮೋಸಾ ಕಾಕಸ್’ (Samosa Caucus) ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆರಿಕ-ಇರಾನ್ ಯುದ್ಧದಿಂದಾಗಿ ಏರಿಕೆಯಾಗಿರುವ ಹಣದುಬ್ಬರ ನಿಯಂತ್ರಣವೇ ತಮ್ಮ ಪ್ರಮುಖ ಆದ್ಯತೆಯಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.





Leave a comment