SUDDIKSHANA KANNADA NEWS/ DAVANAGERE/ DATE:21-08-2023
ದಾವಣಗೆರೆ: ಘೀಳಿಟ್ಟು ಬರುತ್ತಿವೆ ಲಕ್ಷಾಂತರ ಗಿಳಿಗಳ (Parrot) ಹಿಂಡು. ರೈತರು ಹೇಳುವ ಪ್ರಕಾರ ಪ್ರತಿನಿತ್ಯ ಎರಡೂವರೆ ಲಕ್ಷ ಗಿಳಿಗಳು ಬರುತ್ತವೆ. ಅವುಗಳ ಕಾಟದಿಂದ ಸಾಕು ಸಾಕಾಗಿ ಹೋಗಿದ್ದಾರೆ. ಈ ಪ್ರದೇಶಗಳಿಗೆ ಗಿಳಿಗಳು (Parrots) ಬರುವುದು ಯಾಕೆ ಎಂಬ ಪ್ರಶ್ನೆಯು ಪ್ರತಿಯೊಬ್ಬರನ್ನೂ ಕಾಡುತ್ತದೆ. ಇಷ್ಟೊಂದು ಗಿಳಿಗಳು ಘೀಳಿಡುತ್ತಾ ಬಂದು ಮೆಕ್ಕೆಜೋಳ ನಾಶಪಡಿಸುತ್ತಿವೆ. ಇವುಗಳನ್ನು ಓಡಿಸಲು ರೈತರು ಪಡುತ್ತಿರುವ ಪರಿಪಾಟಲು ಅಷ್ಟಿಷ್ಟಲ್ಲ.
ಮೊದಲೇ ಬೆಳೆ ಇಲ್ಲ. ಮಳೆ ಬಾರದೇ ಬೆಳೆ ಒಣಗಿ ಹೋಗಿತ್ತು. ಮತ್ತೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ರೈತರು ಬೆಳೆಯು ಚೆನ್ನಾಗಿ ಬರಬಹುದು ಎಂದುಕೊಂಡಿದ್ದರು. ಜುಲೈ ತಿಂಗಳಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದ ಪರಿಣಾಮ ಶೇಕಡಾ 50ರಷ್ಟು ಬೆಳೆ ನಷ್ಟವಾಗಿದೆ. ಈಗ ಗಿಳಿಗಳ (Parrots) ಹಿಂಡು ಬಂದು ಜೋಳ ತಿನ್ನುತ್ತಿವೆ. ಎಲ್ಲಿ ಹೋಗಿ ನೋಡಿದರೂ ಮೆಕ್ಕೆಜೋಳ ತೆನೆ ಕಾಣುತ್ತದೆ. ಆದ್ರೆ, ಮೆಕ್ಕೆಜೋಳ ಮಾತ್ರ ಕಾಣ ಸಿಗುವುದೇ ಇಲ್ಲ. ಅಲ್ಲೇನಿದ್ದರೂ ಖಾಲಿ ಖಾಲಿಯಾಗಿರುವ ದಿಂಡು ಕಣ್ಣಿಗೆ ಬೀಳುತ್ತವೆ.
ಎಲ್ಲಿಗೆ ಬರುತ್ತಿವೆ ಲಕ್ಷಾಂತರ ಗಿಳಿಗಳು (Parrots) :
ಒಂದು ಕಡೆ ಮಳೆ ಅಭಾವದ ನಡುವೆಯೂ ರೈತರು ಸಾಲ ಸೋಲ ಮಾಡಿ ಪಾಪ್ ಕಾರ್ನ್ ಮೆಕ್ಕೆಜೋಳ ಬೆಳೆ ಬೆಳೆಯುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಗಿಳಿಗಳಿಗೆ (Parrots) ಆಹಾರ ಸಿಗದೇ ರೈತರ ಜಮೀನುಗಳಿಗೆ ಹಿಂಡು ಹಿಂಡಾಗಿ ಲಗ್ಗೆ ಇಟ್ಟು ಸಂಪೂರ್ಣ ಬೆಳೆಗಳನ್ನು ನಾಶ ಮಾಡುತ್ತಿವೆ.
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಪರಿಸ್ಥಿತಿ ತಲೆದೋರಿದೆ. ಬೇರೆ ಕಡೆಗಳಲ್ಲಿ ಮೆಕ್ಕೆಜೋಳ ಬರುವುದಕ್ಕಿಂತ ಮುಂಚೆ ಇಲ್ಲಿ ಬೆಳೆ ಬರುವುದರಿಂದ ಗಿಳಿಗಳು (Parrots) ಇಲ್ಲಿಗೆ ಲಗ್ಗೆ ಇಡುತ್ತವೆ. ಆಹಾರ ಅರಸಿ ಬರುವ ಗಿಳಿಗಳ (Parrots) ಹಿಂಡುಗಳ ಕಾಟಕ್ಕೆ ರೈತರು ಸಾಕು ಸಾಕಾಗಿ ಹೋಗಿದ್ದಾರೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತಲ್ಲಿ ಬರುವ ಗಿಳಿಗಳ ಹಿಂಡು ಪಾಪ್ ಕಾರ್ನ್ ಮೆಕ್ಕೆಜೋಳ ತಿಂದು ಹೋಗುತ್ತಿವೆ. ರೈತರು ಇವುಗಳ ಓಡಿಸಲು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ.
ಈ ವರ್ಷವೇ ಹೆಚ್ಚು:
ಕಳೆದ ವರ್ಷಗಳಲ್ಲಿ ಗಿಳಿಗಳ (Parrots) ಹಿಂಡು ಬರುತ್ತಿದ್ದವು. ಆದ್ರೆ, ಇಷ್ಟೊಂದು ಪ್ರಮಾಣದಲ್ಲಿ ಬಂದು ಪಾಪ್ ಕಾರ್ನ್ ಮೆಕ್ಕೆಜೋಳ ತಿಂದು ಹೋಗುತ್ತಿದ್ದವು. ಆದ್ರೆ, ಈ ಬಾರಿಯಂತೂ ಬರುತ್ತಿರುವ ಗಿಳಿಗಳ (Parrots) ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ.
ಈ ಸುದ್ದಿಯನ್ನೂ ಓದಿ:
SUSPECT DEATH BIG EXCLUSIVE STORY: ಸಾವಿನ ಸುತ್ತ ಅನುಮಾನದ ಹುತ್ತ: ಅಮೆರಿಕಾದಲ್ಲಿ ಮೂವರು ಸಾವಿನ ಸುತ್ತ ಗಿರಕಿ ಹೊಡೆಯುತ್ತಿರುವ ಮೂರು ಕಾರಣಗಳು…!
ಜಿಲ್ಲೆಯ ಜಗಳೂರು ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದ್ರೆ, ಚನ್ನಗಿರಿ ತಾಲೂಕಿನ ಸಂತೆಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೇರೆ ಕಡೆಗಳಿಂತ ಬೇಗನೇ ಮೆಕ್ಕೆಜೋಳ ಬಿತ್ತನೆ ಮಾಡಲಾಗುತ್ತದೆ. ಫಸಲೂ ಸಹ ಬೇಗನೇ ಬರುತ್ತದೆ. ಈ ಕಾರಣಕ್ಕಾಗಿ ಆಹಾರ ಅರಸಿ ಗಿಳಿಗಳು ಬರುತ್ತಿವೆ.
ರೈತರು ಉಳೀಬೇಕು, ಗಿಳಿಗಳು (Parrots) ಬದುಕಬೇಕು:
ಇನ್ನು ರೈತರಿಗೆ ಗಿಳಿಗಳು ಉಳಿಯಬೇಕು ಎಂಬ ಅಪೇಕ್ಷೆ ಇದೆ. ಆದ್ರೆ, ಸಾಲ ಮಾಡಿ ಬೆಳೆದ ಬೆಳೆ ಗಿಳಿಗಳ ಪಾಲಾಗುತ್ತಿರುವುದು ಬೇಸರ ತರಿಸಿದೆ. ಅರಣ್ಯ ಇಲಾಖೆ, ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿಲ್ಲ. ರೈತರಿಗೆ ಗಿಳಿಗಳನ್ನು ಸಾಯಿಸಲು ಮನಸ್ಸು ಆಗುತ್ತಿಲ್ಲ. ಇತ್ತ ಬೆಳೆ ಹಾಳಾಗುತ್ತಿರುವುದನ್ನು ನೋಡಿ ತಡೆದುಕೊಳ್ಳಲೂ ಆಗುತ್ತಿಲ್ಲ. ಅಡಕತ್ತರಿಯಲ್ಲಿ ಸಿಲುಕಿ ಹಾಕಿಕೊಂಡಿರುವ ರೈತರು ನಿತ್ಯವೂ ಯಾತನೆ ಅನುಭವಿಸುವಂತಾಗಿದೆ.
ಗಿಳಿಗಳ (Parrots) ಹಿಂಡು ತಡೆಗೆ ಪ್ಲ್ಯಾನ್ ಏನು…?
ರೈತರು ಸಹ ಗಿಳಿಗಳ (Parrots) ಹಿಂಡು ಹಿಮ್ಮೆಟ್ಟಿಸಲು ಪ್ಲ್ಯಾನ್ ಅನ್ನು ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಗೊಂಬೆಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಾರೆ. ಜೊತೆಗೆ ತರಕಾರಿ ಮಾರಾಟ ಮಾಡಲು ತಳ್ಳು ಗಾಡಿಗಳಲ್ಲಿ ಬರುವವರು ಉಪಯೋಗಿಸುವ ಧ್ವನಿವರ್ಧಕ ಬಳಕೆ ಮಾಡುತ್ತಿದ್ದಾರೆ. ಪಟಾಕಿ ಸಿಡಿಸುತ್ತಾರೆ, ಕೂಗಿ ಓಡಿಸುತ್ತಾರೆ. ಆದ್ರೂ ಗಿಳಿಗಳ (Parrots) ಕಾಟ ನಿಂತಿಲ್ಲ. ಮನೆ ಮಂದಿಯೆಲ್ಲಾ ಬೇರೆ ಕೆಲಸ ಬಿಟ್ಟು ಮೆಕ್ಕೆಜೋಳ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ.
ಸಾವಿರಾರು ಎಕರೆ ನಾಶ:
ಇನ್ನು ಗಿಳಿಗಳು (Parrots) ಇದುವರೆಗೆ ಅಂದಾಜಿನ ಪ್ರಕಾರ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶಪಡಿಸಿವೆ. ದಿಂಡುಗಳು ಮಾತ್ರ ಕಾಣ ಸಿಗುತ್ತಿವೆ. ಮೆಕ್ಕೆಜೋಳ ಬೆಳೆದ ರೈತರ ಬದುಕು ಈ ಬಾರಿ ಮೂರಾಬಟ್ಟೆಯಾಗಿದೆ. ಕೆಲವೆಡೆ ಮಳೆ ಬಾರದ ಕಾರಣ ಮೆಕ್ಕೆಜೋಳ ಒಣಗಿ ಹೋಗುತ್ತಿದ್ದರೆ, ಇಲ್ಲಿ ಬೆಳೆ ಬಂದರೂ ಉಳಿಸಿಕೊಳ್ಳಲು ಆಗುತ್ತಿಲ್ಲವಲ್ಲಾ ಎಂಬ ಸಂಕಟ ರೈತ ಸಮುದಾಯದ್ದಾಗಿದೆ.
ಕ್ರಮ ತೆಗೆದುಕೊಳ್ಳಬೇಕು:
ರೈತ ಸಮುದಾಯವು ಸಂಕಷ್ಟದಲ್ಲಿದೆ. ಗಿಳಿಗಳ (Parrots) ಚಿಲಿಪಿಲಿ, ಅವುಗಳ ಹಾರಾಟ ನೋಡುವುದು ಚೆಂದ.
ಅತಿಯಾದರೆ ಅಮೃತ ಕೂಡ ವಿಷ ಎಂಬಂತೆ ರೈತರು ಗಿಳಿಗಳ ಹಿಂಡು ನೋಡಿ ಖುಷಿ ಪಡುವ ಸ್ಥಿತಿಯಲ್ಲಿಲ್ಲ. ಮೆಕ್ಕೆಜೋಳ ಹಿಂಡಿ ಹೀರುವ ಗಿಳಿಗಳ ಹಿಂಡು ನೋಡುತ್ತಿದ್ದರೆ ಮೆಕ್ಕೆಜೋಳ ಬೆಳೆಗಾರರ ಕರುಳು ಹಿಂಡುವಂತಾಗಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಅದೇ ರೀತಿಯಲ್ಲಿ ಗಿಳಿಗಳ ಕಾಟದಿಂದ ರೈತರಿಗೆ ಮುಕ್ತಿ ಕೊಡಿಸಬೇಕು ಎಂದು ಚನ್ನಗಿರಿಯ ಪ್ರಜಾಕೀಯ ಪಕ್ಷದ ಹೆಚ್. ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ರೈತರು ಹೇಳೋದೇನು…?
ಕಳೆದ ಕೆಲವು ದಿನಗಳಿಂದ ಅಂತೂ ಸಾಕು ಸಾಕಾಗಿ ಹೋಗಿದೆ. ಗಿಳಿಗಳ ಹಿಂಡು ಬಂದು ಹೋದ ಬಳಿಕ ಜಮೀನಿಗೆ ಕಾಲಿಟ್ಟರೆ ಮೆಕ್ಕೆಜೋಳ ಕಾಣಸಿಗುವುದೇ ಇಲ್ಲ. ಅಲ್ಲಿ ಏನಿದ್ದರೂ ಜೋಳ ಇಲ್ಲದ ದಿಂಡುಗಳೇ ಕಣ್ಣಿಗೆ ಬೀಳುತ್ತವೆ. ಸ್ವಲ್ಪವಾದರೂ ಜೋಳ ಬಂತಲ್ಲಾ ಎಂಬ ಖುಷಿಯೂ ಮಾಯವಾಗುತ್ತಿದೆ. ದಿನಕ್ಕೆ ಏನಿಲ್ಲಾ ಅಂದರೂ ಎರಡೂವರೆ ಲಕ್ಷ ಗಿಳಿಗಳು ಬಂದು ಹೋಗುತ್ತಿವೆ. ಮೆಕ್ಕೆಜೋಳ ಬೆಳೆಗೆ ಇನ್ಶೂರೆನ್ಸ್ ಮಾಡಿಸಿದರೆ ಪರಿಹಾರ ಸಿಗಬಹುದು.
ಇಲ್ಲದಿದ್ದರೆ ಹಾಳಾಗಿರುವ ಬೆಳೆಗೆ ಪರಿಹಾರವೂ ಸಿಗುವುದಿಲ್ಲ. ಮೆಕ್ಕೆಜೋಳ ಬೆಳೆದವರ ಗೋಳು ಯಾರೂ ಕೇಳುತ್ತಿಲ್ಲ. ಸೂಕ್ತ ಪರಿಹಾರ ಆದರೂ ನೀಡಬೇಕು. ಇಲ್ಲವೇ ಗಿಳಿಗಳ ಕಾಟಕ್ಕೆ ಮುಕ್ತಿಕೊಡಿಸಬೇಕು ಎಂದು ದೊಡ್ಡಬ್ಬಿಗೆರೆ ಗ್ರಾಮದ ರೈತ ಹಾಲಸ್ವಾಮಿ ಮನವಿ ಮಾಡಿದ್ದಾರೆ.