ಪ್ಯಾರಿಸ್ನಲ್ಲೀಗ ಒಲಿಂಪಿಕ್ಸ್ ಕ್ರೀಡಾಕೂಟ (Olympics 2024) ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಅಖಾಡದಲ್ಲಿ ಸೆಣಸಲು ತೊಡೆ ತಟ್ಟಿ ನಿಂತಿದ್ದಾರೆ.
ಒಲಿಂಪಿಕ್ಸ್ ವೇದಿಕೆಯಲ್ಲಿ ವಿಶ್ವದ ಅಗ್ರ ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಸೆಣಸುವುದನ್ನು ಇಡೀ ವಿಶ್ವವೇ ಉಸಿರು ಬಿಗಿಹಿಡಿದು ನೋಡುತ್ತಿರುತ್ತದೆ. ಇಲ್ಲಿ ಪದಕ ಗಳಿಸುವ ಹುರಿಯಾಳುಗಳ ಸಾಧನೆ, ಮಾನವೀಯತೆಗೆ ಸವಾಲೊಡ್ಡುವ ದೃಶ್ಯಗಳೂ ಹೆಮ್ಮೆಯಿಂದ ಎದೆ ಉಬ್ಬಿಸುವಂತೆ ಮಾಡುತ್ತದೆ. ಇದು ಕೇವಲ ಒಲಿಂಪಿಕ್ಸ್ ಅಲ್ಲ, ಇಡೀ ವಿಶ್ವವೇ ಆಚರಿಸುವ ಅದ್ಧೂರಿ ಕ್ರೀಡಾಜಾತ್ರೆ.
ಕಣದಲ್ಲಿರುವ ವಿಶ್ವಚೇತನಗಳನ್ನ ತಟ್ಟಿ ಎಬ್ಬಿಸಿ, ದಾಖಲೆ ಮುಟ್ಟುವಂತೆ ಪ್ರೇರೇಪಿಸುವ ಅದ್ಬುತ ಅಂಗಳವೂ ಇದಾಗಿದೆ. ಅದರಲ್ಲೂ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅತ್ಯಂತ ವಿಶೇಷವೆಂದೇ ಹೇಳಬಹುದು. ಏಕೆಂದರೆ 1900ರಲ್ಲಿ ಆಧುನಿಕ ಯುಗದ ಒಲಿಂಪಿಕ್ಸ್ ಕೂಟಕ್ಕೆ ನಾಂದಿ ಹಾಡಿದ್ದ ಪ್ಯಾರಿಸ್ನಲ್ಲಿ (Paris) ಈಗ 3ನೇ ಐತಿಹಾಸಿಕ ಒಲಿಂಪಿಕ್ಸ್ ಮೇಳ ನಡೆಯುತ್ತಿರುವುದು ಮತ್ತೊಂದು ವಿಶೇಷ.
ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ವಿಶ್ವದ ಎಲ್ಲಾ ಕ್ರೀಡಾಪಟುಗಳು (Athletes) ಈಗಾಗಲೇ ಪ್ಯಾರಿಸ್ ಅಂಗಳ ತಲುಪಿದ್ದು, ಜುಲೈ 26ರಂದು (ಶುಕ್ರವಾರ) ಅಧಿಕೃತ ಚಾಲನೆ ದೊರೆಯಲಿದೆ. ಭಾರತದಿಂದ ಈ ಬಾರಿ 117 ಕ್ರೀಡಾಪಟುಗಳು ಹಾಗೂ 140 ಮಂದಿ ಕ್ರೀಡಾ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಲಿಂಪಿಕ್ಸ್ ಜಾತ್ರೆಯ ಇತಿಹಾಸ ತಿಳಿಯುವುದು ಅತೀ ಮುಖ್ಯ. ಮೊದಲ ಒಲಿಂಪಿಕ್ಸ್ ಯಾವಾಗ ಶುರುವಾಯ್ತು ಅಂದ್ರೆ ಎಲ್ಲರೂ ಹೇಳೋದು 1896ರಲ್ಲಿ ಗ್ರೀಸ್ನ ರಾಜಧಾನಿ ಅಥೆನ್ಸ್ ನಗರದಲ್ಲಿ ಶುರುವಾಯಿತು ಎಂದು. ಆದ್ರೆ ಕ್ರೀಸ್ತಪೂರ್ವದಲ್ಲೇ ಒಲಿಂಪಿಕ್ಸ್ ಶುರುವಾಗಿತ್ತು ಎಂಬುದಕ್ಕೆ ಪುರಾವೆಗಳು ಇವೆ.
ಹೌದು. ಕೆಲ ದಾಖಲೆಯ ಪ್ರಕಾರ ಮೊದಲ ಒಲಿಂಪಿಕ್ಸ್ ನಡೆದಿದ್ದು, ಕ್ರಿ.ಪೂರ್ವ 776ರಲ್ಲಿ, ಈ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಗೆದ್ದುಕೊಂಡ ಮೊದಲ ಓಟಗಾರ ಒಬ್ಬಬಾಣಸಿಗ. ಅಚ್ಚರಿಯಾದರೂ ನೀವು ಇದನ್ನು ನಂಬಲೇಬೇಕು. ಎಲಿಸ್ ದ್ವೀಪದ ʻಕೊರೋಬಸ್ʼ ಎಂಬ ಹೆಸರಿನ ಈ ಬಾಣಸಿಗ, ʻಸ್ಟೇಡ್ʼ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ. ಆ ಕಾಲದಲ್ಲಿ ಮೊದಲು ಬಂದವರಿಗಷ್ಟೇ ಮನ್ನಣೆ ಸಿಗುತ್ತಿತ್ತು.
ಹಾಗಾಗಿ ಬಹುಮಾನವಾಗಿ ಅವನ ತಲೆಯ ಮೇಲೆ ʻಕೋಟಿನೋಸ್ʼ (ಕಾಡು ಆಲಿವ್ ಮರದ ಎಲೆಗಳನ್ನು ಸೇರಿಸಿ ಮಾಡಿದ ವೃತ್ತಾಕಾರದ ಕಿರೀಟ) ಇಟ್ಟು ಗೌರವಿಸಲಾಗುತ್ತಿತ್ತು. ಕ್ರಿಸ್ತಪೂರ್ವದಲ್ಲಿ ಒಲಿಂಪಿಕ್ಸ್ ಕ್ರೀಡೆ ನಡೆಯುತ್ತಿದ್ದದ್ದು ʻಒಲಿಂಪಿಯಾ’ ಎಂಬ ಬೆಟ್ಟದಲ್ಲಿ. ಆ ಕಾಲದಲ್ಲಿ ಇದು ಗ್ರೀಸ್ನ ಧಾರ್ಮಿಕ ಕೇಂದ್ರವಾಗಿತ್ತು. ಬೆಟ್ಟದ ಮೇಲಿನ ಜೀಯಸ್ನ ಪ್ರಾರ್ಥನಾ ಮಂದಿರ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು ಎಂದೂ ಸಹ ಹೇಳಲಾಗಿದೆ. ಒಲಿಂಪಿಯಾದ ಕ್ರೀಡಾಂಗಣ 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಈ ಕ್ರೀಡಾಂಗಣದ ಸುತ್ತ ಕ್ರೀಡಾಳುಗಳ ತರಬೇತಿಗಾಗಿ ಭವ್ಯ ಕಟ್ಟಡಗಳಿದ್ದವು. ದಂತಕಥೆಗಳ ಪ್ರಕಾರ ಜೀಯಸ್ನ ಮಗ ಹರ್ಕ್ಯುಲಸ್ (ಹೆರಾಕ್ಲಿಸ್) ಈ ಕ್ರೀಡಾಕೂಟ ಆರಂಭಿಸಿದರು ಎಂದು ಹೇಳಲಾಗಿದೆ. ಹೆರಾಕ್ಲಿಸ್ ಈ ಕ್ರೀಡೋತ್ಸವಕ್ಕಾಗಿ ದೇವತೆ ಅಥೆನಾಳ ನೆರವಿನಲ್ಲಿ ಬೆಟ್ಟದ ಮೇಲೆ ಒಲಿಂಪಿಯಾ ದೇವಾಲಯ ಮತ್ತು ವಿಶಾಲ ಕ್ರೀಡಾಂಗಣ ನಿರ್ಮಿಸಿದ. ಆರಂಭದ ಒಲಿಂಪಿಕ್ಸ್ನಲ್ಲಿ ʻಸ್ಟೇಡ್ʼ ಎಂಬ ಓಟದ ಸ್ಪರ್ಧೆ ಮಾತ್ರ ನಡೆಯಿತು. ಪುರುಷರು ಮತ್ತು ಹುಡುಗರಿಗೆ ಮಾತ್ರ ಮೀಸಲಾಗಿತ್ತು.
ಈ ಓಟದ ದೂರವನ್ನು ಸ್ವತಃ ಹರ್ಕ್ಯುಲಸ್ ನಿಗದಿ ಮಾಡಿದ್ದ. ಮುಂದೆ ಪೆಂಟಾಥಾನ್ ಅಂದ್ರೆ ಜಾವೆಲಿನ್ ಎಸೆತ, ದೂರ ನೆಗೆತ, ಡಿಸ್ಕಸ್ ಎಸೆತ, ಓಟ ಮತ್ತು ಕುಸ್ತಿ ಐದು ಸ್ಪರ್ಧೆಗಳು, ಚಾರಿಯಟ್ ರೇಸ್ (ರಥಗಳ ಓಟ) ಮತ್ತು ಮುಷ್ಟಿಯುದ್ಧ ಸ್ಪರ್ಧೆಗಳನ್ನು ಒಲಿಂಪಿಕ್ಸ್ನಲ್ಲಿ ಸೇರಿಸಲಾಗಿತ್ತು. ಗ್ರೀಸ್ನ ಹಲವು ರಾಜ್ಯಗಳ ನಡುವೆ ಆಗಾಗ್ಗೆ ಯುದ್ಧ ನಡೆಯುತ್ತಿತ್ತು. ಆದ್ರೆ ಒಲಿಂಪಿಕ್ಸ್ ಸಂದರ್ಭದಲ್ಲಿ ಶಾಂತಿ ಪಾಲನೆ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಗ್ರೀಕ್ ಭಾಷೆ ಅರಿತ ಯಾವ ಸ್ವತಂತ್ರ ನಾಗರಿಕನೂ ಇಲ್ಲಿ ಭಾಗವಹಿಸಬಹುದಿತ್ತು. ಯಾವುದೇ ತಾರತಮ್ಯವೂ ಇರಲಿಲ್ಲ.
ಕ್ರೀಡಾಂಗಣದಲ್ಲಿ ಸ್ಪರ್ಧಿಗಳು ಮೈಮೇಲೆ ಬಟ್ಟೆ ತೊಡುತ್ತಿರಲಿಲ್ಲ. ಹೀಗಾಗಿ ವಿವಾಹಿತ ಮಹಿಳೆಯರಿಗೆ ಈ ಕ್ರೀಡಾಂಗಣದೊಳಗೆ ಪ್ರವೇಶ ನಿಷಿದ್ಧವಾಗಿತ್ತು. ಆದ್ದರಿಂದ ರಾಜ ಪೆಲೋಪ್ಸ್ನ ಮಡದಿ ಹಿಪ್ಪೋಡಾಮಿಯಾ ಮಹಿಳೆಯರಿಗಾಗಿ ಪ್ರತ್ಯೇಕ ಹೇರಿಯಾ ಕ್ರೀಡೆಗಳನ್ನು ಆರಂಭಿಸಿದಳು. ಈ ಓಟಗಳಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಅವಕಾಶ ಇತ್ತು. 18ನೇ ಶತಮಾನದ ವೇಳೆಗೆ ಗ್ರೀಸ್ ದೇಶ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯದ ಸಾಮಂತ ರಾಷ್ಟ್ರವಾಗಿತ್ತು. ಒಟ್ಟೋಮನ್ಗಳ ವಿರುದ್ಧ ಗ್ರೀಕರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ʻಪೆಲೋಪೊನೀಸ್’ ಎಂಬ ದ್ವೀಪದ ನಡುವೆ ಮರಳಿನಲ್ಲಿ ಒಂದು ಪುರಾತನ ಸ್ತಂಭದ ಅವಶೇಷ ಪತ್ತೆಯಾಗಿತ್ತು. ಜರ್ಮನಿಯ ಆರ್ನ್ಸ್ ಕರ್ಟಿಯಸ್ (1814-1896) ಎಂಬ ಪುರಾತತ್ತ್ವ ಶೋಧಕ, ಈ ಸ್ತಂಭದ ಕೆಳಗೆ ಗ್ರೀಸ್ನ ಗತಕಾಲದ ಇತಿಹಾಸ ಇರಬೇಕು ಎಂದು ಲೆಕ್ಕ ಹಾಕಿದ್ದ. ಅವನ ಸತತ ಪ್ರಯತ್ನದ ಫಲವಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಒಲಿಂಪಿಯಾ ಪಟ್ಟಣ ಮೇಲೆದ್ದು ಬಂತು. ʻಒಲಿಂಪಿಯಾ’ ಎಂಬ ಜಾಗ ನಿಜಕ್ಕೂ ಇತ್ತು ಎಂದು ತಿಳಿದಾಗ ಜಗತ್ತೇ ಬೆರಗಾಗಿತ್ತು.