SUDDIKSHANA KANNADA NEWS/ DAVANAGERE/ DATE-01-06-2025
ದಾವಣಗೆರೆ: ಮಗನನ್ನು ಕಳೆದುಕೊಂಡ ನೋವಿನಲ್ಲೂ ಮಗನ ಸಾವಿನ ಬಳಿಕ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕ ಕಂಡ ಅಪರೂಪದ ಘಟನೆ ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದ ಚಂದ್ರಪ್ಪ, ಸಾಕಮ್ಮನವರ ಹಿರಿಯ ಪುತ್ರ ಸಿ. ಮಂಜುನಾಥ್ (25) ಇತ್ತೀಚಿಗೆ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುವ ಸಮಯದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾದ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆ ಮತ್ತು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಮಂಜುನಾಥ ಗುರುವಾರ ನಿಧನರಾಗಿದ್ದರು.

ಮಂಜುನಾಥನ ನಿಧನ ಹೊಂದಿದ್ದರೂ ಹೃದಯ, ಮೂತ್ರಪಿಂಡ, ಲಿವರ್ , ಕಾರ್ನಿಯಾಗಳನ್ನು ದಾನ ಮಾಡಲು ತೀರ್ಮಾನಿಸಿದ ಚಂದ್ರಪ್ಪ- ಸಾಕಮ್ಮ ಕುಟುಂಬದವರು ಅಂಗಾಂಗ ಕಸಿ ಅವಶ್ಯಕತೆ ಇರುವ ರೋಗಿಗಳಿಗೆ ನೆರವು ಆಗುವ ಮೂಲಕ ಪುತ್ರನ ಸಾವಿನ ದುಃಖದಲ್ಲೂ ಸಾರ್ಥಕವಾಗಿಸಿದ್ದಾರೆ.
ಬೆಂಗಳೂರಿನ ಆರೋಗ್ಯ ಇಲಾಖೆಯ ಜೀವ ಸಾಕ್ಷರತಾ ಸಂಸ್ಥೆಯು ಅಂಗಾಂಗಗಳನ್ನು ಪಡೆದು ಮಂಜುನಾಥನವರ ಕುಟುಂಬದವರಿಗೆ ದೃಢೀಕರಣ ಪತ್ರವನ್ನು ನೀಡಲಾಗಿದೆ. ಮಂಜುನಾಥ ಅಂತ್ಯಕ್ರಿಯೆಯನ್ನು ಮಾದಾಪುರ ಗ್ರಾಮದಲ್ಲಿ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.