ತಿಂಡಿ ತಿನಿಸು ಯಾರಿಗೆ ಇಷ್ಟ ಆಗಲ್ಲ ಹೇಳಿ.. ಬಾಯಿ ರುಚಿ, ನಾಲಗೆ ಚಪಲ ಹೊಸ ಹೊಸ ರುಚಿ ಬೇಕು ಎನ್ನುತ್ತಿರುತ್ತದೆ. ಹೀಗಾಗಿ ಹೊಸ ತಿನಿಸು ಏನಿದೆ ಎಂದು ಜಾಲಾಡುವವರಿಗೇನೂ ಕೊರತೆ ಇಲ್ಲ. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಬಳಿಕವಂತೂ ಹೊಸ ಹೊಸ ಪ್ರಯೋಗಗಳ ವಿಡಿಯೋಗಗಳು ಗಮನಸೆಳೆಯುತ್ತಿರುತ್ತವೆ. ಇಡ್ಲಿ, ದೋಸೆ ಮಾಡುವುದರಿಂದ ಹಿಡಿದು ಪ್ರತಿಯೊಂದರ ಬಗ್ಗೆಯೂ ಮಾಡುವುದು ಹೇಗೆ ಎಂಬ ವಿಡಿಯೋಗಳು ಯೂಟ್ಯೂಬ್‌ನಲ್ಲೂ ಸಾಕಷ್ಟು ಸಿಗುತ್ತವೆ.
ಎಲ್ಲ ವಿಡಿಯೋಗಳೂ ವೈರಲ್ ಆಗುವುದಿಲ್ಲ. ಕೆಲವೇ ಕೆಲವು ಮಾತ್ರ ಗಮನಸೆಳೆಯುತ್ತವೆ. ಅಂಥ ವೈರಲ್ ವಿಡಿಯೋ ಪೈಕಿ ಇದೂ ಒಂದು. ಕಳೆದೆರಡು ದಿನಗಳಿಂದ ಕರ್ನಾಟಕದಲ್ಲಿ ಇದು ಸದ್ದು ಮಾಡಿದೆ.
ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಅಪರಾಜಿತೆ ಎಂಬುವವರು ಮಾಡಿದ್ದ ಟ್ವೀಟ್ ಅನ್ನು ಹರ್ಷಿತಾ (@gharshitha_) ಎಂಬುವವರು ರೀಟ್ವೀಟ್ ಮಾಡಿದ್ದು, ಲೇ ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡ್ತಿದ್ದ ಹಾಗೆ ಹೊಳೆದ ಕಾಮೆಂಟ್ ಇರಬೇಕು ಅದು. ಅವರು ಶೇರ್ ಮಾಡಿದ ವಿಡಿಯೋದ ಹಿನ್ನೆಲೆಯಲ್ಲಿ ಪಂಜಾಬಿ ಮೋಡಿಯ ಹಾಡು ಕೇಳಿದಂತೆ ಭಾಸವಾಗುತ್ತದೆ. ಹಾಗಾಗಿ ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋದು ಉತ್ತರ ಭಾರತೀಯರು ಎಂಬ ನಿರ್ಧಾರಕ್ಕೆ ಬರಲಾಗದು. ಏನೇ ಆಗಲಿ, ಸೇವಂತಿಗೆ ಹೂವನ್ನು ಕೂಡ ಪಕೋಡಾ ಮಾಡೋದಕ್ಕೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಂತೆ ಇದೆ.