SUDDIKSHANA KANNADA NEWS/ DAVANAGERE/DATE:07_08_2025
ದಾವಣಗೆರೆ: ನಗರದ ಹಳೇ ಕುಂದುವಾಡ ಮುಖ್ಯ ರಸ್ತೆ ಜಾಗ ವಿವಾದದ ಸ್ವರೂಪ ಪಡೆದಿದ್ದು, ಇಂದು ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಪರಿಶೀಲನೆಗೆ ಆಗಮಿಸಿದ್ದ ವೇಳೆ ಸಂಚಾರ ಬಂದ್ ಮಾಡಿದ್ದ ವ್ಯಕ್ತಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದು ಪ್ರತಿಭಟನೆಗೆ ತಿರುಗಿದೆ.
ಈ ಸುದ್ದಿಯನ್ನೂ ಓದಿ: ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ: ರೈತರಿಗೆ ಸತ್ಯ ತಿಳಿಸಲು ಕುಂದೂರಿನಲ್ಲಿ ಆ. 9ಕ್ಕೆ ರೈತರ ಬೃಹತ್ ಸಭೆ
ನಗರದ ಹಳೇ ಕುಂದುವಾಡ ಮುಖ್ಯ ರಸ್ತೆಯ ಕೆರೆ ಸಮೀಪದ ಜಾಗ ನನ್ನದು ಎಂದು ಈ ಹಿಂದೆ ರಸ್ತೆಗೆ ಶಿವಕುಮಾರ್ ಎಂಬಾತ ಬೇಲಿ ಹಾಕಿದ್ದರು, ಆ ವೇಳೆ ತಂತಿ ಬೇಲಿಯನ್ನು ಗ್ರಾಮಸ್ಥರು ಕಿತ್ತು ಹಾಕಿದ್ದರು, ಬಳಿಕ ಕೋರ್ಟ್ ನಲ್ಲಿ ಶಿವಕುಮಾರ್ ದಾವೆ ಹೂಡಿದ್ದರು, ಈ ಹಿನ್ನಲೆ ರಸ್ತೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಸಂಚಾರಿ ಮಾರ್ಗ ಗುಂಡಿ ಬಿದ್ದಿತ್ತು,
ಮಳೆ ಬಂದರೆ ರಸ್ತೆ ಕೆರೆಯಂತಾಗುತ್ತಿತ್ತು, ವಿದ್ಯಾರ್ಥಿಗಳು ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು, ಹೀಗಾಗಿ ಪಾಲಿಕೆಗೆ ಗ್ರಾಮಸ್ಥರು, ಮುಖಂಡರು ಒತ್ತುವರಿ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದರು. ಮನವಿ ಹಿನ್ನಲೆ ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ಅಧಿಕಾರಿಗಳ ತಂಡ ಇಂದು ಆಗಮಿಸಿ ಪರಿಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತೆ ರೇಣುಕಾ, ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ, ಈ ಹಿನ್ನಲೆ ವಿವಾದದ ಜಾಗ ಬಿಟ್ಟು ಮಧ್ಯೆ 30 ಅಡಿ ರಸ್ತೆ ನಿರ್ಮಿಸುವುದಾಗಿ ಹೇಳಿದರೂ ಈ ಮಾತನ್ನು ಕೇಳದ ಶಿವಕುಮಾರ್, ಬದಲಿ ರಸ್ತೆ ಮಾಡಿ ಎಂದು ಹೇಳಿದರು.
ಇದರಿಂದ ಕೋಪಗೊಂಡ ಗ್ರಾಮಸ್ಥರು, ಎರಡು ವರ್ಷದಿಂದ ಇದೇ ಕಥೆ ಹೇಳುತ್ತಾ ಬಂದಿದ್ದೀರಿ, ಅವರ ಬಳಿ ಪದೇ ಪದೇ ಮನವಿ ಮಾಡಿಕೊಳ್ಳುವುದು ಯಾಕೆ, ರೂಲ್ಸ್ ಪ್ರಕಾರವೇ ರಸ್ತೆ ಮಾಡಿ ಯಾರು ಬರುತ್ತಾರೊ ನಾವು ನೋಡುತ್ತೇವೆ ಎಂದು
ವಾಗ್ವಾದಕ್ಕೆ ಇಳಿದು ದಿಢೀರ್ ರಸ್ತೆ ಬಂದ್ ಮಾಡಿ ಪ್ರತಿಭಟನೆಗಿಳಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನ ಮನವೊಲಿಸಿದ ಪಾಲಿಕೆ ಆಯುಕ್ತರು, ಪಕ್ಕದ ಜಾಗದ ಮಾಲೀಕ ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, 30 ಅಡಿ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದೇವೆ. ಇದಕ್ಕೆ ಒಪ್ಪಿದ್ದಾರೆ, ಜೊತೆಗೆ ಕೆರೆ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ, ಬಳಿಕ ಅಲ್ಲಿಯೂ ಸಿಸಿ ರಸ್ತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಹುಲ್ಮನಿ ಗಣೇಶ್, ಗ್ರಾಮದ ಮುಖಂಡರಾದ ಮುರುಗೆವ್ವರ್ ಅಣ್ಣಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಡಿಜಿ ಪ್ರಕಾಶ್, ಹೆಚ್ ಜಿ ಮಂಜಪ್ಪ, ಯುವ ಮುಖಂಡರಾದ ಮಧು ನಾಗರಾಜ್, ಪ್ರಭಾಕರ್, ಲಿಂಗರಾಜ್, ಕಿಟ್ಟಪ್ಪ, ಹಾಲಪ್ಪ ನಿಂಗಪ್ಪ, ಅಜಯ್, ಚಂದ್ರು, ಸಿದ್ದೇಶ್, ಗದಿಗೆಪ್ಪ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಗ್ರಾಮಸ್ಥರು ಮತ್ತಿತರರಿದ್ದರು.