SUDDIKSHANA KANNADA NEWS/ DAVANAGERE/DATE:18_08_2025
ದಾವಣಗೆರೆ: ಮನೆಯಲ್ಲಿದ್ದ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ನಡೆದಿದೆ.
READ ALSO THIS STORY: ಬಾಪೂಜಿ ಸಂಸ್ಥೆ ಕಟ್ಟಿದ ಎಸ್ಕೆ ಕೊಟ್ರಬಸಪ್ಪರ ಪ್ರತಿಮೆ ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ: ಎಸ್ಎಸ್ಎಂಗೆ ಯಶವಂತರಾವ್ ಜಾಧವ್ ಸವಾಲ್!
ಗೋವಿನಕೋವಿ ಗ್ರಾಮದ 75 ವರ್ಷದ ಹಾಲಮ್ಮ ಹಲ್ಲೆಗೊಳಗಾದ ವೃದ್ಧೆ. 2 ಲಕ್ಷ ರೂಪಾಯಿ ಮೌಲ್ಯದ ಸುಮಾರು 30 ಗ್ರಾಂ ತೂಕದ 2 ಎಳೆ ಬಂಗಾರದ ಸರ ಕಿತ್ತುಕೊಂಡು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಘಟನೆ ಹಿನ್ನಲೆ:
ಗೋವಿನಕೋವಿ ಗ್ರಾಮದಲ್ಲಿ ಹಾಲಮ್ಮ ಒಬ್ಬರೇ ವಾಸವಿದ್ದರು. ಭಾನುವಾರ ಸಂಜೆ 7. 15 ಸುಮಾರಿನಲ್ಲಿ ಹಾಲಮ್ಮ ಒಬ್ಬರೇ ಮನೆಯಲ್ಲಿದ್ದರು. ಆಗ ಮನೆಯೊಳಗೆ ನುಗ್ಗಿದ ದರೋಡೆಕೋರರು ಆಯುಧಗಳಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಹಾಲಮ್ಮರ ಹಿರಿಯ ಪುತ್ರಿ ಸವಿತಾ ಅವರು ತನ್ನ ಗಂಡ ತೀರ್ಥಲಿಂಗಪ್ಪನ ಜೊತೆಗೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ತಾಯಿಗೆ ಪ್ರಥಮ ಚಿಕಿತ್ಸೆ ನಡೆಯುವಾಗ ಘಟನೆ ಬಗ್ಗೆ ಅರುಣ ಎಂಬಾತ ಮಾಹಿತಿ ನೀಡಿದ್ದಾನೆ.
ಗ್ಯಾಸ್ ಸ್ಟೌವ್ ಮೇಲೆ ಟೀ ಪಾತ್ರೆಯಲ್ಲಿ ಟೀ ಸುಟ್ಟು ಕರಕಲಾಗಿತ್ತು. ಕ್ಷಣ ಗ್ಯಾಸ್ ಆಫ್ ಮಾಡಿ ಅವರನ್ನು ಉಪಚರಿಸಿ ಕೂಗಿಕೊಂಡಾಗ ಅಕ್ಕಪಕ್ಕದವರು ಬಂದರು. ನಂತರ ಅವರ ಕೊರಳಲ್ಲಿ ಯಾವಾಗಲೂ ಧರಿಸುತ್ತಿದ್ದ ಬಂಗಾರದ ಸರ ಇರಲಿಲ್ಲ. ನಂತರ ಎಲ್ಲರೂ ಸೇರಿಕೊಂಡು ಕಾರ್ ನಲ್ಲಿ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದೇವೆ. ಯಾರೋ ಹಾಲಮ್ಮ ಅವರ ಮನೆಯೊಳಗೆ ಅಕ್ರಮವಾಗಿ ನುಗ್ಗಿ ಅವರಿಗೆ ಯಾವುದೋ ಆಯುಧದಿಂದ ತಲೆಗೆ ಹೊಡೆದು ತೀವ್ರಗಾಯಗೊಳಿಸಿ ಅವರ ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿದ್ದಾನೆ.
ಕೂಡಲೇ ಹಾಲಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿರದೇ ಇರುವುದರಿಂದ ಆಕೆಯ ಪುತ್ರಿ ಸವಿತಾ ಅವರು ನ್ಯಾಮತಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.