SUDDIKSHANA KANNADA NEWS/ DAVANAGERE/ DATE:28-12-2023
ದಾವಣಗೆರೆ: ಅಡಿಕೆಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಮತ್ತೆ ಕಳ್ಳತನ ಶುರುವಾಗಿದೆ. ಚನ್ನಗಿರಿ ಸೇರಿದಂತೆ ಜಿಲ್ಲೆಯ ಪ್ರಮುಖ ವಾಣಿಜ್ಯ ಅಡಿಕೆಗೆ ಬಂಪರ್ ಬೆಲೆ ಬರುತ್ತಿದೆ. ವರ್ಷದ ಕೊನೆಯಲ್ಲಿ ಅಡಿಕೆ(Nut) ಪ್ರತಿ ಕ್ವಿಂಟಲ್ ಗೆ 50 ಸಾವಿರ ರೂಪಾಯಿ ಗಡಿಯತ್ತ ಸಾಗುತ್ತಿದೆ. ಆದ್ರೆ, ಈಗ ಅಡಿಕೆ ಖೇಣಿ ಮಾಡಿದವರಿಗೆ ಅಡಿಕೆ ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಚನ್ನಗಿರಿ ತಾಲೂಕಿನಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಈ ತಾಲೂಕನ್ನು ಅಡಿಕೆ ನಾಡು ಅಂತಾನೇ ಕರೆಯಲಾಗುತ್ತದೆ. ಮಾತ್ರವಲ್ಲ, ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಇಲ್ಲಿ ಹೆಚ್ಚಿನವರು ಇದನ್ನೇ ಆಶ್ರಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
Ticket Suspence: ಕಾಂಗ್ರೆಸ್ ನ ಈ ಮೂವರೊಳಗೆ ಒಬ್ಬರಿಗೆ ಟಿಕೆಟ್ ಫಿಕ್ಸ್…? ಹೈಕಮಾಂಡ್ ಲೆಕ್ಕಾಚಾರ ಏನಿದೆ…? ಹೇಗಿದೆ ಗೆಲುವಿಗೆ ರಣತಂತ್ರ…?
ಕಳೆದ ಹದಿನೈದು ದಿನಗಳಿಂದ ಅಡಿಕೆ ಧಾರಣೆಯು ಏರುತ್ತಲೇ ಇದೆ. ಇದು ಕಳ್ಳರ ಕೆಂಗಣ್ಣು ಬೀಳುವಂತೆ ಮಾಡಿದೆ. ಚನ್ನಗಿರಿ ತಾಲೂಕಿನಲ್ಲಿ ಸ್ವಲ್ಪ ತಿಂಗಳಿನಿಂದ ಅಡಿಕೆ ಕಳ್ಳತನ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಶುರುವಾಗಿದ್ದು, ಅಡಿಕೆ ಬೆಳೆಗಾರರು ಮತ್ತು ಖೇಣಿದಾರರ ಆತಂಕಕ್ಕೆ ಕಾರಣವಾಗಿದೆ.
ಸಿಸಿಟಿವಿ ಅಳವಡಿಕೆ:
ಕೆಲ ಅಡಿಕೆ ಖೇಣಿ ಮಾಲೀಕರು ಮನೆ ಮುಂದೆ ಅಥವಾ ಅಡಿಕೆ ಸುಲಿದು ಒಣಗಿಸುವ ಮನೆಗಳಿಗೂ ಸಿಸಿಟಿವಿ ಅಳವಡಿಕೆ ಮಾಡಿಸುತ್ತಿದ್ದಾರೆ. ಮತ್ತೆ ಕೆಲವೆಡೆ ಸಿಸಿಟಿವಿ ಅಳವಡಿಸಿಲ್ಲ. ಅಡಿಕೆ ಕಳ್ಳತನ ಈ ಹಿಂದೆ ಹೆಚ್ಚಾಗಿತ್ತು. ಕಳೆದ ಎಂಟು ತಿಂಗಳ ಹಿಂದಿನಿಂದಲೂ ಕಳವು ಶುರುವಾಗಿದೆ. ತಾಲೂಕಿನವರಿಗಿಂತ ಹೊರಗಿನಿಂದ ಬಂದವರೇ ಹೆಚ್ಚು ಅಡಿಕೆ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದರು. ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳಿಂದ ಕಾರಿನಲ್ಲಿ ಬಂದವರು ಅಡಿಕೆ ಕದ್ದೊಯ್ದಿದ್ದರು. ಚನ್ನಗಿರಿ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಡಿಕೆಯನ್ನೂ ವಶಕ್ಕೆ ಪಡೆದಿದ್ದರು.
ಮತ್ತೆ ಕಳ್ಳತನ ಶುರು:
ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮದ ಅಡಿಕೆ ಖೇಣಿ ಮನೆಯೊಂದರಲ್ಲಿ ಅಡಿಕೆ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಗೋಪ್ಪೇನಹಳ್ಳಿ ಗ್ರಾಮದ ಎಸ್. ಇ. ಚನ್ನಬಸಪ್ಪ ಅವರ ತೋಟದಲ್ಲಿ ಅಡಿಕೆ ಬೇಯಿಸಿ ಒಣಗಿಸಲು ಖೇಣಿಮನೆಯಲ್ಲಿ ಸಂಗ್ರಹ ಮಾಡಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ ಖೇಣಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು 12 ಕೆ.ಜಿ ಅಡಿಕೆ, 1 ತಾಮ್ರದ ಹಂಡೆ, ಮೂರು ಅಡಿಕೆ ಜಾರಡಿ ಸೇರಿದಂತೆ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ್ಯಂತರ ರೂ. ಮೌಲ್ಯದ ಅಡಿಕೆ ಕಳವು:
ಕಳೆದೊಂದು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆ ಕಳವು ಮಾಡಲಾಗಿದೆ. ಅಂದಾಜಿನ ಪ್ರಕಾರ ಇದು ಹೆಚ್ಚುವ ಸಾಧ್ಯತೆ ಇದೆ. ಪೊಲೀಸರ ಮಾಹಿತಿ ಪ್ರಕಾರ ಅಡಿಕೆಯು ಹೆಚ್ಚು ಕಳ್ಳತನವಾಗುತ್ತಿದ್ದು, ಅಡಿಕೆ ಮಾಲೀಕರಿಗೆ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಚನ್ನಗಿರಿ ಪೊಲೀಸರು ಕಳೆದ ಎರಡು ತಿಂಗಳ ಹಿಂದೆ 13 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಅಡಿಕೆ ಧಾರಣೆ ಏರು ಮುಖವಾಗುತ್ತಿದ್ದಂತೆ ಕಳ್ಳರು ಮತ್ತೆ ಕೈಚಳಕ ಶುರುವಿಟ್ಟುಕೊಂಡಿದ್ದಾರೆ.
ಕಣ್ಗಾವಲಿಡುವುದೇ ದೊಡ್ಡ ಸವಾಲು:
ಇನ್ನು ಅಡಿಕೆ ಕಳ್ಳತನ ತಡೆಗೆ ಖೇಣಿ ಮಾಲೀಕರು, ಅಡಿಕೆ ಬೆಳೆಗಾರರು ಎಷ್ಟೇ ಕಣ್ಗಾವಲಿಟ್ಟರೂ ಕಳ್ಳರು ತಮ್ಮ ಖತರ್ನಾಕ್ ಐಡಿಯಾ ಬಳಸಿ ಈ ಕೃತ್ಯ ಎಸಗುತ್ತಿದ್ದಾರೆ. ಸಿಸಿಟಿವಿ, ಅಡಿಕೆ ಕಾವಲಿಗೆ ಜನರನ್ನು ನೇಮಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಪೊಲೀಸರು ಸಹ ಅಡಿಕೆ ಬೆಳೆಗಾರರು ಮತ್ತು ಖೇಣಿದಾರರಿಗೆ ಕೆಲವೊಂದು ಸೂಚನೆ ಕೊಟ್ಟಿದ್ದರು. ಅಡಿಕೆ ಬೇಯಿಸಿದ ನಂತರ ಒಣಗಿಸಲು ಬಿಸಿಲಿಗೆ ಹಾಕಬೇಕಾಗುತ್ತದೆ. ಈ ಕಾರಣಕ್ಕಾಗಿ ಖೇಣಿ ಮನೆಯ ವಿಶಾಲ ಜಾಗದಲ್ಲಿ ಅಡಿಕೆ ಒಣಗಿಸಲು ಹಾಕಲಾಗಿರುತ್ತದೆ. ದಿನದ 24 ಗಂಟೆಯೂ ಕಾವಲು ಕಾಯುವುದು ಕಷ್ಟ. ಸ್ವಲ್ಪ ಕೆಲಸ ಇದೆ ಎಂದುಕೊಂಡು ಹೊರಗೆ ಹೋದರೆ ಸಾಕು ಇದನ್ನೇ ಕಾಯುತ್ತಿದ್ದ ಹಾಗೂ ವಾಚ್ ಮಾಡಿದ್ದ ಕಳ್ಳರು ಅಡಿಕೆ ಕದ್ದೊಯ್ಯುತ್ತಿದ್ದಾರೆ. ಇದು ಅಡಿಕೆ ಬೆಳೆಗಾರರ ನೆಮ್ಮದಿ ಕೆಡಿಸಿದೆ.
ಒಂದೆಡೆ ಮಳೆ ಕಡಿಮೆಯಾದ ಕಾರಣ, ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಅಡಿಕೆ ಫಸಲು ಕಡಿಮೆ ಬಂದಿದೆ. ಹೆಚ್ಚು ಕಡಿಮೆ ಅಡಿಕೆ ಕೊಯ್ಲು ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ ಶೇಕಡಾ 95ರಷ್ಟು ಅಡಿಕೆ ಕೊಯ್ಲಾಗಿದ್ದು, ಬೇಯಿಸಿ ಒಣಗಿಸಿ ಮಾರುಕಟ್ಟೆಗೆ ಅಡಿಕೆ ಬಿಡಬೇಕು. ಆದ್ರೆ, ಹೆಚ್ಚು ದಿನಗಳ ಕಾಲ ಸಂರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಅಡಿಕೆ ದರವೆಷ್ಟು…?
ಪ್ರತಿ ಅಡಿಕೆ ಕ್ವಿಂಟಾಲ್ ಉತ್ತಮ ಗುಣಮಟ್ಟದ ರಾಶಿಗೆ 48705 ರೂಪಾಯಿ ಇದ್ದು, ಹೊಸ ವರ್ಷ ಅಂದರೆ 2024ರಲ್ಲಿ 50 ಸಾವಿರ ರೂಪಾಯಿ ಗಡಿ ದಾಟುವ ವಿಶ್ವಾಸದಲ್ಲಿ ರೈತರಿದ್ದಾರೆ. ಜೊತೆಗೆ ಅಡಿಕೆ ಧಾರಣೆ ಕಡಿಮೆ ಬಂದರೂ 50 ಸಾವಿರ ರೂಪಾಯಿ ಗಡಿ ದಾಟಿದರೆ ರೈತರಿಗೆ ಸ್ವಲ್ಪ ನೆಮ್ಮದಿ ತರಲಿದೆ. ಕಳೆದ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಮುಟ್ಟಿದ್ದ ಅಡಿಕೆ ಕ್ವಿಂಟಲ್ ದರ ಒಂದೇ ತಿಂಗಳಿಗೆ 48 ಸಾವಿರ ರೂಪಾಯಿಗೆ ಕುಸಿದಿತ್ತು. ಆ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ, ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತಿತ್ತು. ಕಳೆದ ಹದಿನೈದು ದಿನಗಳಿಂದ ಅಡಿಕೆ ಧಾರಣೆ ಕುಸಿದಿಲ್ಲ. ಸ್ವಲ್ಪ ಮಟ್ಟಿಗೆ ಏರುಮುಖದಲ್ಲಿ ಸಾಗುತ್ತಿದೆ.
ಪೊಲೀಸರು ಏನು ಮಾಡಬೇಕು…?
ಇಡೀ ತಾಲೂಕಿನ ಅಡಿಕೆ ಬೆಳೆಗಾರರು ಒಣಗಿಸಿದ ಅಡಿಕೆಗೆ ಪೊಲೀಸರು ರಕ್ಷಣೆ ನೀಡಲು ಆಗದು. ರೈತರಿಗೆ ಕೆಲವೊಂದು ಸೂಚನೆ ಕೊಟ್ಟಿದ್ದಾರೆ. ಅಡಿಕೆ ಬೇಯಿಸಿ ಒಣಗಲು ಹಾಕಿದಾಗ ತೀವ್ರ ಎಚ್ಚರ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ದೂರು ನೀಡಿ. ಅಡಿಕೆ ಒಣಗಲು ಹಾಕಿದ ಸುತ್ತಮುತ್ತ ಓಡಾಡುವರ ಬಗ್ಗೆ ನಿಗಾ ಇಡಿ. ಸಿಸಿಟಿವಿಗಳು ಹಾಳಾಗದಂತೆ ಎಚ್ಚರ ವಹಿಸಿ. ಸ್ವಲ್ಪ ಯಾಮಾರಿದರೂ ಕಳ್ಳರು ಕೈಚಳಕ ತೋರುವ ಅಪಾಯ ಇದ್ದು ಮೈಮರೆಯಬೇಡಿ. ಸ್ವಲ್ಪ ಅನುಮಾನ ಬಂದರೂ ಮಾಹಿತಿ ನೀಡಲು ಹಿಂದೇಟು ಹಾಕಬೇಡಿ ಎಂದು ಪೊಲೀಸರು ಅಡಿಕೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ.